ಬೆಂಗಳೂರು: ವಿದ್ಯುತ್ ಚಾಲಿತ ಬಸ್ಗಳ ಸಂಚಾರಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮುನ್ನುಡಿ ಬರೆದಿದೆ. ನಗರ ಸಾರಿಗೆಗೆ ಸೀಮಿತವಾಗಿದ್ದ ಎಲೆಕ್ಟ್ರಿಕ್ ಬಸ್ಗಳ ಸಂಚಾರವನ್ನು ಇದೀಗ ಅಂತರ ನಗರಕ್ಕೆ ವಿಸ್ತರಣೆ ಮಾಡಿರುವ ಕೆಎಸ್ಆರ್‌ಟಿಸಿ ಸಮೂಹ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಹೊರಟಿದೆ. ಜೈವಿಕ ಇಂಧನ ಬಳಕೆಗೆ ಉತ್ತೇಜಿಸಲು ಶೂನ್ಯ ಮಾಲಿನ್ಯದತ್ತ ಸಾಗಲು ಸಾರಿಗೆ ಸಂಸ್ಥೆ ಮುಂದಾಗುತ್ತಿದೆ.
ರಾಜ್ಯ ರಸ್ತೆ ಸಾರಿಗೆಯ ಮೊದಲ ವಿದ್ಯುತ್ ಚಾಲಿತ ಅಂತರನಗರ ಬಸ್ ಸೇವೆಗೆ ಸಾರಿಗೆ ಸಚಿವ ಬಿ ಶ್ರೀರಾಮುಲು ಚಾಲನೆ ನೀಡಿದರು. ಶಾಂತಿನಗರದಲ್ಲಿರುವ ಕೆಎಸ್ಆರ್‌ಟಿಸಿ ಕೇಂದ್ರ ಕಚೇರಿಯ ಮುಂಭಾಗದಲ್ಲಿ ಪರಿಸರ ಸ್ನೇಹಿ ಇ ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಭಾರತ ಸರ್ಕಾರದ ಮೇಕ್ ಇನ್ ಇಂಡಿಯಾ ವಿದ್ಯುತ್ ಬಸ್ ಫೇಮ್-2 ಯೋಜನೆಯಡಿ 50 ಅಂತರ ನಗರ ಹವಾ ನಿಯಂತ್ರಿತ ವಿದ್ಯುತ್ ಚಾಲಿತ ಬಸ್ಸುಗಳನ್ನು ಪಡೆಯುತ್ತಿದ್ದು, ಹಂತ ಹಂತವಾಗಿ ಎಲ್ಲ ಬಸ್ ಗಳನ್ನು ರಸ್ತೆಗಿಳಿಸಲಾಗುತ್ತದೆ.
ಹೊಸದಾಗಿ ರಸ್ತೆಗಿಳಿಯುತ್ತಿರುವ ಇ ಬಸ್ಗಳಿಗೂ ಬ್ರಾಂಡ್ ಹೆಸರು, ಟ್ಯಾಗ್ ಲೈನ್ ನೀಡಲಾಗಿದೆ. ಈಗಾಗಲೇ ಐರಾವತ ಬ್ರ್ಯಾಂಡ್ ನಲ್ಲಿ ಆರಾಮವಾಗಿ ಮಗುವಿನಂತೆ ನಿದ್ರಿಸಿ, ಅಂಬಾರಿ ಬ್ರಾಡ್ ನಲ್ಲಿ ಕನಸುಗಳೊಂದಿಗೆ ಪ್ರಯಾಣಿಸಿ ಎನ್ನುವ ಟ್ಯಾಗ್ ಲೈನ್ ನೊಂದಿಗೆ ಬಸ್ಗಳು ಗಮನ ಸೆಳೆದಿದ್ದು, ಇದೀಗ ಇ ಬಸ್ ಗಳಿಗೆ ಇವಿ ಪವರ್ ಪ್ಲಸ್ ಬ್ರಾಂಡ್ ಹೆಸರಿನಲ್ಲಿ ಅತ್ಯುತ್ತಮ ಅನುಭವ ಎಂಬ ಟ್ಯಾಗ್ ಲೈನ್ ನೊಂದಿಗೆ ಬಸ್ಗಳನ್ನು ರಸ್ತೆಗಿಳಿಸಲಾಗುತ್ತಿದೆ.
