ಬೆಂಗಳೂರು: ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಹಿಂದುಳಿದ ವರ್ಗಗಳ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಕ್ಕೆ ಚಿಂತಾಮಣಿ ತಾಲೂಕಿನ ಭೈರಡಹಳ್ಳಿ ಗ್ರಾಮದ ಸರ್ವೆ ನಂಬರ್ 14ರಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಭೂ ಸರ್ವೆ ಮಾಡಿ ಸ್ಥಳ ಗುರುತಿಸಿದರು.
ಸರ್ವೆ ನಂಬರ್ 14ರಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಎರಡು ಎಕರೆ ಹನ್ನೊಂದು ಗುಂಟೆ ಸರ್ಕಾರಿ ಜಮೀನನ್ನು ಗುರುತಿಸಿದ್ದು, ಕಟ್ಟಡ ನಿರ್ಮಾಣ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮುಂದಿನ ಕ್ರಮ ವಹಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜವಾಬ್ದಾರಿಗೆ ನೀಡಿದರು.
ಈ ವೇಳೆ ಕಂದಾಯ ವೃತ್ತ ನಿರೀಕ್ಷಕ ಮೋಹನ್ ಕುಮಾರ್ ಮಾತನಾಡಿ, ಬಿಸಿಎಂ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಭೂಮಿ ಗುರುತಿಸಿ ಕೊಡುವಂತೆ ಜಿಲ್ಲಾಧಿಕಾರಿಳು ಆದೇಶ ಮಾಡಿದ ಹಿನ್ನೆಲೆ ಸರ್ವೆ ಮಾಡಿದ್ದು, ಸರ್ವೇ ನಂ 14 ರಲ್ಲಿ ಎರಡು ಎಕರೆ 11 ಗುಂಟೆ ಸರ್ಕಾರಿ ಜಮೀನು ಇದ್ದು ಸದರಿ ಸ್ಥಳವನ್ನು ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಒಪ್ಪಿಸಲಾಗಿದೆ ಎಂದರು.
ಇದೇ ಜಮೀನಿನಲ್ಲಿ ಗ್ರಾಮ ಪಂಚಾಯತಿಯ ಕೆಲ ಸದಸ್ಯರು ಅಕ್ರಮವಾಗಿ ನಿವೇಶನಗಳನ್ನು ಮಾಡಿಕೊಂಡು ಅರ್ಧ ಎಕರೆಯಷ್ಟು ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದರು ಎಂದು ಕೆಲ ಮುಖಂಡರು ದೂರಿದ್ದರು. ಭೂ ಸರ್ವೇ ವೇಳೆ ಕಂದಾಯ ಇಲಾಖೆ ಅಧಿಕಾರಿ ವೆಂಕಟರವಣಪ್ಪ ಸೇರಿದಂತೆ ಕಾಗತಿ ಗ್ರಾಮದ ಹಲವಾರು ಮುಖಂಡರು ಹಾಜರಿದ್ದರು .