ಬೆಂಗಳೂರು : ಮುಸ್ಲಿಂ ಸಮುದಾಯದ ಮಸೀದಿ ಹಾಗೂ ದರ್ಗಾಗಳಲ್ಲಿ ಭಕ್ತರ ಕಾಣಿಕೆ ಹಣ ಸಂಗ್ರಹಿಸಲು ರಾಜ್ಯ ಸರ್ಕಾರ ಇ-ಹುಂಡಿ ಸೇವೆ ಜಾರಿಗೆ ತಂದಿದೆ. ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಸಮ್ಮೇಳನ ಸಭಾಂಗಣದಲ್ಲಿ ವಸತಿ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಅವರು ಇ-ಹುಂಡಿ ಸೇವೆ ಹಾಗೂ ಹೊಸ ಆ್ಯಪ್‌ಗೆ ಚಾಲನೆ ನೀಡಿದ್ದಾರೆ.
ಮಸೀದಿ ಹಾಗೂ ದರ್ಗಾಗಳಿಗೆ ಸಮುದಾಯ ನೀಡುವ ಕಾಣಿಕೆ ಹಾಗೂ ದೇಣಿಗೆ ದುರುಪಯೋಗ ಆಗದಂತೆ, ನಿಗದಿತ ಉದ್ದೇಶಕ್ಕೆ ಹಣ ಬಳಕೆ ಆಗುವಂತೆ ನೋಡಿಕೊಳ್ಳಲು ಆ್ಯಪ್ ಸಿದ್ಧಪಡಿಸಲಾಗಿದೆ. ಮೊದಲಿಗೆ ಬೆಂಗಳೂರಿನ ಹಜರತ್ ತವಕ್ಕಲ್ ಮಸ್ತಾನ್ ಶಾ ದರ್ಗಾದಲ್ಲಿ ಇ-ಹುಂಡಿ ವ್ಯವಸ್ಥೆ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ. ಮುಂದಿನ ದಿನಗಳಲ್ಲಿ ವಕ್ಫ್ ವ್ಯಾಪ್ತಿಯಲ್ಲಿರುವ 3131 ದರ್ಗಾ, 10,398 ಮಸೀದಿಗಳಲ್ಲೂ ಇದನ್ನು ಜಾರಿಗೊಳಿಸಲಾಗುವುದು. ಸಮುದಾಯದವರು ಎಲ್ಲಿಂದ ಯಾವುದೇ ಸಮಯದಲ್ಲಿ ಫೋನ್ ಪೇ, ಗೂಗಲ್ ಪೇ ಮೂಲಕ ದೇಣಿಗೆ ಮತ್ತು ಕಾಣಿಕೆ ನೀಡಬಹುದು ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ ವಕ್ಫ್ ಬೋರ್ಡ್ ಆಸ್ತಿಗಳ ಅಕ್ರಮ ಒತ್ತುವರಿ ಕುರಿತು ತೆರವು ಮಾಡುವ ಬಗ್ಗೆ ವಿಶೇಷ ಗಮನಹರಿಸಲಾಗುವುದು. ವಕ್ಫ್‌ಗೆ ಸೇರಿದ ಆಸ್ತಿಗಳನ್ನು ಕೆಲವು ಸರ್ಕಾರಿ ಇಲಾಖೆಗಳೂ ಒತ್ತುವರಿ ಮಾಡಿಕೊಂಡಿವೆ. ಖಾಸಗಿಯವರ ಒತ್ತುವರಿ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಹಲವು ಪ್ರಕರಣಗಳು ನ್ಯಾಯಾಲಯದಲ್ಲಿದ್ದು, ಕೆಲವು ಪ್ರಕರಣಗಳನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಲು ಅಡ್ವೊಕೇಟ್ ಜನರಲ್ ಜೊತೆ ಚರ್ಚೆ ನಡೆಸಲಾಗುವುದು. ಎಷ್ಟು ಆಸ್ತಿ ಒತ್ತುವರಿ ಆಗಿದೆ ಸರ್ಕಾರಿ ಹಾಗೂ ಖಾಸಗಿ ಸೇರಿ ನ್ಯಾಯಾಲಯದಲ್ಲಿರುವ ಪ್ರಕರಣಗಳ ಬಗ್ಗೆ ಪಟ್ಟಿ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಮೀರ್ ಹೇಳಿದರು.