EV ಪವರ್ ಪ್ಲಸ್: ಇನ್ನು, ನಿಗಮವು ತನ್ನ ವಿದ್ಯುತ್ ವಾಹನಗಳಿಗೆ ಸ್ಪರ್ಧೆಯ ಮೂಲಕ ಸಾರ್ವಜನಿಕರಿಂದ ಹೆಸರುಗಳನ್ನು ಸ್ವೀಕರಿಸಿತ್ತು. 20 ಸಾವಿರಕ್ಕೂ ಹೆಚ್ಚಿನ ಜನ ಹೆಸರುಗಳನ್ನು ಸೂಚಿಸಿದ್ದರು. ಅಂತಿಮವಾಗಿ ದಾವಣಗೆರೆಯ ಅಮಿತ್ ಅಚ್ಚು ಸೂಚಿಸಿದ್ದ 'EV ಪವರ್ ಪ್ಲಸ್' ಹೆಸರನ್ನು ಬ್ರಾಂಡ್ ನೇಮ್ ಆಗಿ ರಾಮಮೂರ್ತಿ ಗೋವಿಂದರಾಜನ್ ಸೂಚಿಸಿದ್ದ ಟ್ಯಾಗ್ ಲೈನ್ 'ಅತ್ಯುತ್ತಮ ಅನುಭವ', ಹೆಸರನ್ನು( ‘EV Power Plus’ – e-Xperience e-levated’) ಇವಿ ಬಸ್ ಗೆ ಹೆಸರಿಸಲಾಗಿದೆ.
ಚಾರ್ಜಿಂಗ್ ಕೇಂದ್ರ ಸ್ಥಾಪನೆ: ಬೆಂಗಳೂರು - ಮೈಸೂರು, ಬೆಂಗಳೂರು - ಮಡಿಕೇರಿ, ಬೆಂಗಳೂರು- ವಿರಾಜಪೇಟೆ, ಬೆಂಗಳೂರು- ದಾವಣಗೆರೆ, ಬೆಂಗಳೂರು- ಶಿವಮೊಗ್ಗ, ಬೆಂಗಳೂರು-ಚಿಕ್ಕಮಗಳೂರು ಮಾರ್ಗಗಳಲ್ಲಿ ಇ ಬಸ್ ಗಳನ್ನು ಸಂಚರಿಸಲು ಯೋಜಿಸಲಾಗಿದೆ. ವಿದ್ಯುತ್ ವಾಹನಗಳ ಚಾರ್ಜಿಂಗ್ ಕೇಂದ್ರವನ್ನು ಬೆಂಗಳೂರು ಮತ್ತು ಮೈಸೂರಿನಲ್ಲಿ ಈಗಾಗಲೇ ಸ್ಥಾಪಿಸಲಾಗಿದೆ. ಇ ಬಸ್ ಗಳ ಸಂಚಾರಕ್ಕೆ ಪೂರಕವಾಗಿ ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಚಾರ್ಜಿಂಗ್ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ.
