ಬೆಂಗಳೂರು: ನಗರದ ಕುಮಾರಸ್ವಾಮಿ ಲೇಔಟ್ ಪೊಲೀಸರು ದಾಳಿ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ 13 ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳು ಬೆಂಗಳೂರು ದಕ್ಷಿಣ ವಿಭಾಗದ ರೌಡಿಗಳಾದ ಮಲಯಾಳಿ ಮಧು, ಲಿಖಿನ್, ಅಯ್ಯಪ್ಪ, ಕಾರಿಯಪ್ಪ, ಸಾಗರ್, ಸುಮಂತ್, ಕಿರಣ್, ಮುನಿಕೃಷ್ಣ, ಶಿವರಾಜ್, ಜಬಿವುಲ್ಲಾ, ಪ್ರಮೋದ್, ಮಂಜುನಾಥ, ಸ್ಟಾಲಿನ್ ಎಂದು ತಿಳಿದು ಬಂದಿದೆ.
ಬಂಧಿತರೆಲ್ಲರೂ ಕುಮಾರಸ್ವಾಮಿ ಲೇಔಟ್ ರೌಡಿಶೀಟರ್ ಮಲಯಾಳಿ ಮಧು ಸಹಚರರಾಗಿದ್ದು, ಐಷಾರಾಮಿ ಜೀವನ ನಡೆಸಲು ಗಾಂಜಾ ಮಾರಾಟಕ್ಕೆ ಇಳಿದಿದ್ದರು ಎನ್ನಲಾಗಿದೆ. ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಗಾಂಜಾ ಮಾರಾಟ ಹಾಗೂ ರೌಡಿಸಂ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು. ಸದ್ಯ ಪೊಲೀಸರು ದಾಳಿ ನಡೆಸಿ ಬಂಧಿತರಿಂದ 21 ಕೆಜಿ 350 ಗ್ರಾಂ ತೂಕದ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಇದನ್ನು ಓದಿ: ದೇಶದಲ್ಲಿ ಕೊರೊನಾ ಇಳಿಕೆ: ಕಳೆದ 24 ಗಂಟೆಯಲ್ಲಿ 38,164 ಕೇಸ್ ಪತ್ತೆ
ವರ್ಷದ ಹಿಂದೆ ಜೆಪಿ ನಗರದಲ್ಲಿ ನಡೆದಿದ್ದ ಜೋಡಿ ಕೊಲೆ ಸಂಬಂಧ ಈ ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ ಆ ಬಳಿಕ ಜೈಲಿನಿಂದ ಹೊರಬಂದ ಅವರಿಗೆ ಹಣದ ಕೊರತೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಅಕ್ರಮವಾಗಿ ದುಡ್ಡು ಗಳಿಸಲು ಮತ್ತು ರೌಡಿಸಂ ಹೆಚ್ಚು ಮಾಡಲು ಗಾಂಜಾ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಸದ್ಯ ಎನ್ಡಿಪಿಎಸ್ ಆಕ್ಟ್ ಅಡಿ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.