ಬಜೆಟ್ ಅಧಿವೇಶನ ನಂತರ ವಕ್ಫ್ ಆಸ್ತಿ ಅದಾಲತ್ ನಡೆಯಲಿದೆ. ವಿಂಡ್ಸರ್ ಮ್ಯಾನರ್ ಹೋಟೆಲ್ ಜಾಗಕ್ಕೆ ಕಡಿಮೆ ಬಾಡಿಗೆ ನಿಗದಿ ಆಗಿದ್ದು, ಮಾರುಕಟ್ಟೆ ದರದ ಪ್ರಕಾರ 2 ಕೋಟಿ ರೂ.ವರೆಗೂ ಬಾಡಿಗೆ ಬರಬೇಕಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ಹೋರಾಟ ನಡೆಸಬೇಕಿದೆ. ಈ ಬಗ್ಗೆ ವಕ್ಫ್ ಬೋರ್ಡ್ ಸದಸ್ಯರು ಪ್ರಸ್ತಾಪ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಪ್ರತ್ಯೇಕ ಸಭೆ ನಡೆಸಲಾಗುವುದು. ವಕ್ಫ್ ಬೋರ್ಡ್‌ನಲ್ಲಿ ಸುಮಾರು 45 ಕೋಟಿ ರೂ. ಅನುದಾನ ಲಭ್ಯವಿದ್ದು, ಅದನ್ನು ಶಾಲಾ ಕಾಲೇಜ್ ಕಟ್ಟಡ ನಿರ್ಮಾಣ, ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಬಳಕೆ ಮಾಡಲು ನಿರ್ಧರಿಸಲಾಗಿದೆ. ಈ ಸಂಬಂಧ ತ್ವರಿತ ಕ್ರಮಕ್ಕೆ ಜಮೀರ್ ಸೂಚಿಸಿದರು.
ಬೌದ್ಧ ಸಮುದಾಯಕ್ಕೆ ಪ್ರಾತಿನಿಧ್ಯ : ಬೌದ್ಧ ಸಮುದಾಯಕ್ಕೆ ಅಲ್ಪಸಂಖ್ಯಾತರ ಆಯೋಗದಲ್ಲಿ ಪ್ರಾತಿನಿಧ್ಯ ಕಲ್ಪಿಸಲಾಗುವುದು. ಹುಣಸೂರಿನ ಬೈಲುಕುಪ್ಪೆಯಲ್ಲಿ ಸಮುದಾಯ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗೆ ಕಾಲೇಜು ಹಾಗೂ ಉನ್ನತ ಶಿಕ್ಷಣ ಪ್ರಾರಂಭಕ್ಕೆ ಅನುಮತಿ ದೊರಕಿಸಿಕೊಡಲಾಗುವುದು ಎಂದು ಜಮೀರ್ ಭರವಸೆ ನೀಡಿದರು.
