ಬೆಂಗಳೂರು: ಬಿಬಿಎಂಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಅವರ ಮೃತದೇಹದ ಅಂತಿಮ ದರ್ಶನಕ್ಕೆ ಛಲವಾದಿ ಪಾಳ್ಯದ ಬಿಜೆಪಿ ಕಚೇರಿ ಮುಂದೆ ವ್ಯವಸ್ಥೆ ಮಾಡಲಾಗಿದೆ. ಪೊಲೀಸರು ಬ್ಯಾರಿಕೇಡ್ಗಳನ್ನು ಹಾಕಿದ್ದಾರೆ. ಈ ವೇಳೆ ಕೋವಿಡ್ ನಿಯಮ ಉಲ್ಲಂಘನೆ ಆಗದಂತೆಯೂ ನಿಗಾ ವಹಿಸಿದ್ದಾರೆ.
ಬಿಜೆಪಿ ಕಚೇರಿಗೆ ರೇಖಾ ಕದಿರೇಶ್ ಮೃತದೇಹವನ್ನು ಆಂಬುಲೆನ್ಸ್ ಮೂಲಕ ತರಲಾಯಿತು. ಮೃತದೇಹದ ಅಂತಿಮ ದರ್ಶನಕ್ಕೆ ಸ್ಥಳಿಯರಿಗೆ ಅನುಮತಿ ನೀಡಲಾಗಿದ್ದು, ಅವರನ್ನು ನೋಡಲು ಜನಸಾಗರವೇ ಹರಿದು ಬರುತ್ತಿದೆ. ಸ್ಥಳೀಯರು ಕೋವಿಡ್ ನಿಯಮ ಉಲ್ಲಂಘನೆಯಾಗದಂತೆ ಸಾಲುಗಟ್ಟಿ ನಿಂತಿದ್ದಾರೆ.
ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕಿಮ್ಸ್ ಆಸ್ಪತ್ರೆಯಲ್ಲಿ ಅಂತಿಮ ದರ್ಶನ ಪಡೆದರು. ಬಳಿಕ ಮಾತನಾಡಿದ ಅವರು, ರೇಖಾ ಕದಿರೇಶ್ ರಾಜಕೀಯ, ಸಾಮಾಜಿಕವಾಗಿ ಸಾಕಷ್ಟು ಕೆಲಸ ಮಾಡಿದ್ದರು. ಆ ಭಾಗದಲ್ಲಿ ಪಕ್ಷಕ್ಕೆ ಶಕ್ತಿ ತುಂಬಿದ್ದರು. ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ. ಕೊಲೆ ಹಿಂದೆ ರಾಜಕೀಯ ಶಕ್ತಿ ಇದ್ರೆ ಹೊರ ಬರಬೇಕು. ಮುಖ್ಯಮಂತ್ರಿ ಕೂಡ 24 ಗಂಟೆಯೊಳಗೆ ಆರೋಪಿ ಬಂಧಿಸೋದಾಗಿ ಭರವಸೆ ನೀಡಿದ್ದಾರೆ. ಕೊಲೆಗಾರರನ್ನು ಆದಷ್ಟು ಬೇಗ ಬಂಧಿಸಬೇಕು ಎಂದು ಹೇಳಿದರು.