ಬೆಂಗಳೂರು: ಇಬ್ಬರು ಹಿರಿಯ ಮಹಿಳಾ ಅಧಿಕಾರಿಗಳ ಜಟಾಪಟಿಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಕೂಡಲೇ ಮುಖ್ಯ ಕಾರ್ಯದರ್ಶಿ ಇಬ್ಬರು ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಜೆ.ಪಿ.ನಗರದ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಖ್ಯ ಕಾರ್ಯದರ್ಶಿ ಕೂಡಲೇ ಇಬ್ಬರನ್ನು ಕರೆದು ಎಚ್ಚರಿಕೆ ನೀಡಬೇಕು. ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಿದ್ದಾರೆ ಎನ್ನುವುದಕ್ಕೆ ಇದೊಂದು ಉದಾಹರಣೆ. ಸರ್ಕಾರ ಇದೆಯಾ? ಇಲ್ಲವಾ? ಎನ್ನುವ ಅನುಮಾನ ಉಂಟಾಗಿದೆ ಎಂದು ಟೀಕಿಸಿದರು.
ಗೃಹ ಸಚಿವರ ಹೇಳಿಕೆಗೆ ಕಿಡಿ: ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಐಎಎಸ್, ಐಪಿಎಸ್ ಅಧಿಕಾರಿಗಳನ್ನು ದೇವಮಾನವರು ಎಂದು ಕರೆದಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಅವರು, ಇದರಿಂದ ಜನತೆಗೆ ಯಾವ ಸಂದೇಶ ಕೊಡುತ್ತಿದ್ದಾರೆ ಎಂದು ಕಿಡಿಕಾರಿದರು. ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ಬೆಳವಣಿಗೆಗಳನ್ನು ನೋಡಿದರೆ ಸರಕಾರ ಇಲ್ಲದ ಶೂನ್ಯ ಸ್ಥಿತಿ ಇದೆ ಎನ್ನುವ ಭಾವನೆ ಬರುತ್ತಿದೆ. ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು.
ನಾನು ಕೂಡ ಸರ್ಕಾರವನ್ನು ನಡೆಸಿದ್ದೇನೆ. ಆಗೆಲ್ಲ ಹೀಗೆ ಆಗಲು ಬಿಟ್ಟಿರಲಿಲ್ಲ. ಅಧಿಕಾರಿಗಳಿಗೆ ಒಂದಿಷ್ಟು ಮಾರ್ಗಸೂಚಿಗಳು, ನಿಯಮಾವಳಿಗಳು ಇವೆ. ಅವರು ಜನತೆಗೆ ಉತ್ತರದಾಯಿ ಆಗಿರಬೇಕು. ಅವರು ಸೋಷಿಯಲ್ ಮೀಡಿಯಾದಲ್ಲಿ ಬೀದಿ ರಂಪ ಮಾಡಿಕೊಳ್ಳುವ ಬದಲು ಮುಖ್ಯ ಕಾರ್ಯದರ್ಶಿ ಬಳಿ ಹೋಗಿ ಸಮಸ್ಯೆ ಪರಿಹಾರ ಮಾಡಿಕೊಳ್ಳಬಹುದಿತ್ತು. ಇದೊಂದೇ ಅಲ್ಲ, ಅನೇಕ ಪ್ರಕರಣಗಳು ನಡೆದಿವೆ. ಅಧಿಕಾರಿಗಳಿಗೆ ಸರ್ಕಾರದ ಮೇಲೆ ಗೌರವ ಇಲ್ಲ.