ಇದೇ ವೇಳೆ ಬೌದ್ಧ ಗುರುಗಳ ನಿಯೋಗದಿಂದ ಮನವಿ ಸ್ವೀಕರಿಸಿದ ಅವರು, ಸಮುದಾಯದ ವಿದ್ಯಾರ್ಥಿಗಳು ಜಾತಿ ಪ್ರಮಾಣ ಪತ್ರ ಹಾಗೂ ಚುನಾವಣಾ ಗುರುತಿನ ಚೀಟಿ ಪಡೆಯಲು ಉಂಟಾಗುತ್ತಿರುವ ಸಮಸ್ಯೆ ಬಗೆಹರಿಸಲು ಸಂಬಂಧಪಟ್ಟ ಸಚಿವರ ಜತೆ ಚರ್ಚಿಸಲಾಗುವುದು ಎಂದು ಹೇಳಿದರು. ಮೈಸೂರಿನ ಮೂಡಾದಲ್ಲಿ ಶೈಕ್ಷಣಿಕ ಉದ್ದೇಶಕ್ಕೆ ನಿವೇಶನಕ್ಕಾಗಿ ಮನವಿ ಸಲ್ಲಿಸಿರುವ ಹಾಗೂ ದಲೈ ಲಾಮಾ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚೋದ್ದಿ ತಾಶಿ ಲುಮ್ಪೋ ಸಾಂಸ್ಕೃತಿಕ ಸೊಸೈಟಿಗೆ ಅನುದಾನ ನೀಡಲು ನಿಯೋಗ ಮನವಿ ಮಾಡಿತು.
500 ಬೌದ್ಧ ಗುರುಗಳು ಸೊಸೈಟಿಯಲ್ಲಿ ಇದ್ದು, ಬಿಹಾರದ ಬೋದ್ ಗಯಾ ಕೇಂದ್ರದ ಜತೆಗೂಡಿ ಕೆಲಸ ಮಾಡುತ್ತಿದೆ ಎಂದು ನಿಯೋಗ ತಿಳಿಸಿತು. ಇದಕ್ಕೆ ಸ್ಪಂದಿಸಿದ ಸಚಿವರು ತಕ್ಷಣ ಅನುದಾನ ನೀಡುವ ಭರವಸೆ ಕೊಟ್ಟು, ಆಲ್ಪಸಂಖ್ಯಾತ ಆಯೋಗ, ನಿರ್ದೇಶನಾಲಯ, ಅಭಿವೃದ್ಧಿ ನಿಗಮ ಹೀಗೆ ಎಲ್ಲ ಕಡೆ ಸಮುದಾಯಕ್ಕೆ ಪ್ರಾತಿನಿದ್ಯ ಕಲ್ಪಿಸಿದರೆ ನಿಮ್ಮ ಸಮುದಾಯದ ಸಮಸ್ಯೆ ಪರಿಹಾರಕ್ಕೆ ಅನುಕೂಲವಾಗುತ್ತದೆ. ಆ ಬಗ್ಗೆ ಗಮನ ಹರಿಸಲಾಗುವುದು. ಒಂದು ವರ್ಷದಲ್ಲಿ ನಿಮ್ಮೆಲ್ಲ ಬೇಡಿಕೆ ಈಡೇರಿಸಲಾಗುವುದು ಎಂದು ಜಮೀರ್ ಆಶ್ವಾಸನೆ ನೀಡಿದರು.
ದಕ್ಷಿಣ ಭಾರತದ ಸೆಂಟ್ರಲ್ ಟಿಬೇಟಿಯನ್ ಅಡ್ಮಿನ್ಸ್ಟ್ರೇಷನ್ ವಿಭಾಗದ ಪ್ರತಿನಿಧಿಗಳು ನಿಯೋಗದಲ್ಲಿದ್ದರು. ಇದೇ ಸಂದರ್ಭದಲ್ಲಿ ನಿಯೋಗ ಸಚಿವರಿಗೆ ಟಿಬೇಟಿಯನ್ ಸಾಂಪ್ರದಾಯಿಕ ಗೌರವ ನೀಡಿ ಸನ್ಮಾನಿಸಿತು.
ಇದನ್ನೂ ಓದಿ : ಹೆಲ್ಪ್ ಲೈನ್ ಸಿಬ್ಬಂದಿ ವೇತನ ಕೇಳಿ ಬೆಚ್ಚಿಬಿದ್ದ ಸಚಿವ ಜಮೀರ್..! ಸಮಗ್ರ ತನಿಖೆಗೆ ಆದೇಶ