ಬೆಂಗಳೂರು: ಬಿಜೆಪಿಗೆ ಗುಡ್ಬೈ ಹೇಳಲು ನಿರ್ಧರಿಸಿರುವ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಜೆಡಿಎಸ್ ಸೇರ್ಪಡೆಯಾಗುವುದು ಖಚಿತವಾಗಿದೆ. ಚಿತ್ರದುರ್ಗದಲ್ಲಿ ಇಂದು ಮಧ್ಯಾಹ್ನ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ, ಇಂದೇ ಪಕ್ಷ ಸೇರಲಿದ್ದಾರೆ. ಪಕ್ಷ ಸೇರ್ಪಡೆ ಬಳಿಕ ಅವರಿಗೆ ಕುಮಾರಸ್ವಾಮಿ ಅವರು ಅಲ್ಲೇ ಬಿ ಫಾರಂ ನೀಡಲಾಗುತ್ತದೆ. ಶಿವಮೊಗ್ಗ ನಗರದಿಂದ ಆಯನೂರು ಮಂಜುನಾಥ್ ಜೆಡಿಎಸ್ನಿಂದ ಕಣಕ್ಕಿಳಿಯುವುದು ಪಕ್ಕಾ ಆಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರು, ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರ ಜೊತೆ ಮಾತುಕತೆ ಆಗಿದೆ. ಇಂದು ಅವರು ಜೆಡಿಎಸ್ನಿಂದ ಸ್ಪರ್ಧೆ ಮಾಡುವುದಾಗಿ ಘೋಷಿಸಲಿದ್ದಾರೆ. ಇನ್ನೊಬ್ಬ ಬಿಜೆಪಿ ಶಾಸಕ ನೆಹರು ಓಲೇಕಾರ್ ಅವರ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.
ಜೆಪಿ ನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆಯನೂರು ಬಿಜೆಪಿಯಿಂದ ಹೊರಬರುವುದಾಗಿ ಘೋಷಿಸಿದ್ದಾರೆ. ಶಿವಮೊಗ್ಗ ನಗರ ಕ್ಷೇತ್ರದಿಂದ ಜೆಡಿಎಸ್ ಪಕ್ಷದಡಿ ಸ್ಪರ್ಧೆ ಮಾಡಲಿದ್ದಾರೆ. ಈ ಬಗ್ಗೆ ಕಳೆದ 6-7 ತಿಂಗಳಿನಿಂದಲೇ ಮಾತುಕತೆಗಳು ನಡೆದಿದ್ದವು. ನಟ ಸುದೀಪ್ ಯಾರ ಪರವಾದರೂ ಪ್ರಚಾರ ಮಾಡಬಹುದು. ಅದಕ್ಕೆ ಹೆಚ್ಚು ಮಹತ್ವ ಕೊಡಬೇಕಿಲ್ಲ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕೆಲವು ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗುತ್ತಾರೆ. ನಾಳೆ ಹಾಸನದಲ್ಲಿ ನಾನು ಸ್ವರೂಪ್ ಪ್ರಕಾಶ್ ಅವರ ಪರವಾಗಿ ಪ್ರಚಾರಕ್ಕೆ ಹೋಗುತ್ತೇನೆ ಎಂದು ತಿಳಿಸಿದರು.
ಇಂದೇ 70 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: 70 ಅಭ್ಯರ್ಥಿಗಳ ಪಟ್ಟಿ ಇಂದೇ ಬಿಡುಗಡೆ ಆಗಲಿದೆ. ಜೆಡಿಎಸ್ ಕಚೇರಿಯಲ್ಲಿ ಪಟ್ಟಿ ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಿದರು.
