ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಪ್ರಚಾರ ಕಾವೇರಿದೆ. ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ರಾಜಕೀಯ ಪಕ್ಷಗಳು ಜನಪ್ರಿಯರಾದ ಮೂವರು ಮಾಜಿ ಮುಖ್ಯಮಂತ್ರಿಗಳನ್ನು ಚುನಾವಣೆ ಪ್ರಚಾರಕ್ಕೆ ಸಮರ್ಪಕವಾಗಿ ಬಳಸಿಕೊಂಡು ಮತದಾರರನ್ನು ಆಕರ್ಷಿಸತೊಡಗಿವೆ. ಬಿಜೆಪಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಪಕ್ಷ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ, ಜಾತ್ಯತೀತ ಜನತಾದಳದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಾರಥ್ಯದಲ್ಲಿ ಅಬ್ಬರದ ಪ್ರಚಾರ ಕೈಗೊಂಡಿವೆ.
ರಾಜ್ಯಮಟ್ಟದಲ್ಲಿ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಈ ಮೂವರು ಮಾಜಿ ಮುಖ್ಯಮಂತ್ರಿಗಳು ತಮ್ಮ ತಮ್ಮ ರಾಜಕೀಯ ಪಕ್ಷಗಳಿಗೆ ಆಧಾರಸ್ತಂಭವಾಗಿದ್ದಾರೆ. ಬಿಜೆಪಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಹೊರತುಪಡಿಸಿದರೆ ಅವರಂತೆ ಮತದಾರರನ್ನು ಆಕರ್ಷಿಸುವಂತಹ ಮತ್ತೊಬ್ಬ ನಾಯಕರಿಲ್ಲ. ರಾಜ್ಯ ಬಿಜೆಪಿಯಲ್ಲಿ ಹಲವಾರು ನಾಯಕರಿದ್ದರೂ ಚುನಾವಣೆ ಪ್ರಚಾರದ ವೇಳೆ ಯಡಿಯೂರಪ್ಪ ಅವರಿಗೆ ಸಿಗುವಂತಹ ಜನ ಬೆಂಬಲ ಪಕ್ಷದ ಇತರ ಮುಖಂಡರಿಗೆ ದೊರೆಯುತ್ತಿಲ್ಲ.
ಯಡಿಯೂರಪ್ಪಗೆ ಸರಿಸಾಟಿಯಿಲ್ಲ: ಒಂದು ಹಂತದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಪಕ್ಷದ ಚಟುವಟಿಕೆಗಳಲ್ಲಿ ನಿರ್ಲಕ್ಷಿಸುತ್ತಿದ್ದ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಕಡೆಗಣಿಸಿದರೆ ಪಕ್ಷಕ್ಕೆ ಚುನಾವಣೆಯಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಅರಿತು ಅವರಿಗೆ ಪಕ್ಷದಲ್ಲಿ ಉನ್ನತ ಸ್ಥಾನಮಾನ ನೀಡಿದೆ. ಅಷ್ಟೇ ಅಲ್ಲ, ಬಿಜೆಪಿಯ ಹೈಕಮಾಂಡ್ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯದ ವಿಧಾನಸಭೆ ಚುನಾವಣೆ ಯಡಿಯೂರಪ್ಪ ನಾಯಕತ್ವದಲ್ಲಿಯೇ ನಡೆಯಲಿದೆ ಎಂದು ಪ್ರಕಟಿಸಿದ್ದಾರೆ.
