ಬೆಂಗಳೂರು: ಶಿಕ್ಷಣ ಇಲಾಖೆಯ ಆದೇಶದ ಪ್ರಕಾರ, ಹತ್ತನೇ ತರಗತಿಯ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಶೇ.75 ರಷ್ಟು ಹಾಜರಾತಿ ಕಡ್ಡಾಯವಲ್ಲ ಎಂಬ ಅಂಶ ಗೊಂದಲ ಹುಟ್ಟಿಸಿದೆ.
ಈ ಬಗ್ಗೆ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಸ್ಪಷ್ಟನೆ ಕೊಡುವಂತೆ ಅಸೋಸಿಯೇಟೆಡ್ ಮ್ಯಾನೇಜ್ ಮೆಂಟ್ ಆಫ್ ಪ್ರೈಮರಿ ಹಾಗೂ ಸೆಕೆಂಡರಿ ಸ್ಕೂಲ್ಸ್ ಇನ್ ಕರ್ನಾಟಕದ ವತಿಯಿಂದ ಶಿಕ್ಷಣ ಇಲಾಖಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಹತ್ತನೇ ತರಗತಿಗೆ ಜ.1 ರಿಂದ ಶಾಲೆಗೆ ಅಥವಾ ಆನ್ಲೈನ್ ಮೂಲಕ ಪಠ್ಯ ಕಡಿತದೊಂದಿಗೆ ಪರೀಕ್ಷೆಗೆ ಸಿದ್ಧರಾಗಲು ಸೂಚಿಸಲಾಗಿತ್ತು. ಜೊತೆಗೆ ವಿದ್ಯಾರ್ಥಿಗಳು ಅನುಕೂಲವಿದ್ದರೂ ತರಗತಿಗಳಿಗೆ ಸರಿಯಾಗಿ ಹಾಜರಾಗಿಲ್ಲ.
ನಿರಂತರ ಕಲಿಕೆಯಿಂದ ಸ್ವಯಂ ವಂಚಿತರಾಗುತ್ತಿರುವುದು ರಾಜ್ಯದ ಬಹುತೇಕ ಶಾಲೆಗಳ ಶಿಕ್ಷಕರು, ಪೋಷಕರಲ್ಲಿ ಆತಂಕ ಹುಟ್ಟಿಸಿದೆ. ಹೀಗಾಗಿ ಆನ್ಲೈನ್, ಆಫ್ಲೈನ್ ಮೂಲಕವೂ ತರಗತಿ ನಡೆಯುತ್ತಿರುವುದರಿಂದ ಅಧಿಕೃತ ಶಾಲೆ ನಡೆಯುವಂತಹ ಅಂಕಿ ಅಂಶಕ್ಕೆ ಪೂರಕವಾಗಿ ಕನಿಷ್ಟ ಹಾಜರಾತಿಗೆ ಆದೇಶ ನೀಡಿ ಕನಿಷ್ಠ ಗುಣಮಟ್ಟ ಕಲಿಕೆಗೆ ಕ್ರಮ ಕೈಗೊಳ್ಳಬೇಕೆಂದು ಡಿ.ಶಶಿಕುಮಾರ್ ಮನವಿ ಮಾಡಿದ್ದಾರೆ.