ಆನೇಕಲ್ : ಕಾರ್ಮಿಕನೋರ್ವನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ಉಪವಿಭಾಗದ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹತ್ಯೆಗೀಡಾದ ಕಾರ್ಮಿಕನನ್ನು ಕಲಬುರಗಿ ಮೂಲದ ಸಿದ್ರಾಮಪ್ಪ(22) ಎಂದು ಗುರುತಿಸಲಾಗಿದೆ. ಈತ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಎಸ್ಎಫ್ಒ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ.
ಬೊಮ್ಮಸಂದ್ರ-ಜಿಗಣಿ ಹೊರವರ್ತುಲ ರಸ್ತೆಯ ರೂಪೇಶ್ ಹೋಟೆಲ್ ಮುಂಭಾಗ ಸಹ ಕಾರ್ಮಿಕರೇ ಸಿದ್ರಾಮಪ್ಪನ ಎದೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಕಾರ್ಮಿಕನನ್ನು ಜಿಗಣಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.
ಘಟನೆ ವಿವರ : ಶುಕ್ರವಾರದಂದು ಸಿದ್ರಾಮಪ್ಪನ ಹುಟ್ಟುಹಬ್ಬ ಆಚರಣೆ ವೇಳೆ ಸ್ನೇಹಿತರ ನಡುವೆ ಮಾತು ತಾರಕಕ್ಕೇರಿ ವೈಮನಸ್ಸು ಏರ್ಪಟ್ಟಿತ್ತು. ಇದೇ ವೇಳೆ ಜೊತೆಗಿದ್ದ ಸಹ ಕಾರ್ಮಿಕರೇ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಪ್ರಕರಣ ಸಂಬಂಧ ಹೆಬ್ಬಗೋಡಿ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಕೊಲೆ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.