ಬೆಂಗಳೂರು: ಶಿಕ್ಷಣ ಇಲಾಖೆಯಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ ನಿಯಂತ್ರಣಕ್ಕೆ ಸಚಿವ ಬಿ ಸಿ ನಾಗೇಶರನ್ನು ವಜಾಗೊಳಿಸುವಂತೆ ರೂಪ್ಸಾ ಸಂಘಟನೆ ಒತ್ತಾಯಿಸಿದೆ. ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ರುಪ್ಸಾ ಸಂಘಟನೆ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಸುದ್ದಿಗೋಷ್ಠಿ ನಡೆಸಿ ಈ ವಿಚಾರವಾಗಿ ವಿವರ ನೀಡಿದ್ದು, ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದ್ದು, ಲಂಚದ ವ್ಯಾಪ್ತಿ ಶೇ.40-50 ರಷ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಡಿಡಿಪಿಐಗಳು ನೇರವಾಗಿ ಲಂಚ ಕೇಳುತ್ತಿದ್ದಾರೆ. ಇದರ ಆಡಿಯೋ ರೆಕಾರ್ಡ್ ಸಹ ಇದೆ. ಡಿಡಿಪಿಐಗೆ 20%, ಬಿಇಒಗೆ 25% ಅಂತ ಕಮಿಷನ್ ತಗೋತಾರೆ. ಇಲಾಖೆಯ ಬಹುತೇಕ ಕೆಲಸಗಳಿಗೆ ಆನ್ಲೈನ್ ವ್ಯವಸ್ಥೆ ಇಲ್ಲ. ಆನ್ಲೈನ್ ವ್ಯವಸ್ಥೆ ತನ್ನಿ ಅಂದ್ರೂ ಅಧಿಕಾರಿಗಳು ಸುಮ್ಮನಿದ್ದಾರೆ. ಆನ್ಲೈನ್ ವ್ಯವಸ್ಥೆ ಇಲ್ಲದೆ ಅಧಿಕಾರಿಗಳು ಲಂಚ ಬಾಕರಾಗುತ್ತಿದ್ದಾರೆ ಎಂದು ದೂರಿದ್ದಾರೆ.
ರುಪ್ಸಾ ಸಂಘಟನೆ 8 ಅಂಶಗಳನ್ನು ಉಲ್ಲೇಖ ಮಾಡಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಆರ್.ಆರ್ ನೀಡಲು ಲಕ್ಷಾಂತರ ರೂ. ಲಂಚ ಪಡೆಯುತ್ತಿರುವ ಆರೋಪ ಮಾಡಿದ್ದು, ಪ್ರತೀ 10 ವರ್ಷಕ್ಕೊಮ್ಮೆ ಮಾನ್ಯತೆ ನವೀಕರಣ ಮಾಡಬೇಕು ಎಂದು ಹೈಕೋರ್ಟ್ ಹೇಳಿದೆ. ಆದರೆ ಪ್ರತಿ ವರ್ಷವೂ ಆರ್.ಆರ್ ಒಡೆಯಬೇಕೆಂದು ಶಿಕ್ಷಣ ಇಲಾಖೆ ಹೇಳುತ್ತಿದೆ. 2020ರಿಂದ ಕಳೆದ 2 ವರ್ಷದಿಂದ ಲಂಚ ಪಡೆಯುವ ಅಧಿಕಾರಿಗಳ ಸಂಖ್ಯೆ ಹೆಚ್ಚಾಗಿದೆ. ಇದೊಂದು ವಿಚಾರವಲ್ಲದೆ ಇನ್ನೂ ಹಲವು ವಿಚಾರಗಳನ್ನು ಪ್ರತ್ಯೇಕವಾಗಿ ಬರೆದು ಕಳುಹಿಸಿದ್ದೇವೆ ಎಂದರು.
ಶಿಕ್ಷಣ ಇಲಾಖೆಯಲ್ಲಿ ಪ್ರತಿಯೊಂದು ಕೆಲಸಕ್ಕೂ ಇಂತಿಷ್ಟು ಲಂಚ ನಿಗದಿ ಆಗಿದೆ. ಶೇ. 30 ರಿಂದ 50ವರೆಗೆ ಇಲ್ಲಿ ಲಂಚ ನೀಡಲೇಬೇಕು. ಲಂಚ ಇಲ್ಲದೆ ಶಿಕ್ಷಣ ಅಧಿಕಾರಿಗಳು ಯಾವುದೇ ಕೆಲಸ ಮಾಡುವುದಿಲ್ಲ. ಶಿಕ್ಷಣ ಸಚಿವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಆಗಿಲ್ಲ. ಶಿಕ್ಷಣ ಸಚಿವ ಬಿ ಸಿ ನಾಗೇಶ್ ಈ ವಿಚಾರಲ್ಲಿ ವಿಫಲರಾಗಿದ್ದಾರೆ. ಈ ಕಾರಣದಿಂದ ಪ್ರಧಾನಿ ನರೇಂದ್ರ ಮೋದಿಯವರು ಈ ಕೂಡಲೇ ಶಿಕ್ಷಣ ಸಚಿವ ನಾಗೇಶ್ವರನ ವಜಾ ಮಾಡಬೇಕು. ರಾಜ್ಯ ಸಚಿವ ಸಂಪುಟದಿಂದ ಅವರನ್ನು ಕೂಡಲೇ ಕೈ ಬಿಡಬೇಕು ಎಂದು ಅಗ್ರಹಿಸಿದ್ದೇವೆ.
ಭ್ರಷ್ಟಾಚಾರದ ವಿರುದ್ಧ ಸದಾ ದನಿ ಎತ್ತುವ ಪ್ರಧಾನಿ ನರೇಂದ್ರ ಮೋದಿ ನಮ್ಮ ವಿಚಾರವನ್ನು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸವಿದೆ. ಇದು ಮೂರನೇ ಬಾರಿ ಪ್ರಧಾನಿಗೆ ಪತ್ರ ಬರೆಯುತ್ತಿದ್ದೇವೆ. ವಜಾಗೊಳಿಸದಿದ್ದರೆ ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ಶೋಕಿ ಮಾಡೋರನ್ನು ಶಿಕ್ಷಣ ಸಚಿವರನ್ನಾಗಿ ಮಾಡುತ್ತಿದ್ದಾರೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ವಿರುದ್ಧ ಲೋಕೇಶ್ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ: ಸಚಿವ ಬಿ ಸಿ ನಾಗೇಶ್