ಬಿಜೆಪಿಯ ಪ್ರಮುಖ ಚುನಾವಣೆ ರ‍್ಯಾಲಿಗಳು ಮತ್ತು ಸಮಾವೇಶಗಳಲ್ಲಿ ಯಡಿಯೂರಪ್ಪಗೆ ಸೂಕ್ತ ಪ್ರಾತಿನಿಧ್ಯ ನೀಡಿ, ಅವರಿಗಿರುವ ಜನ ಬೆಂಬಲವನ್ನು ಮತ್ತು ಲಿಂಗಾಯತ ಸಮುದಾಯದ ಬೆಂಬಲ ಪಡೆಯಲು ಭಾರತೀಯ ಜನತಾ ಪಕ್ಷ ಯತ್ನಿಸುತ್ತಿದೆ. ಬಿಜೆಪಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಇಬ್ಬರು ಮಾಜಿ ಮುಖ್ಯಮಂತ್ರಿಗಳಿದ್ದರೂ ಅವರು ಯಡಿಯೂರಪ್ಪ ಅವರಿಗೆ ಸರಿಸಾಟಿಯಾಗಿ ಬೆಳೆಯಲು ಸಾಧ್ಯವಾಗುತ್ತಿಲ್ಲ.
ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಡಿ.ವಿ.ಸದಾನಂದ ಗೌಡ ಅವರು ಯಡಿಯೂರಪ್ಪ ಅವರಂತೆ ಹೆಚ್ಚಿನ ಜನಪ್ರಿಯತೆ ಹೊಂದಿಲ್ಲ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಯಡಿಯೂರಪ್ಪ ಪ್ರತಿನಿಧಿಸುತ್ತಿರುವ ಲಿಂಗಾಯತ ಸಮುದಾಯದವರೇ ಆದರೂ ಬಿಎಸ್ವೈ ಅವರಿಗೆ ಇರುವ ಜನಮನ್ನಣೆ ಶೆಟ್ಟರ್ ಅವರಿಗೆ ಸಿಗುತ್ತಿಲ್ಲ. ಹಾಗಾಗಿ ಬಿಜೆಪಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ.
ಬಿಜೆಪಿ ಸಂಸದರಾಗಿರುವ ಮಾಜಿ ಮುಖ್ಯಮಂತ್ರಿಗಳೂ ಆಗಿದ್ದ ಡಿ.ವಿ.ಸದಾನಂದ ಗೌಡ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದರೂ ಆ ಸಮುದಾಯದ ಮತಗಳನ್ನು ನಿರೀಕ್ಷಿತ ಪ್ರಮಾಣದಲ್ಲಿ ಬಿಜೆಪಿಯತ್ತ ಆಕರ್ಷಿಸಲು ಸಾಧ್ಯವಾಗುತ್ತಿಲ್ಲ. ದಕ್ಷಿಣ ಕರ್ನಾಟಕದಲ್ಲಿ ಒಕ್ಕಲಿಗರ ಪ್ರಾಬಲ್ಯವೇ ಜಾಸ್ತಿ ಇರುವುದರಿಂದ ಮಾಜಿ ಸಿಎಂ ಸದಾನಂದ ಗೌಡ ಅವರಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಂತೆ ಹೆಚ್ಚಿನ ಮತ ಹಾಗೂ ಜನಮನ್ನಣೆ ಗಳಿಸುವಲ್ಲಿ ಸಾಧ್ಯವಾಗುತ್ತಿಲ್ಲ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದರೂ ಲಿಂಗಾಯತ ಸಮುದಾಯದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಂತೆ ಪ್ರಶ್ನಾತೀತ ನಾಯಕರಾಗಿ ಹೊರಹೊಮ್ಮಲು ಸಾಧ್ಯವಾಗಿಲ್ಲ. ಯಾವೊಬ್ಬ ನಾಯಕರು ಬಿಜೆಪಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರಷ್ಟು ಜನಮಾನಸದ ನಾಯಕರಾಗಿ ಬೆಳೆಯದಿರುವ ಕಾರಣ ಬಿಜೆಪಿ ಹೈಕಮಾಂಡ್ ಅನ್ಯ ಮಾರ್ಗಗಳಿಲ್ಲದೇ 80 ವರ್ಷ ದಾಟಿದ ಯಡಿಯೂರಪ್ಪ ನಾಯಕತ್ವದಲ್ಲಿಯೇ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ನಡೆಸಬೇಕಾಗಿದೆ.
