ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ನ್ಯಾಯಸಮ್ಮತವಾಗಿ ನಡೆಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಹೈಕೋರ್ಟ್, ಪ್ರಕರಣ ಸಂಬಂಧ ದಾಖಲಿಸಿರುವ ಎರಡು ಎಫ್ಐಆರ್ಗಳ ತನಿಖಾ ಪ್ರಗತಿ ವರದಿ ಸಲ್ಲಿಸುವಂತೆ ಎಸ್ಐಟಿಗೆ ನಿರ್ದೇಶಿಸಿದೆ.
ಸಿಡಿ ಪ್ರಕರಣವನ್ನು ಸಿಬಿಐ ತನಿಖೆ ವಹಿಸಬೇಕು ಹಾಗೂ ಹೈಕೋರ್ಟ್ ಆ ತನಿಖೆಯ ಮೇಲ್ವಿಚಾರಣೆ ಮಾಡಬೇಕು ಎಂದು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸ್ತಕಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು.
ಈ ವೇಳೆ ವಿಶೇಷ ತನಿಖಾ ತಂಡದ ಪರ ವಕೀಲರು ಪ್ರಕರಣದ ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಪೀಠಕ್ಕೆ ಸಲ್ಲಿಸಿದರು. ಬಳಿಕ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಮಾಹಿತಿ ನೀಡಿ, ಪ್ರಕರಣದ ಕುರಿತು ಪೋಷಕರು ಸಲ್ಲಿಸಿದ್ದ ದೂರಿನಲ್ಲಿ ಬಿ ರಿಪೋರ್ಟ್ ಸಲ್ಲಿಸಲಾಗಿದೆ.
ಯುವತಿ ನೀಡಿದ ದೂರಿನ ತನಿಖೆಯು ಅಂತಿಮ ಹಂತದಲ್ಲಿದೆ. ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಈವರೆಗೂ ಸಿಕ್ಕಿಲ್ಲ ಎಂದರು. ರಮೇಶ್ ಜಾರಕಿಹೊಳಿ ಪರ ಹಾಜರಿದ್ದ ಹಿರಿಯ ವಕೀಲ ಸಿ.ವಿ ನಾಗೇಶ್ ವಾದ ಮಂಡಿಸಿ, ಸಿಬಿಐ ತನಿಖೆ ಕೋರಿ ಮೂರನೇ ವ್ಯಕ್ತಿಗಳು ಅರ್ಜಿ ಸಲ್ಲಿಸಿದ್ದಾರೆ.
ತನಿಖೆ ಬಗ್ಗೆ ಮೂರನೇ ವ್ಯಕ್ತಿಗಳು ನಿರ್ಧರಿಸಬಾರದು. ಹೀಗಾಗಿ, ಅರ್ಜಿಗಳನ್ನು ವಿಚಾರಣೆಗೆ ಪರಿಗಣಿಸುವ ಅಗತ್ಯವಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ನ್ಯಾಯಸಮ್ಮತ ತನಿಖೆ ನಡೆಸುವುದು ನ್ಯಾಯಾಲಯದ ಉದ್ದೇಶ. ನ್ಯಾಯಸಮ್ಮತ ತನಿಖೆ ಇಷ್ಟವಿಲ್ಲವೇ? ಅರ್ಜಿಗಳಿಗೆ ನೀವು ಆಕ್ಷೇಪಿಸಿದರೆ ನ್ಯಾಯಾಲಯವು ಹಾಗೆ ಭಾವಿಸಬೇಕಾಗುತ್ತದೆ ಎಂದು ಮೌಖಿಕವಾಗಿ ನುಡಿಯಿತು.
ಬಳಿಕ, ಮುಚ್ಚಿದ ಲಕೋಟೆ ತೆರೆದು ವರದಿ ಪರಿಶೀಲಿಸಿದ ಪೀಠ, ತನಿಖಾ ವರದಿಗೆ ಎಸ್ಐಟಿ ಮುಖ್ಯಸ್ಥರು ಸಹಿ ಹಾಕಿಲ್ಲವೇಕೆ ಎಂದು ಪ್ರಶ್ನಿಸಿತು. ಎಜಿ ಉತ್ತರಿಸಿ, ಎಸ್ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ವೈದ್ಯಕೀಯ ರಜೆಯಲ್ಲಿದ್ದಾರೆ. ಹೀಗಾಗಿ ವರದಿಗೆ ಸಹಿ ಹಾಕಿಲ್ಲ ಎಂದರು.
ಸಮರ್ಥನೆ ಒಪ್ಪದ ಪೀಠ, ವರದಿ ಸಲ್ಲಿಸುವಾಗ ಎಸ್ಐಟಿ ಮುಖ್ಯಸ್ಥರ ಸಹಿ ಇರಬೇಕು. ಇಲ್ಲವೇ ಉಸ್ತುವಾರಿ ಮುಖ್ಯಸ್ಥರ ಸಹಿ ಇರಬೇಕು ಅಥವಾ ಮುಖ್ಯಸ್ಥರ ಒಪ್ಪಿಗೆ ಪಡೆದ ಅಧಿಕಾರಿ ಸಹಿಯಾದರೂ ಇರಬೇಕು ಎಂದು ಸೂಚಿಸಿತು.
ಅಂತಿಮವಾಗಿ, ಪ್ರಕರಣದ ಯುವತಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಬರೆದಿರುವ ಪತ್ರದ ಸತ್ಯಾಸತ್ಯತೆ ಪರಿಶೀಲಿಸಬೇಕು. ಈ ಸಂಬಂಧ ಜೂ.17 ರೊಳಗೆ ವರದಿ ಸಲ್ಲಿಸಬೇಕು ಎಂದು ಎಸ್ಐಟಿಗೆ ಸೂಚಿಸಿ ವಿಚಾರಣೆಯನ್ನು ಜೂ.18ಕ್ಕೆ ಮುಂದೂಡಿತು.