ಬೆಂಗಳೂರು : ವೈದ್ಯಕೀಯ ಕಿಟ್ ಖರೀದಿಯಲ್ಲಿ ಅವ್ಯವಹಾರ ತನಿಖೆಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಹೀಗಾಗಿ ಸೂಕ್ತ ತನಿಖೆ ಆಗಲಿ ಎಂದು ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಹಗರಣದ ಬಗ್ಗೆ ಪಬ್ಲಿಕ್ ಅಕೌಂಟ್ ಕಮಿಟಿ ಪ್ರಸ್ತಾಪಿಸಿದೆ. ಮಾಜಿ ಸಚಿವ ಹೆಚ್ ಕೆ ಪಾಟೀಲರು ಇದರ ಬಗ್ಗೆ ಧ್ವನಿ ಎತ್ತಿದ್ದಾರೆ. ಪಿಪಿಇ ಕಿಟ್ ಖರೀದಿ ಸೇರಿ ಎಲ್ಲವೂ ತನಿಖೆಯಾಗಬೇಕು. ಅದಕ್ಕೆ ಹಣ ಎಷ್ಟು ಖರ್ಚಾಗಿದೆ, ಕಿಟ್ ಮೌಲ್ಯವೇನು? ಇದರ ಬಗ್ಗೆ ಕಮಿಟಿ ತನಿಖೆ ಮಾಡಿ ಸತ್ಯಾಂಶವನ್ನ ಹೊರ ಹಾಕಲಿದೆ ಎಂದಿದ್ದಾರೆ.
ಪ್ರಧಾನಿ ಮೋದಿ ಲೇಹ್ ಭೇಟಿ ವಿಚಾರ ಮಾತನಾಡಿ, ಮೋದಿ ಏನೇನು ಮಾಡುತ್ತಾರೆ ಎಂಬುದು, ಅವರ ಮಂತ್ರಿ ಮಂಡಲಕ್ಕೆ ಗೊತ್ತಾಗಲ್ಲ. ಮೊದಲು ರಾಜನಾಥ್ ಸಿಂಗ್ ಹೋಗಲಿದ್ದಾರೆ ಎನ್ನಲಾಗಿತ್ತು. ಈಗ ಮೋದಿಯವರು ತಾವೇ ಹೋಗಿ ಬಂದಿದ್ದಾರೆ. ಹೋಗಿ ಬಂದಾದ ಮೇಲಾದ್ರೂ ವಸ್ತುಸ್ಥಿತಿ ತಿಳಿಸಬೇಕಲ್ಲ. ಜೂನ್ 15ರಂದು ನಡೆದಿರೋದನ್ನ ಜನರಿಗೆ ತಿಳಿಸಬೇಕು.
ಮೊದಲಿನಿಂದಲೂ ನಾವು ಇದನ್ನೇ ಕೇಳ್ತಿದ್ದೇವೆ. ಈಗ ಯಾವ್ಯಾವ ವಿಚಾರ ಜನರ ಮುಂದಿಡ್ತಾರೆ ನೋಡೋಣ. ನಾವು ಒಳ್ಳೆಯ ಸಲಹೆಗಳನ್ನು ಕೊಟ್ಟರೂ, ತಪ್ಪು ಖಂಡಿಸಿದ್ರೂ ಏನೇ ಮಾಡಿದ್ರೂ ದೇಶದ್ರೋಹಿಗಳು ಅಂತಾರೆ ಎಂದರು.
ಒಂದೆಡೆ ಕೋವಿಡ್, ಇನ್ನೊಂದೆಡೆ ಚೀನಾ ಉಪಟಳ. ಇದು ಒಗ್ಗಟ್ಟಾಗಿರಬೇಕಾದ ಸಮಯ. ಹೀಗಾಗಿ ವಾಸ್ತವಾಂಶವನ್ನ ಜನರಿಗೆ ತಿಳಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮಲ್ಲಿಕಾರ್ಜುನ್ ಖರ್ಗೆ ಆಗ್ರಹಿಸಿದರು.