ಬೆಂಗಳೂರು: ಆರ್ಥಿಕ ಸಂಕಷ್ಟದಿಂದ ಸ್ಥಗಿತಗೊಂಡಿದ್ದ ಮೈಸೂರಿನ ರೀಡ್ ಆ್ಯಂಡ್ ಟೇಲರ್ ಕಾರ್ಖಾನೆ ಮುಂದಿನ ತಿಂಗಳು ಆರಂಭಿಸಲು ಹೊಸ ಆಡಳಿತ ಮಂಡಳಿ ಹಾಗೂ ಕಾರ್ಮಿಕರು ಸಮ್ಮತಿ ಸೂಚಿಸಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಸಮ್ಮುಖದಲ್ಲಿ ವರುಣ ಕ್ಷೇತ್ರದ ಶಾಸಕ ಯತೀಂದ್ರ ನೇತೃತ್ವದಲ್ಲಿ ನೂತನ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ಜೊತೆ ನಡೆದ ಸುದೀರ್ಘ ಸಭೆಯಲ್ಲಿ ಕುರಿತು ಒಮ್ಮತಕ್ಕೆ ಬರಲಾಗಿದೆ ಎಂದು ತಿಳಿದು ಬಂದಿದೆ.
ರೀಡ್ ಆ್ಯಂಡ್ ಟೇಲರ್ ಕಂಪನಿ ಆರ್ಥಿಕ ಸಂಕಷ್ಟದಿಂದ ಸ್ಥಗಿತಗೊಂಡಿತ್ತು. ಇದರಿಂದ ಸುಮಾರು 800 ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದರು. ಈಗ ಕಾರ್ಖಾನೆಯನ್ನು ಫಿನ್ ಕ್ವೆಸ್ಟ್ ಫೈನಾನ್ಸ್ ಸಂಸ್ಥೆ ಕ್ರೆಹಾರ್ ಸಂಸ್ಥೆಯ ಹೆಸರಿನಲ್ಲಿ ಪುನರಾರಂಭಿಸಲು ನಿರ್ಧರಿಸಿದೆ. ಆದರೆ, ಹಿಂದೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಎಲ್ಲ ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ಹೊಸ ಆಡಳಿತ ಮಂಡಳಿ ಹಿಂದೇಟು ಹಾಕಿರುವುದರಿಂದ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವೆ ತಿಕ್ಕಾಟಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ವರುಣಾ ಕ್ಷೇತ್ರದ ಶಾಸಕ ಡಾ. ಯತೀಂದ್ರ ನೇತೃತ್ವದಲ್ಲಿ ನಿಯೋಗ ಕಾರ್ಮಿಕ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ನೂತನ ಆಡಳಿತ ಮಂಡಳಿಯವರು 560 ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದು, 250 ಕಾರ್ಮಿಕರಿಗೆ ಗ್ರ್ಯಾಚುಟಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಆಡಳಿತ ಮಂಡಳಿಯ ತೀರ್ಮಾನದಂತೆ ಕಾರ್ಮಿಕ ಒಕ್ಕೂಟವೂ ಸಹಮತ ವ್ಯಕ್ತಪಡಿಸಿದೆ ಎಂದು ತಿಳಿದು ಬಂದಿದೆ.
ವರುಣಾ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ರೀಡ್ ಆ್ಯಂಡ್ ಟೇಲರ್ ಕಾರ್ಖಾನೆ ಆರಂಭಿಸುವ ಕುರಿತು ನಾವು ಕಾರ್ಮಿಕ ಸಚಿವರನ್ನು ಭೇಟಿ ಮಾಡಿದ್ದೇವೆ. ಹೊಸ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ನಡುವೆ ಸಹಮತ ವ್ಯಕ್ತವಾಗಿದ್ದು, ಮುಂದಿನ ತಿಂಗಳು ಆರಂಭವಾಗುತ್ತದೆ ಎಂದು ತಿಳಿಸಿದ್ದಾರೆ.