ಬೆಂಗಳೂರು: ಡ್ರಗ್ಸ್ ಪೆಡ್ಲರ್ಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತ ಕಾಯ್ದೆ ಬರಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಒತ್ತಾಯಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಖಂಡ್ರೆ, ಡ್ರಗ್ಸ್ ಪಿಡುಗು ಕೊರೊನಾಗಿಂತಲೂ ದೊಡ್ಡ ಮಹಾಮಾರಿ. ಯುವಕರು ರಾಷ್ಟ್ರದ ಭವಿಷ್ಯವನ್ನು ರೂಪಿಸುತ್ತಾರೆ. ಆದ್ರೆ ಡ್ರಗ್ಸ್ ಪಿಡುಗಿನಿಂದ ಯುವಕರು ಹಾಳಾಗುತ್ತಿದ್ದಾರೆ. ಹಾಗಾಗಿ ಪಕ್ಷಭೇದ ಮರೆತು ಡ್ರಗ್ಸ್ ಹಾವಳಿ ತಡೆಯಬೇಕಾಗಿದೆ ಎಂದರು.
ಬೆಂಗಳೂರಿನಲ್ಲಿ ಡ್ರಗ್ಸ್ ಪಿಡುಗು ಹೆಚ್ಚಾಗುತ್ತಿದ್ದು, ಲಾಕ್‌ಡೌನ್ ಅವಧಿಯಲ್ಲಿ ರೇವ್ ಪಾರ್ಟಿ, ಡ್ರಗ್ಸ್ ದಂಧೆ ನಡೆಯುತ್ತಿತ್ತು. ಇದು ಕಳವಳಕಾರಿ ವಿಚಾರವಾಗಿದೆ ಎಂದರು. ಒಂದು ವಲಯಕ್ಕೆ ಮಾತ್ರ ತನಿಖೆ ಸೀಮಿತವಾಗದೆ ಹೆಚ್ಚಿನ ತನಿಖೆ ಆಗಬೇಕು. ಡ್ರಗ್ಸ್ ಜಾಲದ ಮೂಲ ಹುಡುಕಬೇಕು ಎಂದು ಹೇಳಿದರು.
ಅವಶ್ಯಕತೆ ಇಲ್ಲದ ಅನೇಕ ಶಾಸನ ತಂದು ಜನರ ಮೇಲೆ ಹೇರಲಾಗುತ್ತಿದೆ. ಡ್ರಗ್ಸ್ ದಂಧೆ ತಡೆಯಲು ಲೋಕಸಭೆಯಲ್ಲೂ ಕಠಿಣ ಕಾನೂನು ತರಬೇಕು. ಕರ್ನಾಟಕದಲ್ಲಿ ಅಧಿವೇಶನ ವಿಸ್ತರಿಸಿ, ಎರಡು ದಿನ ಡ್ರಗ್ಸ್ ವಿಚಾರವಾಗಿ ಚರ್ಚೆ ಆಗಬೇಕು ಎಂದು ಆಗ್ರಹಿಸಿದರು.
ಡ್ರಗ್ಸ್ ಸಾಗಾಟ ಮಾಡುವವರಿಗೆ ಜೀವಾವಧಿ ಶಿಕ್ಷೆ ನೀಡುವಂತಹ ಕಠಿಣ ಕಾನೂನು ತರಬೇಕು. ಡ್ರಗ್ಸ್ ದಂಧೆಗೆ ಉಗ್ರವಾದ ನಂಟು ಇದೆ. ಹೀಗಾಗಿ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಪಕ್ಷಾತೀತವಾಗಿ, ಎಷ್ಟೇ ದೊಡ್ಡವರಾದರೂ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ನಮ್ಮ ರಾಜ್ಯ ಉಡ್ತಾ ಪಂಜಾಬ್ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಹಾಗಾಗಿ ತಪ್ಪಿತಸ್ಥರ ವಿರುದ್ಧ ರಾಜಕೀಯ ರಹಿತವಾಗಿ ಕ್ರಮ ಕೈಗೊಳ್ಳಬೇಕು. ಎಸ್ಐಟಿ ರಚನೆ ಮಾಡಿ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಜಮೀರ್ ಅಹಮ್ಮದ್ ಖಾನ್ ವಿಚಾರವಾಗಿ ಪ್ರತಿಕ್ರಿಯಿಸಿದ ಖಂಡ್ರೆ, ಜಮೀರ್ ಡ್ರಗ್ಸ್ ಆರೋಪದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ತಪ್ಪಿತಸ್ಥನಾದರೆ ನನ್ನ ಆಸ್ತಿ ಮುಟ್ಟುಗೋಲು ಮಾಡಿ ಅಂದಿದ್ದಾರೆ.
ಸಿ.ಟಿ.ರವಿಗೆ ಮಾನ-ಮರ್ಯಾದೆ ಇದ್ಯಾ: ಸಚಿವ ಸಿ.ಟಿ.ರವಿಗೆ ಮಾನ ಮರ್ಯಾದೆ ಇದೆಯಾ ಎಂದು ಈ ವೇಳೆ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಕ್ಯಾಸಿನೋ ತರೋಕೆ ಹೊರಟವರು ಅವರು. ಇಲ್ಲಿ ಕ್ಯಾಸಿನೋ ತರೋಕೆ ಹೊರಟವರು ಯಾರು? ಈಗ ಕ್ಯಾಸಿನೋ ಬಗ್ಗೆ ಮಾತನಾಡ್ತಾರೆ ಅಂದ್ರೆ ಹೇಗೆ? ಎಂದು ಗುಡುಗಿದರು.