ಬೆಂಗಳೂರು: 'ನೋ ವ್ಯಾಕ್ಸಿನೇಷನ್, ನೋ ರೇಷನ್, ನೋ ಪೆನ್ಷನ್' ಎಂದು ಹೇಳಿದ ಅಧಿಕಾರಿಯನ್ನು ಮುಖ್ಯಮಂತ್ರಿಗಳು ಕೂಡಲೇ ವಜಾಗೊಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಎರಡು ದಿನಗಳ ಹಿಂದೆ ಮೈಸೂರು ವಿವಿ ಉಪಕುಲಪತಿ ಸಂಜೆ 6 ನಂತರ ಯಾರೂ ಕ್ಯಾಂಪಸ್ನಲ್ಲಿ ಓಡಾಡಬಾರದು ಎಂದು ಆದೇಶ ಹೊರಡಿಸಿದ್ದರು. ಇಂತಹ ಬೇಜವಾಬ್ದಾರಿ ಹೇಳಿಕೆಯನ್ನು ನೀಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೇಂದ್ರದ ಮಾಜಿ ಸಚಿವ ಸಚಿನ್ ಪೈಲಟ್ ಇಂದು ಸುದ್ದಿಗೋಷ್ಠಿ ನಡೆಸಿ ಕೇಂದ್ರ ಹಲವು ಯೋಜನೆಗಳನ್ನು ಪಿಪಿಪಿ ಮೂಲಕ ಖಾಸಗೀಕರಣಗೊಳಿಸಲು ಮುಂದಾಗಿರುವ ವಿಚಾರವನ್ನು ಗಮನಕ್ಕೆ ತಂದಿದ್ದಾರೆ. ಸರ್ಕಾರದ ಆಸ್ತಿಯನ್ನು ಖಾಸಗಿಯವರಿಗೆ ಪರಭಾರೆ ಮಾಡುವ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಮಾಡಿದೆ. "ಯಾರೋ ಸಚಿವರು ಕಾಂಗ್ರೆಸ್‌ನವರು ಇಷ್ಟು ವರ್ಷ ಏನ್ ಮಾಡಿದ್ದಾರೆ ಅಂತ ಕೇಳಿದ್ದಾರೆ. 2,700 ಕಿ.ಮೀ ಹೈವೇ, 28 ಕಿ.ಮೀ ಟ್ರಾನ್ಸ್ ಮಿಷನ್, 800 ಕಿ.ಮೀ ಗ್ಯಾಸ್ ಪೈಪ್‌ಲೈನ್, 2.86 ಕೇಬಲ್‌ಲೈನ್ ಅನ್ನು ಬಿಜೆಪಿಗರು ಮಾರೋಕೆ ಹೊರಟಿದ್ದಾರೆ. ಇದನ್ನೆಲ್ಲಾ ಇವರು ಮಾಡಿದ್ರಾ? 60 ವರ್ಷದಲ್ಲಿ ಇದನ್ನೆಲ್ಲಾ ಮಾಡಿದ್ದು ಕಾಂಗ್ರೆಸ್ ಎಂದರು.
ಕೋವಿಡ್ ಸಂದರ್ಭದಲ್ಲಿ ಅವ್ಯವಹಾರವನ್ನು ಹೊರತುಪಡಿಸಿದರೆ ಬಿಜೆಪಿ ಬೇರೆ ಯಾವುದೇ ಕಾರ್ಯ ಮಾಡಿಲ್ಲ. ಸಮರ್ಥವಾಗಿ ಕೋವಿಡ್ ವ್ಯಾಕ್ಸಿನೇಷನ್ ಕೂಡ ನೀಡಲು ಸಾಧ್ಯವಾಗಿಲ್ಲ. ಇಂತಹ ಸರ್ಕಾರವನ್ನು ಕಿತ್ತೊಗೆಯಲು ಜನ ಮುಂದಾಗಬೇಕು ಎಂದು ಕರೆ ಕೊಟ್ಟರು.
ಅಡುಗೆ ಅನಿಲ ಬೆಲೆ ಹೆಚ್ಚಳ ಕುರಿತು ಮಾತನಾಡಿ, ಆಟೋ ಗ್ಯಾಸ್ ಅಡುಗೆ ಅನಿಲ ಪೆಟ್ರೋಲ್ ಬೆಲೆ ಹೆಚ್ಚಾಗುತ್ತಿದೆ. ಸೆಪ್ಟೆಂಬರ್ 5 ಮತ್ತು 6ರಂದು ನಾನು ನಮ್ಮ ಮುಖಂಡರ ಸಭೆ ಕರೆದಿದ್ದೇನೆ. ಬೆಲೆ ಹೆಚ್ಚಳದ ವಿರುದ್ಧ ನಾವು ಹೋರಾಟ ಕೈಗೊಳ್ಳುತ್ತೇವೆ. ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲಿಯೂ ನಾವು ಜನರಿಗೆ ಎದುರಾಗಿರುವ ಸಮಸ್ಯೆಗಳ ಕುರಿತು ದನಿ ಎತ್ತುತ್ತೇವೆ. ಜನ ನಮಗೆ ಸಹಕಾರ ನೀಡಬೇಕು ಎಂದು ವಿವರಿಸಿದರು.
ಪ್ರತಿಯೊಂದು ವಿಚಾರವನ್ನು ಪಕ್ಷದ ಮುಖಂಡರು ಕುಳಿತು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ. ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಯುತ್ತಿದೆ ಎಂದರು.
ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ಇಂದು ಎಂಬಿ ಪಾಟೀಲ್ ಮಾತನಾಡಿರುವ ವಿಚಾರದ ಕುರಿತು ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಪಕ್ಷದ ಹಿರಿಯ ನಾಯಕರು ಎಲ್ಲಾ ವಿಚಾರಗಳಲ್ಲೂ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.