ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ತನಿಖಾ ತಂಡಗಳ ಮೂಲಕ ನವೆಂಬರ್ ತಿಂಗಳಲ್ಲಿ ಟಿಕೆಟ್ ಪಡೆಯದೇ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಂದ 8 ಲಕ್ಷ ರೂ. ದಂಡದ ರೂಪದಲ್ಲಿ ಹಣ ವಸೂಲಿ ಮಾಡಿದೆ.
ಕೆಎಸ್ಆರ್ಟಿಸಿ ಬಸ್‌ನಲ್ಲಿ ನಿತ್ಯ ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ. ಹೀಗೆ ಪ್ರಯಾಣಿಸುವವರಲ್ಲಿ ಕೆಲವರು ನಿರ್ವಾಹಕರಿಗೆ ಚಳ್ಳೆಹಣ್ಣು ತಿನ್ನಿಸಿ ಟಿಕೆಟ್ ಪಡೆಯದೇ ಜರ್ನಿ ಮಾಡಿದ್ದಾರೆ. ಹೀಗೆ ಟಿಕೆಟ್‌ರಹಿತವಾಗಿ ಪ್ರಯಾಣಿಸಿದ 6,522 ಪ್ರಯಾಣಿಕರಿಗೆ ದಂಡ ಹಾಕಲಾಗಿದೆ. ನವೆಂಬರ್ ಒಂದೇ ತಿಂಗಳಲ್ಲಿ ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ 47,476 ವಾಹನಗಳನ್ನು ತನಿಖೆಗೊಳಪಡಿಸಲಾಗಿದೆ. ಅದರಲ್ಲಿ 5,248 ಪ್ರಕರಣಗಳನ್ನು ಪತ್ತೆ ಹಚ್ಚಿ, 6,522 ಟಿಕೆಟ್ ರಹಿತ ಪ್ರಯಾಣಿಕರಿಂದ 8,67,425/-ರೂಗಳನ್ನು ದಂಡದ ರೂಪದಲ್ಲಿ ವಸೂಲಿ ಮಾಡಿದೆ.
ನಿಗಮದ ಆದಾಯದಲ್ಲಿ ಸೋರಿಕೆ ಆಗುತ್ತಿದ್ದ 1,11,257,/- ರೂಗಳನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದು, ತಪ್ಪಿತಸ್ಥರ ವಿರುದ್ದ ಇಲಾಖಾ ರೀತಿ ಸೂಕ್ತ ಕ್ರಮ ಜರುಗಿಸಲಾಗಿದೆ ಎಂದು ನಿಗಮ ತಿಳಿಸಿದೆ.