ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿ ಸದ್ಯ ಮಡಿವಾಳದ ಎಫ್ಎಸ್ಎಲ್ ಕಚೇರಿಯ ತನಿಖಾ ತಂಡದ ವಶದಲ್ಲಿದ್ದಾನೆ. ನ್ಯಾಯಾಲಯದ ಆದೇಶದಂತೆ ರವಿ ಪೂಜಾರಿ ಭೇಟಿಗೆ ಆತನ ಪರ ವಕೀಲರಾದ ದಿಲ್ ರಾಜ್ ಆಗಮಿಸಿದ್ದಾರೆ.
ದಿಲ್ ರಾಜ್ ನ್ಯಾಯಾಧೀಶರ ಮುಂದೆ ನಿನ್ನೆ ಕೆಲವು ಮನವಿ ಮಾಡಿದ್ದರು. ಅವರಿಗೆ ಸಕ್ಕರೆ ಕಾಯಿಲೆ ಹಾಗೂ ಹೃದಯ ಸಂಬಂಧಿ ಸಮಸ್ಯೆ ಇದೆ. ಹೀಗಾಗಿ ವಿಚಾರಣೆ ವೇಳೆ ಆತನ ಜೊತೆ ಇರಲು ಅನುಮತಿ ಕೋರಿದ್ದರು. ಆದರೆ, ನ್ಯಾಯಾಲಯವೂ ಸದಾ ಕಾಲ ವಕೀಲರ ಜೊತೆಯಲ್ಲೇ ವಿಚಾರಣೆ ನಡೆಸಲು ಸಾಧ್ಯವಿಲ್ಲದ ಕಾರಣ, ಪ್ರತಿ ದಿನ ಇಪ್ಪತ್ತು ನಿಮಿಷಗಳ ಕಾಲ ಭೇಟಿ ಆಗಿ ಮಾತನಾಡಲು ಅವಕಾಶ ನೀಡಿತ್ತು. ಸದ್ಯ ವಕೀಲ ದಿಲ್ ರಾಜ್ ರವಿ ಪೂಜಾರಿ ಭೇಟಿಗೆ ಬಂದಿದ್ದಾರೆ. ಆದರೆ, ಇನ್ನೂ ಪೊಲೀಸರು ಭೇಟಿಗೆ ಅವಕಾಶ ನೀಡಿಲ್ಲ.
ಇಷ್ಟು ದಿನ ಎಲ್ಲಿದ್ದ ಭೂಗತ ಪಾತಕಿ?:
ರವಿ ಪೂಜಾರಿ ಆಫ್ರಿಕಾದ ಬುರ್ಕಿನಾಫಾಸೋ ಪ್ರದೇಶದಲ್ಲಿದ್ದ. ಆತ ಅಲ್ಲಿ ಅಡಗಿದ್ದೇ ಒಂದು ಇಂಟ್ರೆಸ್ಟಿಂಗ್ ಕಹಾನಿ. ಅಷ್ಟಕ್ಕೂ ಈ ಬುರ್ಕಿನಾಫಾಸೋ ಮಹತ್ವ ಏನಂದ್ರೆ. ಈ ಪ್ರದೇಶಕ್ಕೆ ತನ್ನದೇ ಆದ ಮಹತ್ವವಿದೆ. ಇಲ್ಲಿ ನೆಲೆಸಿದ ಜನ ಅತಿ ಹೆಚ್ಚು ಸಂಯಮ ತಾಳ್ಮೆಯುಳ್ಳಂತವರು. ಕೆಲ ಮೂಲಗಳ ಪ್ರಕಾರ ಈ ಪ್ರದೇಶದಲ್ಲಿರುವ ಜನ ಅತೀ ಹೆಚ್ಚು ಸಂಯಮ, ತಾಳ್ಮೆ ಉಳ್ಳವರಾಗಿದ್ದು, ಅವರನ್ನು ''ಹಾನರೇಬಲ್ ಪೀಪಲ್'' ಅಂತಾನೂ ಕರೆಯಲಾಗುತ್ತೆ.
ಅಲ್ಲದೇ ಈ ಪ್ರದೇಶದ ಜನ ಯಾರೇ ಬಂದರೂ ಪ್ರೀತಿಯಿಂದ ಸ್ವೀಕರಿಸ್ತಾರಂತೆ. ಯಾರ ಬಗ್ಗೆಯೂ ಏನೂ ಕೇಳೋಕೆ ಹೋಗೋದಿಲ್ವಂತೆ. ಸಾಮಾನ್ಯವಾಗಿ ಯಾರಾದ್ರೂ ಹೊಸಬರು ಬಂದ್ರೆ ಕೆಲ ದೇಶಗಳು ಅವರ ಹಿನ್ನೆಲೆ ಕೆದಗುತ್ತವೆ. ಆದರೆ, ಇಲ್ಲಿ ಹಾಗೆಲ್ಲ ಇಲ್ಲ, ಯಾರೇ ಬಂದ್ರೂ ಏನೂ ಕೇಳದೆ ತಮ್ಮಲ್ಲಿ ಒಬ್ಬರು ಎಂಬಂತೆ ಸ್ವೀಕರಿಸ್ತಾರಂತೆ. ಇದು ಈ ಭೂಗತ ದೊರೆಗೆ ಅಸ್ತ್ರವಾಗಿತ್ತು.
ಆದರೆ, ಅಲ್ಲಿನ ಜನರನ್ನ ನೋಡಿ ಬುದ್ಧಿ ಕಲಿಯದ ರವಿ ಪೂಜಾರಿ, ಹೋಟೆಲ್ನಲ್ಲಿ ಕೂತಲ್ಲೇ ಸುಪಾರಿ ಕೊಡ್ತಿದ್ದ ಕೆಲಸ ಮಾಡ್ತಿದ್ನಂತೆ. ಅಂದಹಾಗೆ ಈ ಬುರ್ಕಿನಾಫಾಸೋ ಅನ್ನೋ ಪ್ರದೇಶದಲ್ಲಿ ಕೇವಲ ರವಿಪೂಜಾರಿಯಷ್ಟೇ ಅಲ್ಲ ಇನ್ನುಳಿದ ಭೂಗತ ದೊರೆಗಳು ವಾಸವಿದ್ರಂತೆ ಅನ್ನೋ ಅಂಶ ತಿಳಿದು ಬಂದಿದೆ.