ಕಾಂಗ್ರೆಸ್ಗೆ ಸಿದ್ದರಾಮಯ್ಯ ಜನಪ್ರೀಯತೆಯೇ ಆಸರೆ : ಬಿಜೆಪಿಯಲ್ಲಿ ಯಡಿಯೂರಪ್ಪ ಅವರಂತೆ ಕಾಂಗ್ರೆಸ್ ಪಕ್ಷ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ. ಪಕ್ಷದಲ್ಲಿ ಸಿದ್ದರಾಮಯ್ಯ ಅವರಂತೆ ಜನಮಾನಸದ ನಾಯಕ ಮತ್ತೊಬ್ಬರಿಲ್ಲ. ಬಿಜೆಪಿಯಲ್ಲಿ ಯಡಿಯೂರಪ್ಪ, ಜೆಡಿಎಸ್ನಲ್ಲಿ ಮಾಜಿ ಪ್ರಧಾನಿ ದೇವೇಗೌಡರು 'ಮಾಸ್ ಲೀಡರ್' ಎಂದು ಹೆಸರು ಪಡೆದುಕೊಂಡಿದ್ದಾರೆ. ಅವರಂತೆ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯನವರೇ 'ಮಾಸ್ ಲೀಡರ್' ಆಗಿದ್ದಾರೆ.
ಕುರುಬ ಸಮುದಾಯಕ್ಕೆ ಸೇರಿದ ಸಿದ್ದರಾಮಯ್ಯ ಆ ಸಮುದಾಯದ ಪ್ರಶ್ನಾತೀತ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಒಕ್ಕಲಿಗರಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ಲಿಂಗಾಯತ ಸಮುದಾಯದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಶ್ನಾತೀತ ನಾಯಕರಾಗಿ ಹೊರಹೊಮ್ಮಿದಂತೆ ಕುರುಬ ಸಮುದಾಯದಲ್ಲಿ ಸಿದ್ದರಾಮಯ್ಯನವರು ತಮ್ಮದೇ ಆದ ಪಾರುಪತ್ಯ ಹೊಂದಿದ್ದಾರೆ. ಅಹಿಂದ ನಾಯಕರು ಎನ್ನುವ ಹಿರಿಮೆಯೂ ಇವರಿಗಿದೆ. ಈ ಹಿನ್ನೆಲೆ ಕಾಂಗ್ರೆಸ್ ಸಿದ್ದರಾಮಯ್ಯ ಅವರನ್ನು ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಪ್ರಮುಖ ವ್ಯಕ್ತಿಯನ್ನಾಗಿ ಬಳಸಿಕೊಳ್ಳುತ್ತಿದೆ.
ಕಾಂಗ್ರೆಸ್ ಪಕ್ಷದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರು ಹಿರಿಯ ನಾಯಕರಿದ್ದಾರೆ. ಆದರೂ ಸಿದ್ದರಾಮಯ್ಯನವರಷ್ಟು ಇವರೆಲ್ಲ ರಾಜ್ಯಾದ್ಯಂತ ಜನರನ್ನು ಸೆಳೆಯುವಷ್ಟು ಪ್ರಬಲರಾಗಿಲ್ಲ. ಇವರ ಜತೆಗೆ ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ಹೆಚ್.ಕೆ.ಪಾಟೀಲ್, ಕಾಗೋಡು ತಿಮ್ಮಪ್ಪ, ಟಿ.ಬಿ.ಜಯಚಂದ್ರ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ನಾಯಕರ ದಂಡೇ ಕಾಂಗ್ರೆಸ್ನಲ್ಲಿದೆ. ಇವರೆಲ್ಲ ತಮ್ಮ ತಮ್ಮ ಕ್ಷೇತ್ರ ಮತ್ತು ಜಿಲ್ಲಾ ವ್ಯಾಪ್ತಿಗೆ ಮಾತ್ರ ಸೀಮಿತವಾಗಿದ್ದಾರೆ. ರಾಜ್ಯಮಟ್ಟದಲ್ಲಿ ಹಾಗೂ ತಮ್ಮ ಸಮುದಾಯದಲ್ಲಿ ಪಕ್ಷಾತೀತವಾಗಿ ಹೆಚ್ಚಿನ ಪ್ರಭಾವವನ್ನು ಹೊಂದಿಲ್ಲ. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದರು ಸಿದ್ದರಾಮಯ್ಯ ಅವರಂತೆ ರಾಜ್ಯದ ತುಂಬ ಜನಪ್ರಿಯತೆ ಹೊಂದಿಲ್ಲ.
