ಬೆಂಗಳೂರು: ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಕೊರೊನಾ ಸೋಂಕು ಪರೀಕ್ಷೆ ಹಾಗೂ ಚಿಕಿತ್ಸೆಯನ್ನು ಸರ್ಕಾರವೇ ಉಚಿತವಾಗಿ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕೊರೊನಾ ಪರಿಸ್ಥಿತಿ ನಿರ್ವಹಣೆ ಕುರಿತ ಕಾಂಗ್ರೆಸ್ ಕಾರ್ಯಪಡೆಯ ಮೊದಲ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಡಿ.ಕೆ.ಶಿವಕುಮಾರ್ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಕೊರೊನಾ ಪರೀಕ್ಷಾ ಕೇಂದ್ರಗಳನ್ನು ಆದಷ್ಟು ಬೇಗ ತೆರೆಯಬೇಕು. ಎಲ್ಲಾ ಕೊರೊನಾ ಸೋಂಕಿತರಿಗೆ ಸರ್ಕಾರವೇ ಉಚಿತವಾಗಿ ಪರೀಕ್ಷೆ ಹಾಗೂ ಚಿಕಿತ್ಸೆ ನೀಡಬೇಕು. ಕೊರೊನಾ ಚಿಕಿತ್ಸೆ ನೀಡಲಾಗುತ್ತಿರುವ ಆಸ್ಪತ್ರೆಗಳಲ್ಲಿ 1000 ವೆಂಟಿಲೇಟರ್ಗಳ ಸೌಲಭ್ಯ ಕಲ್ಪಿಸುವುದಾಗಿ ಸರ್ಕಾರ ಘೋಷಿಸಿತ್ತು. ಈವರೆಗೂ ಅದನ್ನು ಕಲ್ಪಿಸಲಾಗಿಲ್ಲ. ಆದಷ್ಟು ವೆಂಟಿಲೇಟರ್ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕೊರೊನಾಗೆ ಚಿಕಿತ್ಸೆ ನೀಡುತ್ತಿರುವ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ವೈದ್ಯರಿಗೆ ವಿಮಾ ಸೌಲಭ್ಯ ನೀಡಬೇಕು. ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್ ಹಾಗೂ ಗ್ಲೌಸ್ ಮುಂತಾದ ಸುರಕ್ಷಾ ಪರಿಕರಗಳನ್ನು ಉಚಿತವಾಗಿ ಒದಗಿಸಬೇಕು. ಇನ್ನು ಲಾಕ್ಡೌನ್ ಪರಿಣಾಮವಾಗಿ ಜನರು ಆಹಾರ ಸಾಮಾಗ್ರಿಗಳ ಕೊರತೆಯಿಂದ ತತ್ತರಿಸಿ ಹೋಗಿದ್ದು, ಎಲ್ಲಡೆ ಹಾಹಾಕಾರ ಎದ್ದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕ್ಷಿಪ್ರಗತಿಯಲ್ಲಿ ಎಲ್ಲರಿಗೂ ಆಹಾರ ಸಾಮಾಗ್ರಿ ಸಿಗುವಂತೆ ನೋಡಿಕೊಳ್ಳಬೇಕು. ಆಹಾರ ಸಾಮಾಗ್ರಿಗಳನ್ನು ಜನರಿಗೆ ವಿತರಿಸುವಾಗ ಎಪಿಎಲ್ ಹಾಗೂ ಬಿಪಿಎಲ್ ಎಂದು ಭೇದ ಭಾವ ಮಾಡಬಾರದು. ಹಸಿವಿನಿಂದ ಕಂಗೆಟ್ಟಿರುವ ಎಲ್ಲರಿಗೂ ಕೂಡ ಆಹಾರ ಮತ್ತು ಆಹಾರ ಸಾಮಾಗ್ರಿಗಳನ್ನು ಪೂರೈಸಬೇಕು. ಎಲ್ಲಾ ಸಾಲಗಳ ಮಾಸಿಕ ಕಂತುಗಳನ್ನು ಮುಂದೂಡಿರುವ ಬಗ್ಗೆ ಇರುವ ಗೊಂದಲಗಳ ನಿವಾರಣೆಗೆ ಮುಖ್ಯಮಂತ್ರಿಗಳು ಬ್ಯಾಂಕುಗಳ ಪ್ರತಿನಿಧಿಗಳ ಸಭೆ ಕರೆದು ಚರ್ಚಿಸಬೇಕು ಹಾಗೂ ನಿರ್ದಿಷ್ಟ ಸೂಚನೆಗಳನ್ನು ನೀಡಬೇಕು. ಗಡಿ ಭಾಗಗಳಲ್ಲಿ ಸಿಲುಕಿರುವ ವಲಸಿಗರಿಗೆ ಉಚಿತ ಆಹಾರ ಮತ್ತು ಉಳಿದುಕೊಳ್ಳುವ ವ್ಯವಸ್ಥೆ ಕಲ್ಪಿಸಬೇಕು. ನಂತರ ಅವರ ಊರುಗಳಿಗೆ ಅವರನ್ನು ತಲುಪಿಸಲು ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಈ ಎಲ್ಲಾ ಕಾರ್ಯಗಳು ಸಮರೋಪಾದಿಯಲ್ಲಿ ಸಾಗಬೇಕು. ಪಕ್ಷದ ಕಾರ್ಯಕರ್ತರು ಜನರಿಂದ ಯಾವುದೇ ರೀತಿಯ ದೇಣಿಗೆ ಸಂಗ್ರಹಿಸುವಂತಿಲ್ಲ. ಸಂಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸಲು ಪಕ್ಷದ ನಾಯಕರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ತಮ್ಮ ಕೈಲಾದಷ್ಟು ದೇಣಿಗೆಯನ್ನು ಕೊರೊನಾ ಕುರಿತ ಕೆಪಿಸಿಸಿ ಪರಿಹಾರ ನಿಧಿಗೆ ನೀಡಬೇಕು ಎಂದಿದ್ದಾರೆ.
ಇನ್ನು ಕೊರೊನಾ ನಿಯಂತ್ರಣ ಹಾಗೂ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶಗಳು ಮತ್ತು ಸೂಚನೆಗಳನ್ನು ಜನರಿಗೆ ತಲುಪಿಸುವುದು ಮತ್ತು ಆ ಬಗ್ಗೆ ಅವರಿಗೆ ಜಾಗೃತಿ ಮೂಡಿಸಲು ಕಾಂಗ್ರೆಸ್ ಕಾರ್ಯಕರ್ತರಿಗೆ ಸೂಚನೆ ನೀಡಿದರು. ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಧಾರಗಳನ್ನು ಜನರಿಗೆ ತಲುಪಿಸಲು ಬೆಂಗಳೂರಿನ ಕೆಪಿಸಿಸಿ ಕೇಂದ್ರ ಕಚೇರಿಯಲ್ಲಿ ವಾರ್ ರೂಮ್ ತೆರೆಯಲಾಗಿದೆ. ಇದರ ಸಹಾಯವಾಣಿ ಸಂಖ್ಯೆ 8187042379, 9986926365. ಕೋವಿಡ್-19 ಸೋಂಕು ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಧಾರಗಳು ಹಾಗೂ ಘೋಷಣೆಗಳಿಗೆ ಕಾರ್ಯಕರ್ತರು ಸಹಕಾರ ನೀಡಬೇಕು. ಈ ವಿಚಾರವನ್ನು ರಾಷ್ಟ್ರೀಯ ಭಾವನೆಯಿಂದ ನೋಡಬೇಕು ಎಂದು ಕರೆ ನೀಡಿದ್ದಾರೆ .