ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ರಾಷ್ಟ್ರೀಯ ಮಾಧ್ಯಮಗಳಲ್ಲಿ ಬಂದಿರುವ ವರದಿ ಸತ್ಯಕ್ಕೆ ದೂರವಾಗಿದೆ. ಇದೆಲ್ಲಾ ಕೇವಲ ಮಾಧ್ಯಮಗಳ ಸೃಷ್ಟಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಬದಲಾವಣೆ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಆದರೆ, ಇದೊಂದು ಶುದ್ಧ ಸುಳ್ಳು, ವದಂತಿ ಮಾತ್ರ, ಅಂತಹ ವಾತಾವರಣ ಇಲ್ಲಿ ಇಲ್ಲ ಎಂದು ನಾಯಕತ್ವ ಬದಲಾವಣೆ ವಿಷಯವನ್ನು ಸಿಎಂ ತಳ್ಳಿ ಹಾಕಿದರು.
ಕಾಂಗ್ರೆಸ್ಗೆ ಯಾರೂ ಹೋಗಲ್ಲ : ಬಿಜೆಪಿ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿರುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಸಿದ್ದರಾಮಯ್ಯ ಮಾತಾಡಿರೋದು ದೊಡ್ಡ ಸುಳ್ಳು, ಯಾರು ಬರುತ್ತಾರೆ ಅನ್ನೋ ನಿಮ್ಮ ಪ್ರಶ್ನೆಗೆ ಅವರ ಬಳಿ ಉತ್ತರ ಇಲ್ಲ. ಇದರಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ಆಂತರಿಕ ಪೈಪೋಟಿ ಇದೆ.
ಡಿಕೆಶಿ ಸುದ್ದಿಗೋಷ್ಠಿ ನಡೆಸಿ ಮಾತಾಡಿ, ಅವರು ಬರುತ್ತಾರೆ, ಇವರು ಬರುತ್ತಾರೆ ಅಂತಾರೆ. ಇದನ್ನು ನೋಡಿದ ಸಿದ್ದರಾಮಯ್ಯ ಅಭದ್ರತೆಯಿಂದ ಅವರು ಬರುತ್ತಾರೆ. ಇವರು ಬರುತ್ತಾರೆ ಅಂತಾರೆ, ಇವರ ತಿಕ್ಕಾಟದಿಂದ ಬಹಳ ಜನರು ಕಾಂಗ್ರೆಸ್ ಬಿಡುತ್ತಾರೆ ವಿನಃ ಕಾಂಗ್ರೆಸ್ ಸೇರಲ್ಲ, ಇಲ್ಲಿಂದ ಅಲ್ಲಿಗೆ ಯಾರು ಹೋಗುವ ಪ್ರಶ್ನೆಯೇ ಇಲ್ಲ ಎಂದು ಟಾಂಗ್ ನೀಡಿದರು.
ಯುಪಿಯಲ್ಲಿ ಕಾಂಗ್ರೆಸ್ಗೆ ನೆಲೆಯೇ ಇಲ್ಲ, ಪಂಜಾಬ್ನಲ್ಲಿ ಅಧಿಕಾರ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ, ಈ ಐದು ರಾಜ್ಯ ಚುನಾವಣೆ ಆದ ಮೇಲೆ ಕಾಂಗ್ರೆಸ್ ರಾಷ್ಟ್ರೀಯ ಮಟ್ಟದಲ್ಲಿ ಅಪ್ರಸ್ತುತ ಆಗಲಿದೆ. ಯಾವಾಗ ಅಪ್ರಸ್ತುತ ಆಗುತ್ತೋ ಅದರ ಕರಿನೆರಳು ರಾಜ್ಯದ ಕಾಂಗ್ರೆಸ್ಗೂ ಆಗುತ್ತದೆ. ಈಗ ಆಗುತ್ತಿರುವುದೆಲ್ಲಾ ಅವರವರ ಆಂತರಿಕ ಪೈಪೋಟಿ ಅಷ್ಟೇ.. ಇದಕ್ಕೆ ಯಾವುದೇ ಸತ್ಯವೂ ಇಲ್ಲ, ವಾಸ್ತವಾಂಶವೂ ಇಲ್ಲ. ಭೂಮಿಕೆಯೂ ಇಲ್ಲ ಎಂದು ಆಪರೇಷನ್ ಹಸ್ತಕ್ಕೆ ವ್ಯಾಖ್ಯಾನ ನೀಡಿದರು.
ಇದನ್ನೂ ಓದಿ: ಸಮಸ್ತ ಕನ್ನಡಿಗರಿಗೆ ಗಣರಾಜ್ಯೋತ್ಸವದ ಶುಭ ಕೋರಿದ ಸಿಎಂ ಬಸವರಾಜ ಬೊಮ್ಮಾಯಿ
ರಮೇಶ್ ಜಾರಕಿಹೊಳಿ ಜೊತೆ ಯಾರು ಸಂಪರ್ಕದಲ್ಲಿದ್ದಾರೆ ಅನ್ನೋದನ್ನ ಅವರಿಂದ ಕೇಳಿ ವಿಚಾರ ಮಾಡುತ್ತೇನೆ. ತಮ್ಮ ಜೊತೆ ಕೈ ಶಾಸಕರು ಸಂಪರ್ಕದಲ್ಲಿರುವ ವಿಚಾರ ಸುಳ್ಳು, ನಾನೊಬ್ಬ ಜವಾಬ್ದಾರಿ ಸ್ಥಾನದಲ್ಲಿದ್ದೇನೆ. ಬೇರೆಯವರ ತರ ನಾನು ಬೇಜವ್ದಾರಿಯಾಗಿ ಮಾತನಾಡೋಕೆ ಹೋಗಲ್ಲ ಎಂದು ಸಿಎಂ ಹೇಳಿದರು.