ಜೆಡಿಎಸ್ಗೆ ಕುಮಾರಸ್ವಾಮಿಯೇ ಆಧಾರ: ಮಾಜಿ ಪ್ರಧಾನಿ ದೇವೇಗೌಡರು ಜೆಡಿಎಸ್ನ ಪರಮೋಚ್ಛ ನಾಯಕರಾಗಿದ್ದಾರೆ. ರಾಜ್ಯದ ಮೂರು ಜನ "ಮಾಸ್ ಲೀಡರ್" ಗಳಲ್ಲಿ ದೇವೇಗೌಡರು ಅಗ್ರಗಣ್ಯರಾಗಿದ್ದಾರೆ. ಒಕ್ಕಲಿಗ ಸಮುದಾಯಕ್ಕೆ ಸೇರಿದ ದೇವೇಗೌಡರು ಈ ಜನಾಂಗದ ಪ್ರಶ್ನಾತೀತ ನಾಯಕ. ದಕ್ಷಿಣ ಕರ್ನಾಟಕದಲ್ಲಿ ಪ್ರಾಬಲ್ಯ ಹೊಂದಿರುವ ಒಕ್ಕಲಿಗರು ಮಾಜಿ ಪ್ರಧಾನಿ ದೇವೇಗೌಡರನ್ನು ಜನಾಂಗದ ನಾಯಕರೆಂದು ಒಪ್ಪಿಕೊಂಡ ಹಾಗೆ ಬೇರೆ ಪಕ್ಷದ ಒಕ್ಕಲಿಗ ಮುಖಂಡರುಗಳನ್ನ ತಮ್ಮ ಸಮುದಾಯದ ನಾಯಕರೆಂದು ಸ್ವೀಕರಿಸಿಲ್ಲ.
ಮಾಜಿ ಪ್ರಧಾನಿ ದೇವೇಗೌಡರು ಈವರೆಗೆ ನಡೆದ ಚುನಾವಣೆಗಳಿಗೆ ಜೆಡಿಎಸ್ನ ಪ್ರಚಾರದ ಕೇಂದ್ರ ಬಿಂದುವಾಗಿದ್ದರು. 85 ವರ್ಷ ದಾಟಿದ ದೇವೇಗೌಡರು ವಯೋ ಸಹಜ ತೊಂದರೆಗಳಿಂದ ಸಕ್ರಿಯವಾಗಿ ರಾಜ್ಯಾದ್ಯಂತ ಸಂಚರಿಸಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ನಡೆಸಲು ಸಾಧ್ಯವಾಗುತ್ತಿಲ್ಲ. ಮಾಜಿ ಪ್ರಧಾನಿ ದೇವೇಗೌಡರ ಹೆಸರು ಮುಂದಿಟ್ಟುಕೊಂಡು ಅವರ ಪುತ್ರರೇ ಆದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜಾತ್ಯತೀತ ಜನತಾದಳದ ಪರ ಬಿರುಸಿನ ಪ್ರಚಾರ ನಡೆಸಿದ್ದಾರೆ.
