ಬೆಂಗಳೂರು: ಖ್ಯಾತ ಗಾಯಕಿ ಎಂದೇ ಪ್ರಸಿದ್ಧವಾಗಿರುವ ಲತಾ ಮಂಗೇಶ್ಕರ್ ಇಂದು ಕೊನೆಯುಸಿರೆಳೆದಿದ್ದಾರೆ. ಗಾಯನವನ್ನೇ ಜೀವಾಳವಾಗಿಸಿಕೊಂಡಿದ್ದ ಲತಾ ಮಂಗೇಶ್ಕರ್ ಬಹುಭಾಷಾ ಗಾಯಕಿ. ಇವರು ಕನ್ನಡದಲ್ಲಿ ಸಹ ಎರಡು ಹಾಡನ್ನು ಹಾಡಿದ್ದಾರೆ.
ಒಟ್ಟು 22 ಭಾಷೆಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡುವ ಮೂಲಕ ಲತಾ ಮಂಗೇಶ್ಕರ್ ತಾವೊಬ್ಬ ಅದ್ಭುತ ಗಾಯಕಿ ಎಂಬುದನ್ನು ನಿರೂಪಿಸಿದ್ದಾರೆ. ಸಂಗೀತಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಅವರು ಗಾಯನಕ್ಕೆ ತೊಡಕಾಗಬಾರದು ಎಂದು ವಿವಾಹವನ್ನು ಕೂಡ ಮಾಡಿಕೊಂಡಿರಲಿಲ್ಲ.
1967ರಲ್ಲಿ ಬಿಡುಗಡೆಯಾದ "ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ" ಕನ್ನಡ ಚಲನಚಿತ್ರದಲ್ಲಿನ "ಬೆಳ್ಳನೆ ಬೆಳಗಾಯಿತು" ಮತ್ತು "ಎಲ್ಲಾರೆ ಇರತೀರೋ ಎಂದಾರೆ ಬರತೀರೋ" ಹಾಡುಗಳನ್ನು ಹಾಡಿದ್ದಾರೆ.
ಓದಿ: ಮೌನವಾಯ್ತು ಹಾಡುಹಕ್ಕಿ: ಗಾನಕೋಗಿಲೆ ಲತಾ ಮಂಗೇಶ್ಕರ್ ಇನ್ನಿಲ್ಲ..!
ಎಲ್ಲ ಭಾಷೆಗಳಂತೆ ಕನ್ನಡದ ಮೇಲೆ ಸಾಕಷ್ಟು ಅಭಿಮಾನ ಹೊಂದಿದ್ದ ಲತಾ ದೀದಿ, ಹೆಚ್ಚು ಕನ್ನಡ ಹಾಡುಗಳನ್ನ ಹಾಡುವ ಅವಕಾಶ ತೆಗೆದುಕೊಳ್ಳಲಿಲ್ಲ. ಹಿಂದಿ ಚಿತ್ರರಂಗದಲ್ಲಿಯೇ ಅತ್ಯಂತ ಜನಪ್ರಿಯರಾದ ಅವರಿಗೆ ಬೇರೆ ಭಾಷೆಗಳಲ್ಲಿ ಹಾಡುವ ಅವಕಾಶವೂ ಸಿಗಲಿಲ್ಲ. ಕುಟುಂಬ ನಿರ್ವಹಣೆ ಜೊತೆಗೆ ಹಿಂದಿ ಚಿತ್ರರಂಗಕ್ಕಾಗಿ ಅವಿರತವಾಗಿ ಶ್ರಮಿಸುವ ಅನಿವಾರ್ಯ ಇದ್ದ ಹಿನ್ನೆಲೆ ಅವರು ಬೇರೆ ಭಾಷೆಗಳತ್ತ ಅಷ್ಟಾಗಿ ಆಸಕ್ತಿ ತೋರಿಸಲಿಲ್ಲ ಎಂಬ ಮಾತು ಸಹ ಕೇಳಿ ಬಂದಿತ್ತು.
ಹಿರಿಯ ಪತ್ರಕರ್ತ 'ವಸಂತ ನಾಡಿಗೇರ್' ರಚಿಸಿರುವ, 'ಸುಮುಖ ಪ್ರಕಾಶನ' ಪ್ರಕಟಿಸಿರುವ 'ಲತಾ ಮಂಗೇಶ್ಕರ್ ರವರ ಜೀವನ ಚರಿತ್ರೆ'-’ಹಾಡುಹಕ್ಕಿಯ ಹೃದಯಗೀತೆ’ ಪುಸ್ತಕದ ಲೋಕಾರ್ಪಣ ಸಮಾರಂಭ ಸಹ ನೆರವೇರಿದ್ದು, ಪುಸ್ತಕದಲ್ಲಿ ಲತಾ ಮಂಗೇಶ್ಕರ್ ಕುರಿತು ಸವಿಸ್ತಾರ ವಿವರ ನೀಡಲಾಗಿದೆ.
1967ರಲ್ಲಿ ಕನ್ನಡ ಗೀತೆಗಳನ್ನ ಹಾಡಿದ ನಂತರ ಅವರು ಯಾವುದೇ ಗೀತೆಯನ್ನು ಕನ್ನಡದಲ್ಲಿ ಹಾಡಿಲ್ಲ. ಕನ್ನಡವೂ ಸೇರಿದಂತೆ ದೇಶದ ಎಲ್ಲ ಭಾಷೆಯ ಸಂಗೀತ ಹಾಗೂ ಗಾಯಕರ ಬಗ್ಗೆ ಇವರು ತುಂಬಾ ಉತ್ತಮ ಹಾಗೂ ಗೌರವಿತ ಭಾವನೆಯನ್ನು ಹೊಂದಿದ್ದರು.