ಅತಂತ್ರವಾದರೆ ಸ್ವತಂತ್ರ ಎನ್ನುವುದು ಹೆಚ್ಡಿಕೆ ಥಿಯರಿ : ಮುಂದಿನ ಚುನಾವಣೆಯಲ್ಲಿ ನಾವೇ ಬೇಕು ಎಂಬ ಹೆಚ್ಡಿಕೆ ಹೇಳಿಕೆ ವಿಚಾರ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಇದು ಅವರ ಸದಾಸೆ, ಯಾವಾಗಲೂ ಹಾಗೆಯೇ ಇರುತ್ತದೆ. ಇದು ಹೊಸದೇನು ಅಲ್ಲ, ಯಾರಾದರೂ ಅತಂತ್ರ ಆದರೆ ನಾವು ಸ್ವತಂತ್ರ ಆಗುತ್ತೇವೆ ಅನ್ನೋದು ಅವರ ಆಸೆ. ಅದು ಅವರಿಗೆ ಮೊದಲಿನಂದಲೇ ಇದೆ ಅಂತಾ ಕುಮಾರಸ್ವಾಮಿಗೆ ನಗೆ ಮೂಲಕ ಟಾಂಗ್ ಕೊಟ್ಟರು.
ಗ್ರಾಮ ಒನ್ ಯಶಸ್ವಿಗೆ ಪ್ರಯತ್ನ : ಇವತ್ತು ನಮ್ಮೆಲ್ಲರ ಕರ್ತವ್ಯವನ್ನು ನೆನಪು ಮಾಡಿಕೊಳ್ಳುವ ದಿನ. ಜನರಿಂದ ಜನರಿಗೋಸ್ಕರ, ಜನರ ಸಲುವಾಗಿರುವ ನಮ್ಮ ಸರ್ಕಾರ, ಇದೀಗ ಗ್ರಾಮ ಒನ್ ಯೋಜನೆಯನ್ನು ರೂಪಿಸಿದೆ. ತಾಂತ್ರಿಕತೆಯಿಂದ ಕೂಡಿರುವ ಯೋಜನೆ ಇದಾಗಿದೆ. ಮಧ್ಯವರ್ತಿಗಳು, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಈ ಯೋಜನೆ ಸಹಕಾರಿ.
ಬ್ಯಾಂಕಿಂಗ್, ಆಧಾರ ಕಾರ್ಡ್, ಆಯುಷ್ಮಾನ್ ಕಾರ್ಡ್ ಸೇರಿದಂತೆ 100 ಸೇವೆ ಇರುವ ಯೋಜನೆ. ಆದರೆ, ಸದ್ಯಕ್ಕೆ 20 ಸೇವೆಗಳನ್ನು ಹೊಂದಿರುವ ಯೋಜನೆ ಆಗಿದೆ. ಇವಾಗ 12 ಜಿಲ್ಲೆಗಳಲ್ಲಿ 3,624 ಗ್ರಾಮಗಳಲ್ಲಿ ಮಾಡಿದ್ದೇವೆ. ಮಾರ್ಚ್ ಅಂತಿಮದೊಳಗೆ ಎಲ್ಲಾ ಗ್ರಾಮಗಳಿಗೆ ಇದು ವಿಸ್ತರಣೆ ಆಗಲಿದೆ. ಗ್ರಾಮ ಒನ್ ನಡೆಸುವವರು ತಾಂತ್ರಿಕ ಹಾಗೂ ಕಾನೂನಿನ ಬಗ್ಗೆ ಅರಿವು ಮೂಡಿಸಲು ಸೂಚನೆ ನೀಡಿದ್ದೇನೆ ಎಂದರು.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
12 ಜಿಲ್ಲೆಗಳಲ್ಲಿ ಇಂದು ಮಾತಾಡಿದಾಗ ಶಾಸಕರು, ಸಚಿವರು ಇದ್ದರು. ಅಲ್ಲೇ ಹಲವು ಸರ್ಟಿಫಿಕೇಟ್ಗಳನ್ನು ಫಲಾನುಭಗಳಿಗೆ ಕೊಟ್ಟರು. ಇದು ಒಂದು ದೊಡ್ಡ ಕ್ರಾಂತಿಯಾಗಿದೆ. ಈ ಯೋಜನೆ ಪೂರ್ಣ ಆದರೆ ಜನರಿಗೆ ಮಾನಸಿಕವಾಗಿ ನೆಮ್ಮದಿ ಸಿಗುತ್ತದೆ. ಇದು ಯಶಸ್ಸು ಆಗಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇವೆ. ಇದು ಯಶಸ್ವಿಯಾಗಲು ತಹಶೀಲ್ದಾರ್, ಡಿಸಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡಿ ಚರ್ಚೆ ಮಾಡುತ್ತೇನೆ ಎಂದರು.