ಒಕ್ಕಲಿಗ ಸಮುದಾಯವು ದೇವೇಗೌಡರಿಗೆ ನೀಡಿದಷ್ಟೇ ಮನ್ನಣೆಯನ್ನ ಅವರ ಪುತ್ರರಾದ ಕುಮಾರಸ್ವಾಮಿಯವರಿಗೂ ನೀಡುತ್ತಿದೆ. ಹಾಗಾಗಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪ್ರಚಾರಕ್ಕೆ ಕುಮಾರಸ್ವಾಮಿ ಅವರನ್ನೇ ಅವಲಂಭಿಸಿದೆ. ದೇವೇಗೌಡರ ಮತ್ತೊಬ್ಬ ಪುತ್ರ ಮಾಜಿ ಸಚಿವ ರೇವಣ್ಣ ಅವರು ಜೆಡಿಎಸ್ ನ ಹಿರಿಯ ನಾಯಕರಾಗಿದ್ದು, ಅವರು ಹಾಸನ ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಮಾಜಿ ಸಚಿವರಾದ ಬಂಡೆಪ್ಪ ಕಾಶಂಪುರ್, ಜಿ.ಟಿ.ದೇವೇಗೌಡ ಅವರುಗಳು ರಾಜ್ಯ ವ್ಯಾಪಿ ಜನಪ್ರಿಯತೆ ಪಡೆದುಕೊಂಡಿಲ್ಲ.
ಮಾಸ್ ಲೀಡರ್‌ಗಳ ಕೊರತೆ ಏಕೆ?: ರಾಜಕಾರಣದಲ್ಲಿ ಎಲ್ಲರೂ ಮಾಸ್ ಲೀಡರ್ ಆಗಲು ಸಾಧ್ಯವಿಲ್ಲ. ಜನ ಸಮುದಾಯದ ನಾಯಕರಾಗಿ ಹೊರಹೊಮ್ಮಲು ರಾಜಕೀಯ ಬದ್ಧತೆ, ಹೋರಾಟದ ಮನೋಭಾವ, ಸಂಘಟನಾತ್ಮಕ ಶಕ್ತಿ, ಜನ ಸ್ಪಂದನೆ, ಸಮುದಾಯದ ಬೆಂಬಲದಂತಹ ಗುಣಗಳ ಅಗತ್ಯತೆ ಇದೆ. ರಾಜ್ಯದಲ್ಲಿ ಮಾಸ್ ಲೀಡರ್ಗಳೆಂದು ಗುರುತಿಸಿಕೊಂಡಿರುವ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ರಾಜ್ಯಾದ್ಯಂತ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ. ಅಭ್ಯರ್ಥಿಗಳನ್ನ ಸಂತ ಶಕ್ತಿಯಿಂದ ಗೆಲ್ಲಿಸಿಕೊಂಡು ಬರುವ ಸಾಮರ್ಥ್ಯ ಇವರಿಗಿದೆ. ಇವರಂತೆ ಉಳಿದ ಎರಡನೇ ಹಂತದ ನಾಯಕರು ಈ ಮಟ್ಟದ ಜನಪ್ರಿಯತೆಯನ್ನು ಹೊಂದಿಲ್ಲ.
"ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸ್, ರಾಮಕೃಷ್ಣ ಹೆಗಡೆ ಹಾಗೂ ಎಸ್.ಬಂಗಾರಪ್ಪನವರು ರಾಜ್ಯದಲ್ಲಿ ಮಾಸ್ ಲೀಡರ್ಗಳೆಂದು ಹೆಸರಾಗಿದ್ದರು. ಅವರ ನಂತರ ದೇವೇಗೌಡ, ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಜನಸಮುದಾಯದ ನಾಯಕರಾಗಿ ಹೊರಹೊಮ್ಮಿದ್ದಾರೆ. ಉಳಿದ ರಾಜಕಾರಣಿಗಳ್ಯಾರೂ ಮಾಸ್ ಲೀಡರ್ ಆಗಿ ಬೆಳೆದಿಲ್ಲ" ಎನ್ನುತ್ತಾರೆ ಕಾಂಗ್ರೆಸ್ ಪಕ್ಷದ ವಕ್ತಾರ, ವಿಧಾನ ಪರಿಷತ್ ಮಾಜಿ ಸದಸ್ಯ ಪಿ.ಆರ್.ರಮೇಶ್.