ಸಾರಾ ಮಹೇಶ್ ಅವರ ಮೇಲೆ ಒಬ್ಬ ಮಹಿಳಾ ಅಧಿಕಾರಿ ಆರೋಪ ಮಾಡಿದ್ದು ಗೊತ್ತಿದೆ, ಆ ಅಧಿಕಾರಿ ಎಲ್ಲಿ ಹೋದರೂ ವಿವಾದವೇ. ಯಾಕೆ ಬೇಕು ಇಂಥ ವಿವಾದಗಳು? ನನಗೆ ಗೊತ್ತಿರುವ ಕೆಲ ಮಾಹಿತಿಗಳನ್ನು ಹೊರಗಿಟ್ಟರೆ ಸರಕಾರಕ್ಕೆ ತಲೆ ಎತ್ತಿ ನಿಲ್ಲಲು ಆಗುವುದಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸಾರಾ ಮಹೇಶ್ ಅವರು ಆ ಮಹಿಳಾ ಅಧಿಕಾರಿ ವಿರುದ್ಧ ಸದನದಲ್ಲಿ ಹಕ್ಕುಚ್ಯುತಿ ನಿರ್ಣಯ ಮಂಡಿಸಿದಾಗ, ಆ ಅಧಿಕಾರರಿಯ ಪರವಾಗಿ ಯಾರೆಲ್ಲ, ಹೇಗೆಲ್ಲಾ ಒತ್ತಡ ಹಾಕಿದರು, ಎಂತೆಂಥ ಹುದ್ದೆಯಲ್ಲಿದ್ದವರು ಪ್ರಭಾವ ಬೀರಿದರು ಎನ್ನುವುದು ನನಗೆ ಗೊತ್ತಿದೆ. ಕೊನೆಗೆ ನಾನೇ ಸಾರಾ ಮಹೇಶ್ ಅವರಿಗೆ, ಹೋಗಲಿ ಬಿಟ್ಟು ಬಿಡಿ ಎಂದು ಹೇಳಿದೆ ಎಂದು ಕುಮಾರಸ್ವಾಮಿ ಹೇಳಿದರು.
ಎರಡನೇ ಪಟ್ಟಿ ಶೀಘ್ರ: ನಮ್ಮ ಪಕ್ಷದಲ್ಲಿ ಟಿಕೆಟ್ ಗೊಂದಲ ಇಲ್ಲ. ಎರಡನೇ ಪಟ್ಟಿ ಶೀಘ್ರದಲ್ಲಿ ಹೊರಬರಲಿದೆ. ಅದರಲ್ಲಿ ಹಾಸನ ಅಭ್ಯರ್ಥಿಯ ಹೆಸರು ಇರುತ್ತದೆ ಎಂದು ತಿಳಿಸಿದರು.
ಜನರಿಗೆ ಹಂಚಿರುವ ಅಗ್ಗದ ಕುಕ್ಕರ್‌ಗಳು ಜೀವ ತೆಗೆಯುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕುಮಾರಸ್ವಾಮಿ, 150 ಸೀಟು ಗೆದ್ದಾಯ್ತು ಅನ್ನುವವರು ಕುಕ್ಕರ್ ಸೀರೆ ಹಂಚಿಕೊಂಡು ಹೋಗ್ತಾ ಇದಾರೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಕಾಂಗ್ರೆಸ್‌ನವರು ಅಗ್ಗದ ಕುಕ್ಕರ್ ಕೊಟ್ಟು ಜನರ ಬದುಕು ಹಾಳು ಮಾಡುತ್ತಿದ್ದಾರೆ. ಇಂಥ ಅಗ್ಗದ ತಂತ್ರಗಳಿಗೆ ನನ್ನ ವಿರೋಧ ಇದೆ ಎಂದರು. ಜೆಡಿಎಸ್ ಸಂಘಟನೆ ಹಾಗೂ ಮುಂಬರುವ ವಿಧಾನಸಭೆ ಚುನಾವಣೆಗೆ ಭರದಿಂದ ಸಿದ್ಧತೆ ನಡೆಸಿರುವ ಕುಮಾರಸ್ವಾಮಿ ಇಂದು ಪಕ್ಷದ ಸಾವಿರಾರು ಕಾರ್ಯಕರ್ತರ ಜೊತೆ ನೇರವಾಗಿ ಫೋನ್ ಕರೆಯಲ್ಲಿ ಮಾತನಾಡಿದರು.
ಇದನ್ನೂ ಓದಿ: ಡಿ ರೂಪಾ ಮತ್ತು ರೋಹಿಣಿ ಸಿಂಧೂರಿಗೆ ನೋಟಿಸ್ ನೀಡಲು ಸಿಎಂ ಬೊಮ್ಮಾಯಿ ಆದೇಶ