ಬೆಂಗಳೂರು: ಸಿಡಿ ಷಡ್ಯಂತ್ರದ ಕುರಿತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿದ ಬೆನ್ನಲ್ಲೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸುದೀರ್ಘ ಸಮಾಲೋಚನೆ ನಡೆಸಿದ್ದು, ಮುಂದಿನ ಹೋರಾಟಕ್ಕೆ ಕೈ ಪಡೆ ಸಜ್ಜಾಗುತ್ತಿದೆ ಎನ್ನಲಾಗಿದೆ.
ವಿಧಾನಸೌಧದ ಅಧಿಕೃತ ಕಚೇರಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ ಮಾಡಿದರು. ಜಾರಕಿಹೊಳಿ ಸುದ್ದಿಗೋಷ್ಠಿ ಮುಗಿಯುತ್ತಿದ್ದಂತೆ ನಡೆದ ಭೇಟಿ ವೇಳೆ ಸಿಡಿ ವಿಷಯದ ಕುರಿತು ಚರ್ಚೆ ನಡೆಯಿತು ಎನ್ನಲಾಗಿದೆ.
ಇದನ್ನೂ ಓದಿ: 4 ತಿಂಗಳ ಮೊದಲೇ ಸಿಡಿ ಬಗ್ಗೆ ಗೊತ್ತಿತ್ತು, ಮಹಾನ್ ನಾಯಕನಿಂದ ಇದೆಲ್ಲಾ ನಡೆದಿದೆ: ರಮೇಶ್ ಜಾರಕಿಹೊಳಿ - VIDEO
ರಮೇಶ್ ಜಾರಕಿಹೊಳಿ ಇಂದಿನ ಸುದ್ದಿಗೋಷ್ಠಿಯಲ್ಲಿ ಹೆಸರು ಪ್ರಸ್ತಾಪ ಮಾಡದೇ ಇದ್ದರೂ ನೇರವಾಗಿ ಕಾಂಗ್ರೆಸ್ ನಾಯಕರ ಕಡೆಗೆ ಬೆರಳು ಮಾಡುವ ರೀತಿ ಆರೋಪ ಮಾಡಿದ್ದಾರೆ. ಜಲಸಂಪನ್ಮೂಲ ಇಲಾಖೆಯನ್ನು ಮೂರು ತಿಂಗಳು ನಿಭಾಯಿಸಲು ನೋಡೋಣ ಎಂದಿದ್ದ ಹೇಳಿಕೆ ಉಲ್ಲೇಖಿಸಿ ಡಿಕೆ ಶಿವಕುಮಾರ್ ಕಡೆ ಬೆರಳು ಮಾಡಿರುವ ಜಾರಕಿಹೊಳಿ, ಒರಾಯನ್ ಮಾಲ್ ಸಮೀಪದ ಅಪಾರ್ಟ್ಮೆಂಟ್ನ 5 ನೇ ಮಹಡಿಯಲ್ಲಿ ಷಡ್ಯಂತ್ರ ನಡೆದಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಪರೋಕ್ಷವಾಗಿ ಬೆರಳು ತೋರಿ ಆರೋಪಿಸಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜೊತೆ 20 ನಿಮಿಷಗಳ ಕಾಲ ಸುದೀರ್ಘ ಚರ್ಚೆ ನಡೆಸಿದ್ದಾರೆ. ಜಾರಕಿಹೊಳಿ ಮಾಡಿರುವ ಆರೋಪಗಳ ಕುರಿತು ಸಮಾಲೋಚನೆ ನಡೆಸಿದ್ದಾರೆ. ಸಿಡಿ ಪ್ರಕರಣದಲ್ಲಿ ಕಾಂಗ್ರೆಸ್ ಮುಂದಿನ ಹೋರಾಟ ಯಾವ ರೀತಿ ಇರಬೇಕು ಎನ್ನುವ ಕುರಿತು ಚರ್ಚೆ ನಡೆಯಿತು ಎನ್ನಲಾಗಿದೆ. ಸಧ್ಯ ಅನೌಪಚಾರಿಕವಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಜೊತೆ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದು, ಪಕ್ಷದ ವೇದಿಕೆಯಲ್ಲಿಯೂ ಈ ಬಗ್ಗೆ ಚರ್ಚಿಸಿ ಹೋರಾಟದ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಜಾರಕಿಹೊಳಿ ಸಹೋದರರು ಹೇಳಿದ 2+3+4 ಸೂತ್ರ ಏನು ಗೊತ್ತಾ?