ಬೆಂಗಳೂರು: ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ಆರೋಪದಡಿ ಅರಣ್ಯಾಧಿಕಾರಿಗಳ ವಿರುದ್ಧ ವಕೀಲ ಎಸ್. ಉಮೇಶ್ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ಇತ್ತೀಚೆಗೆ ಹುಲಿ ಉಗುರು ಮಾದರಿಯ ಪೆಂಡೆಂಟ್ ಧರಿಸಿದ್ದ ಪ್ರಕರಣ ಸಂಬಂಧ ವರ್ತೂರು ಸಂತೋಷ್ ಎಂಬವರನ್ನು ಬಂಧಿಸಲಾಗಿತ್ತು.
ವರ್ತೂರು ಸಂತೋಷ್ ಪ್ರಕರಣದ ಬೆನ್ನಲ್ಲೇ ನಟ, ನಿರ್ಮಾಪಕರು ಹಾಗೂ ಸ್ವಾಮೀಜಿಗಳ ವಿರುದ್ಧ ಹುಲಿ ಉಗುರು ಪೆಂಡೆಂಟ್ ಧರಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ನಟ ಮತ್ತು ನಿರ್ಮಾಪಕರ ಮನೆಗಳ ಮೇಲೆ ದಾಳಿ ನಡೆಸಿದ್ದರು. ಇದೀಗ ಹುಲಿ ಉಗುರು ಪೆಂಡೆಂಟ್ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ಮಧ್ಯೆ ವಕೀಲ ಉಮೇಶ್ ಹುಲಿ ಉಗುರು, ಚರ್ಮ ಹಾಗೂ ನವಿಲು ಗರಿ ಹೊಂದಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದರ್ಗಾ ಹಾಗೂ ಮಠಗಳಲ್ಲಿ ನವಿಲು ಗರಿಗಳಿರುತ್ತವೆ. 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿ ಬಳಿಕ 2003ರಿಂದ 2006ರವರೆಗೆ ವನ್ಯಜೀವಿಗಳ ಪಳೆಯುಳಿಕೆ ಇಟ್ಟುಕೊಂಡಿರುವವರು ಅರಣ್ಯ ಇಲಾಖೆ ಹಿಂತಿರುಗಿಸಬೇಕೆಂದು ಅವಕಾಶ ನೀಡಿತ್ತು. ಗಡುವು ಮುಗಿದ ಬಳಿಕ ಇಷ್ಟು ವರ್ಷಗಳಲ್ಲಿ ಅಧಿಕಾರಿಗಳು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.
ಹುಲಿ ಉಗುರು ಹೊಂದಿದ ಸಂತೋಷ್ ಎಂಬಾತನನ್ನು ಬಂಧಿಸಿ ಜೈಲಿಗೆ ತಳ್ಳಿರುವ ಅಧಿಕಾರಿಗಳು ಸೆಲೆಬ್ರೆಟಿಗಳ ವಿಷಯದಲ್ಲಿ ಯಾಕೆ ಮೌನವಹಿಸಿದ್ದರು. ಅಲ್ಲದೆ, ಅರಣ್ಯ ಅಧಿಕಾರಿಗಳು ಹುಲಿ ಉಗುರು ಪೆಂಡೆಂಟ್ ಹೊಂದಿದ್ದಾರೆಯೇ. ಅವರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ. ಮೊದಲು ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು. ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ ಮುಖ್ಯ ವನ್ಯಜೀವಿ ಸಂರಕ್ಷಣಾಧಿಕಾರಿ ಹಾಗೂ ಉಪ ವನ್ಯಜೀವಿ ಸಂರಕ್ಷಣಾಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಹುಲಿ ಚರ್ಮ ವಿನ್ಯಾಸದ ಶಾಲು ಹೊದ್ದು ವಾಟಾಳ್ ನಾಗರಾಜ್ ವಿಭಿನ್ನ ಪ್ರತಿಭಟನೆ- ವಿಡಿಯೋ
ವರ್ತೂರು ಸಂತೋಷ್ಗೆ ಷರತ್ತುಬದ್ಧ ಜಾಮೀನು: ಹುಲಿ ಉಗುರು ಪೆಂಡೆಂಟ್ ಧರಿಸಿದ ಆರೋಪದ ಮೇಲೆ ಅರಣ್ಯ ಅಧಿಕಾರಿಗಳಿಂದ ಬಂಧಿತನಾಗಿದ್ದ ಕನ್ನಡ ಬಿಗ್ಬಾಸ್ ರಿಯಾಲಿಟಿ ಶೋ ಸ್ಫರ್ಧಿ ವರ್ತೂರ್ ಸಂತೋಷ್ಗೆ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ನಾಲ್ಕು ಸಾವಿರ ನಗದು ಭದ್ರತೆ ಹಾಗೂ ಒಬ್ಬರ ಶ್ಯೂರಿಟಿ ಒದಗಿಸುವಂತೆ ತಿಳಿಸಿ, ನಗರದ 2ನೇ ಎಸಿಜೆಎಂ ನ್ಯಾಯಾಲಯವು ಜಾಮೀನು ನೀಡಿತು.
ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಸಂತೋಷ್ ಇಂದು ಬಿಡುಗಡೆ ಆಗುವ ಸಾಧ್ಯತೆಯಿದೆ. ವರ್ತೂರು ಸಂತೋಷ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ್ದ ಎರಡನೇ ಎಸಿಜೆಎಂ ನ್ಯಾಯಾಲಯವು ಇಂದಿಗೆ ಆದೇಶ ಕಾಯ್ದಿರಿಸಿತ್ತು. ಸಂತೋಷ್ ಪರ ವಕೀಲ ನಟರಾಜ್ ಹಾಗೂ ಸರ್ಕಾರಿ ಅಭಿಯೋಜಕರು ನ್ಯಾಯಾಲಯದ ಮುಂದೆ ವಾದ ಮಂಡಿಸಿದ್ದರು. ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶರು ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ್ದರು.