ಆನೇಕಲ್: ತಾಲೂಕಿನ ಭೂತನಹಳ್ಳಿ ಗ್ರಾಮದ ಮನೆಗಳಿಗೆ ಚಿರತೆ ಓಡಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಸಾದ್ ಎಂಬುವವರ ಮನೆ ಕಂಪೌಂಡ್ ಒಳಗೆ ಬಂದು ಹೋಗಿದೆ. ಕಳೆದ ಒಂದು ವಾರದಲ್ಲಿ ಎರಡನೇ ಬಾರಿ ಮನೆ ಕಂಪೌಂಡ್ ಒಳಗೆ ಚಿರತೆ ಬಂದಿದೆ. ನಾಲ್ಕನೇ ತಾರೀಖಿನಂದು ಮನೆ ಕಾಂಪೌಂಡ್ ಒಳಗೆ ಚಿರತೆ ಬಂದಿತ್ತು. ಈ ವೇಳೆ ಕಟ್ಟಿ ಹಾಕಿದ್ದ ನಾಯಿಯನ್ನು ಚಿರತೆ ಹೊತ್ತೊಯ್ದಿತ್ತು.
ಇದೀಗ ಶುಕ್ರವಾರ ರಾತ್ರಿ ಮತ್ತೆ ಬಂದಿರುವ ಚಿರತೆ ನಾಯಿಗಾಗಿ ಹುಡುಕಾಟ ನಡೆಸಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನೂ ಮನೆಯಲ್ಲಿದ್ದ ನಾಯಿಗಳನ್ನು ಚಿರತೆ ಬರುತ್ತದೆ ಎನ್ನುವ ಕಾರಣಕ್ಕೆ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಲಾಗಿತ್ತು. ಇದೀಗ ಒಂದೇ ಅಲ್ಲ, ನಾಲ್ಕೈದು ಚಿರತೆಗಳು ಈ ಪರಿಸರದಲ್ಲಿ ಇರುವ ಸಾಧ್ಯತೆ ಇದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
ಸಂಜೆಯಾದರೆ ಮನೆಯಿಂದ ಹೊರ ಹೋಗಲು ಜನ ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೋದರೆ ಎಲ್ಲಿ ಚಿರತೆ ದಾಳಿ ಮಾಡುತ್ತದೋ ಎನ್ನುವ ಆತಂಕ ಮೂಡಿದೆ. ಶಾಲೆಗೆ ಮಕ್ಕಳನ್ನು ಕಳುಹಿಸಲು ಸಹ ಗ್ರಾಮಸ್ಥರು ಹಿಂಜರಿಯುತ್ತಿದ್ದಾರೆ. ಅರಣ್ಯಾಧಿಕಾರಿಗಳು ಚಿರತೆಯನ್ನು ಹಿಡಿಯುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಹಾವೇರಿ: ರಸ್ತೆ ಬದಿಯಲ್ಲಿ ಚಿರತೆ ಪ್ರತ್ಯಕ್ಷ.. ಭೀತಿಗೊಳಗಾದ ಜನ