ಮಂಡ್ಯದಲ್ಲಿ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ನನ್ನನ್ನು ಅವರ ಮಟ್ಟಕ್ಕೆ ಬೆಳೆಸಲು ಹೋಗಬೇಡಿ. ನಾನು ಆ ಮಟ್ಟಕ್ಕೆ ಬೆಳೆದಿರುವ ವ್ಯಕ್ತಿ ಅಲ್ಲ. ಅವರು ನೀಡಿದ ಕೊಡುಗೆಯನ್ನು ನಾನು ಕೊಡಬೇಕಾಗಿಲ್ಲ. ಹೋರಾಟ ಮಾಡೋದು ಬಿಡೋದು ಬೇರೆ ಎಂದು ಸುಮಲತಾ ಅವರ ಹೆಸರೇಳದೇ ಪರೋಕ್ಷವಾಗಿ ಟೀಕಿಸಿದರು.
ನಾನು ಚನ್ನಪಟ್ಟಣದಲ್ಲಿ ಅರ್ಜಿ ಹಾಕಿದ್ದೇನೆ. ಬ್ಯಾಂಕ್ ಅಕೌಂಟ್ ಓಪನ್ ಮಾಡಿರುವ ಬಗ್ಗೆ ಗೊಂದಲ ಬೇಡ. ಒಂದಾರಗುಪ್ಪೆಯಲ್ಲಿ ಖಾತೆ ಓಪನ್ ಮಾಡಿದ್ದೇನೆ. ವಿಜಯ ಬ್ಯಾಂಕ್ನಲ್ಲಿ ಖಾತೆ ಓಪನ್ ಮಾಡಬೇಕಿತ್ತು. ಮಂಡ್ಯದಲ್ಲಿ ಕೇಂದ್ರ ಕಚೇರಿ ಇರೋದಕ್ಕೆ ಅಲ್ಲಿ ಖಾತೆ ಆರಂಭಿಸಲಾಗಿದೆ ಅಷ್ಟೆ. ಚುನಾವಣೆಗಾಗಿ ನಾನು ಖಾತೆ ತೆಗೆದಿದ್ದೇನೆ. ವಿಜಯ ಬ್ಯಾಂಕ್ದು ಟೆಕ್ನಿಕಲ್ ಸಮಸ್ಯೆ ಇತ್ತು. ಹಾಗಾಗಿ ಹೆಚ್ಡಿಎಫ್ಸಿ ಖಾತೆ ತೆಗೆಯಲಾಗಿದೆ. ನನ್ನ ವಿರುದ್ಧ ಅವರ(ಸುಮಲತಾ) ಹೆಸರು ಹೇಳ್ತಾ ಇದ್ದೀರಲ್ಲಾ, ಹೋಲಿಕೆ ಮಾಡಬೇಡಿ ಎಂದರು.
ಮುಂದೆ ಏನು ಮಾಡಬೇಕು ಅಂತ ಹೇಳುತ್ತೇನೆ. ನಮ್ಮ ಕುಟುಂಬ ಸೋಲು ಗೆಲುವು ಕಂಡಿದೆ. ನಾನು ಚನ್ನಪಟ್ಟಣ ಬಿಟ್ಟು ಎಲ್ಲೂ ಹೋಗಲ್ಲ. ಚನ್ನಪಟ್ಟಣದಲ್ಲಿ ಹೆಚ್ಚಿನ ಲೀಡ್ನಲ್ಲಿ ಗೆಲ್ಲುತ್ತೇನೆ. ಮಂಡ್ಯ ಜಿಲ್ಲೆ ಕಾರ್ಯಕರ್ತರಿಗೂ ಬೈದಿದ್ದೇನೆ. ಪದೇ ಪದೇ ನನ್ನ ಹೆಸರು ತಂದು ಯಾಕೆ ಅವಮಾನ ಮಾಡುತ್ತಿದ್ದೀರಾ ಅಂತ. ಅಲ್ಲಿ ಸ್ಥಳೀಯ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ ಎಂದು ಹೇಳಿದರು.
ಓದಿ: ಇಂದು ವಿಧಾನ ಪರಿಷತ್ ಸ್ಥಾನ, ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಆಯನೂರು ಮಂಜುನಾಥ್ ರಾಜೀನಾಮೆ