ಬೆಂಗಳೂರು: ಅತೃಪ್ತರು ಇದ್ದರೆ ಅಂತಹವರನ್ನು ಅವರ ಪಾಡಿಗೆ ಬಿಟ್ಟು ಬಿಡಬೇಕು. ಮೈತ್ರಿ ನಾಯಕರು ಮನವೊಲಿಸುವ ಕೆಲಸ ಮಾಡಬಾರದು ಎಂದು ಮಾಜಿ ಶಾಸಕ ವೈ ಎಸ್ ವಿ ದತ್ತಾ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಆನಂದ್ ಸಿಂಗ್, ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ರಾಜೀನಾಮೆ ನೀಡುವುದೊಂದೇ ಪರಿಹಾರವಲ್ಲ. ಕಾಂಗ್ರೆಸ್-ಜೆಡಿಎಸ್ನಲ್ಲಿ ಯಾರೂ ಅತೃಪ್ತರಿಲ್ಲ. ಇಬ್ಬರೂ ಬೇರೆ ಬೇರೆ ವಿಚಾರಗಳಿಗೆ ರಾಜೀನಾಮೆ ಕೊಟ್ಟಿದ್ದಾರೆ ಎಂದರು.
ಸಿಎಂ ವಿದೇಶಕ್ಕೆ ಹೋದಾಗ ರಾಜೀನಾಮೆ ಕೊಡಿ, ಬಿಸಿ ಮುಟ್ಟಿಸಬಹುದು ಎಂದು ಯಾರಾದರೂ ಹೇಳಿರಬೇಕು. ಅದಕ್ಕೇ ರಾಜೀನಾಮೆ ಕೊಟ್ಟಿರಬಹುದು ಎಂದು ದತ್ತಾ ಅಭಿಪ್ರಾಯಪಟ್ಟರು.
ಅತೃಪತ್ತರ ಚಟುವಟಿಕೆ ಬಗ್ಗೆ ಮೈತ್ರಿ ನಾಯಕರು ದಿಟ್ಟ ನಿರ್ಧಾರ ಕೈಗೊಳ್ಳಬೇಕು. ನಾವು ಯಾರನ್ನೂ ಓಲೈಕೆ ಮಾಡಲ್ಲ ಅಂತ ದಿಟ್ಟ ನಿರ್ಧಾರ ಕೈಗೊಳ್ಳಬೇಕು. ಅವರ ಆತ್ಮಸಾಕ್ಷಿಗೆ ಬಿಟ್ಟು ಸುಮ್ಮನಾಗಬೇಕು. ಸುಮ್ಮನೆ ತೇಪೆ ಹಾಕುವ ಕೆಲಸ ಮಾಡಬಾರದು ಎಂದು ಸಲಹೆ ನೀಡಿದರು.
ಮೈತ್ರಿ ಸರ್ಕಾರ ಸಿಎಂ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಇನ್ನೂ ನಾಲ್ಕು ವರ್ಷ ಇರಲಿದೆ. ಜೆಡಿಎಸ್ ವರಿಷ್ಠ ದೇವೇಗೌಡರು ಮಧ್ಯಂತರ ಚುನಾವಣೆ ಬರುತ್ತದೆ ಅಂತ ಹೇಳಿಲ್ಲ. ಅವರು ಮಾತನಾಡಿರುವುದು ಮುಂಬರುವ ನಗರಸಭೆ, ಪುರಸಭೆ, ಜಿಲ್ಲಾ ಪಂಚಾಯತ್ ಹಾಗೂ ಪಾಲಿಕೆ ಚುನಾವಣೆ ಬಗ್ಗೆ ಎಂದು ವೈಎಸ್ವೈ ದತ್ತಾ ಸಮರ್ಥನೆ ನೀಡಿದ್ದಾರೆ.