ಮೃತ ಚಾಲಕರ ಕುಟುಂಬಕ್ಕೆ1 ಕೋಟಿ ಪರಿಹಾರ: ಕೆಎಸ್ಆರ್ಟಿಸಿಯು ಸಿಬ್ಬಂದಿಗೆ ರೂ.1 ಕೋಟಿ ಮೊತ್ತದ ಅಪಘಾತ ವಿಮಾ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾದಿಂದ ಪ್ರೀಮಿಯಂ ರಹಿತ ರೂ. 50 ಲಕ್ಷಗಳ ವಿಮೆ ಹಾಗೂ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ರಿಂದ ವಾರ್ಷಿಕ ರೂ.885- ಪ್ರೀಮಿಯಂ (ನೌಕರರಿಂದ) ಪಾವತಿಯ ಮೇರೆಗೆ ರೂ.50 ಲಕ್ಷಗಳ ವಿಮಾ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಎಸ್ಬಿಐ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ : ಅಪಘಾತ ವಿಮಾ ಯೋಜನೆಯ ಒಡಂಬಡಿಕೆಯನ್ನು ಎಸ್ಬಿಐ ಜೊತೆ ಮತ್ತು ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಮಾಡಿಕೊಂಡಿದೆ.ಈ ಯೋಜನೆಯ ಜಾರಿಯ ನಂತರದಲ್ಲಿ ನಿಗಮದ ಚಾಲಕ ಚಿತ್ರದುರ್ಗದ ಜೆ.ಎಸ್. ಉಮೇಶ್, ನವೆಂಬರ್ 20 ರಂದು ಬಸ್ಸು ಅಪಘಾತದಲ್ಲಿ ಮರಣ ಹೊಂದಿದ್ದರು.ಅಪಘಾತ ಪರಿಹಾರ ಧನ 1 ಕೋಟಿ ರೂಪಾಯಿ ಚೆಕ್ ನ್ನು ಸಾರಿಗೆ ಸಚಿವ ಶ್ರೀರಾಮುಲು ಅವರು ಚಾಲಕನ ಕುಟುಂಬ ಸದಸ್ಯರಿಗೆ ವಿತರಿಸಿದರು.
1013 ನೌಕರರಿಗೆ ವರ್ಗಾವಣೆ: 1013 ಸಿಬ್ಬಂದಿಗಳ ಅಂತರ ನಿಗಮ ವರ್ಗಾವಣಾ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ಸಾಂಕೇತಿಕ ಮೂವರು ಸಿಬ್ಬಂದಿಗೆ ಸಾರಿಗೆ ಸಚಿವ ಶ್ರೀರಾಮುಲು ಕೆಎಸ್ಆರ್ ಟಿಸಿ ಅಧ್ಯಕ್ಷ ಚಂದ್ರಪ್ಪ, ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅವರಿಗೆ ವರ್ಗಾವಣೆ ಪತ್ರವನ್ನು ವಿತರಿಸಲಾಯಿತು.
ಇದೇ ವೇಳೆ ಆಂತರಿಕ ನಿಯತಕಾಲಿಕೆ ಸಾರಿಗೆ ಸಂಪದ ಬಿಡುಗಡೆ ಮಾಡಲಾಯಿತು. ನಿಗಮದ ಕಾರ್ಯಚಟುವಟಿಕೆಗಳು, ಜಾರಿಗೊಳಿಸಲಾದ ಕಾರ್ಮಿಕ ಕಲ್ಯಾಣ ಯೋಜನೆಗಳು, ವಿನೂತನ ಕಾರ್ಯಕ್ರಮ, ನೂತನ ಅವಿಷ್ಕಾರ, ವಿಷಯಗಳನ್ನು ಒಳಗೊಂಡ ಆಂತರಿಕ ನಿಯತಕಾಲಿಕ ಸಾರಿಗೆ ಸಂಪದವನ್ನು ಬಿಡುಗಡೆ ಮಾಡಲಾಗಿದ್ದು ನಿಗಮದ ಸಮಸ್ತ ಸಿಬ್ಬಂದಿಗೆ ಮಾಹಿತಿಗಾಗಿ ವಿತರಿಸಲಾಗುತ್ತಿದೆ.
ಇದನ್ನೂಓದಿ:ಲಿಂಗಾಯತ, ಒಕ್ಕಲಿಗರಿಗೆ 2D - 2C ಪ್ರವರ್ಗ ಮೀಸಲಾತಿ: ಸರ್ಕಾರದ ರಿಸರ್ವೇಶನ್ ಮರು ಹಂಚಿಕೆ ಲೆಕ್ಕಾಚಾರವೇನು?