ಮಾಸ್ ಲೀಡರ್ ಆಗಿ ಬೆಳೆಯಲು ಜನಸೇವಾ ಮನೋಭಾವ, ಜನಸ್ಪಂದನೆ ಅತ್ಯಗತ್ಯ. ಹೋರಾಟದ ಧೋರಣೆ ಸಹ ನಾಯಕರನ್ನು ಎತ್ತರಕ್ಕೆ ಬೆಳೆಸುತ್ತದೆ. ರಾಜ್ಯದ ಎರಡನೇ ಹಂತದ ರಾಜಕಾರಣಿಗಳಲ್ಲಿ ಹೋರಾಟದ ಮನೋಭಾವ ಮತ್ತು ಜನಸ್ಪಂದನೆ ಕೊರತೆಯಿಂದಾಗಿ ದೇವರಾಜ್ ಅರಸ್ ಅವರಂತೆ ಜನಮಾನಸದ ನಾಯಕರಾಗಿ ಬೆಳೆಯಲು ಸಾಧ್ಯವಾಗಿಲ್ಲ. ರಾಜಕಾರಣ ಎಂದರೆ ಬಹಳಷ್ಟು ನಾಯಕರುಗಳು ತಾವು ಜನಸೇವಕರು ಎನ್ನುವುದನ್ನು ಅರಿತುಕೊಳ್ಳಬೇಕು. ಬಹಳ ರಾಜಕೀಯ ಮುಖಂಡರು ತಾವು ಜನಸೇವಕರಾಗುವ ಬದಲು ಮಾಲೀಕರೆಂದು ಭಾವಿಸಿರುವುದು ಮಾಸ್ ಲೀಡರ್‌ಗಳಾಗಿ ಹೊರಹೊಮ್ಮಲು ಸಾಧ್ಯವಾಗಿಲ್ಲ ಎಂಬುವುದು ಅವರ ಅಭಿಪ್ರಾಯವಾಗಿದೆ.
ರಾಜ್ಯ ಭವಿಷ್ಯದ ದಿನಗಳಲ್ಲಿ ಮಾಸ್ ಲೀಡರ್‌ಗಳ ಕೊರತೆಯನ್ನು ಎದುರಿಸುವ ಸಾಧ್ಯತೆ ನಿಚ್ಛಳವಾಗಿದೆ. ಮಾಜಿ ಪ್ರಧಾನಿ ದೇವೇಗೌಡರು ಹೆಚ್ಚು ವಯಸ್ಸಾಗಿದ್ದರಿಂದ ರಾಜಕಾರಣದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ 80 ವರ್ಷ ವಯಸ್ಸಾಗಿದ್ದು, ಅವರು ಚುನಾವಣಾ ರಾಜಕಾರಣಕ್ಕೆ ವಿದಾಯ ಘೋಷಣೆ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 75 ವರ್ಷ ತುಂಬಿದ್ದು, ಇದು ತಮ್ಮ ಕೊನೆ ಚುನಾವಣೆ ಎಂದು ಪ್ರಕಟಿಸಿದ್ದಾರೆ. ಇವರ ನೆರಳಲ್ಲಿ ಎರಡನೇ ಹಂತದ ನಾಯಕರುಗಳು ಮಾಸ್ ಲೀಡರ್‌ಗಳಾಗಿ ಬೆಳೆಯುವ ಅವಶ್ಯಕತೆ ರಾಜಕೀಯ ಪಕ್ಷಗಳಿಗೆ ಇದೆ.
ಇದನ್ನೂ ಓದಿ: ದೇವೇಗೌಡರ ನಿವಾಸದಲ್ಲಿ ತಡರಾತ್ರಿ ನಡೆದ ಸಭೆ; ಬಗೆಹರಿಯದ ಹಾಸನ ಟಿಕೆಟ್ ಬಿಕ್ಕಟ್ಟು