ಬೆಂಗಳೂರು: ದೇಶದ ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಪ್ರಪ್ರಥಮವಾಗಿ ತನ್ನ ಸಿಬ್ಬಂದಿಗಾಗಿ ಜಾರಿ ಮಾಡಿದ ವಿನೂತನ 1 ಕೋಟಿ ರೂ ಸಾರಿಗೆ ಸುರಕ್ಷಾ ವಿಮಾ ಯೋಜನೆಗಾಗಿ ಕೆಎಸ್ಆರ್ಟಿಸಿಗೆ ಪ್ರತಿಷ್ಠಿತ ಸ್ಕ್ವಾಚ್ ರಾಷ್ಟ್ರೀಯ ಪ್ರಶಸ್ತಿ-2023 ಲಭಿಸಿದೆ.
ನವದೆಹಲಿಯ ಕಾನ್ಸಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾದಲ್ಲಿ ಸ್ಕ್ವಾಚ್ ಇಂಡಿಯಾ ಆಯೋಜಿಸಿದ 95ನೇ ಸ್ಕ್ವಾಚ್ ಸಮ್ಮಿತ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ಕ್ವಾಚ್ ಗ್ರೂಪ್ ಅಧ್ಯಕ್ಷ ಸಮೀರ್ ಕೊಚ್ಚರ್ ಅವರು ಕೆಎಸ್ಆರ್ಟಿಸಿ ನಿಗಮಕ್ಕೆ ಪ್ರಶಸ್ತಿ ಪ್ರದಾನ ಮಾಡಿದರು. ಮುಖ್ಯ ತಾಂತ್ರಿಕ ಶಿಲ್ಪಿ ಎನ್.ಕೆ.ಬಸವರಾಜು, ಮೈಸೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಶ್ರೀನಿವಾಸ ಅವರು ನಿಗಮದ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.
ಈ ಯೋಜನೆ ಅಡಿ ಈವರೆಗೆ ಕೆಎಸ್ಆರ್ಟಿಸಿ ತನ್ನ 9 ಸಿಬ್ಬಂದಿಯ ಕುಟುಂಬಸ್ಥರಿಗೆ ತಲಾ 1 ಕೋಟಿ ರೂ ಅಪಘಾತ ವಿಮಾ ಪರಿಹಾರದ ಚೆಕ್ ವಿತರಿಸಿದೆ. ದೆಹಲಿ ಮೂಲದ ಸ್ಕ್ವಾಚ್ ಸಂಸ್ಥೆಯು ಸ್ವತಂತ್ರ ವಿಚಾರ ತಜ್ಞ ವೇದಿಕಾ ಸಂಸ್ಥೆಯಾಗಿದ್ದು, 1997ರಲ್ಲಿ ಸ್ಥಾಪಿತವಾಗಿರುತ್ತದೆ. ಈ ಸಂಸ್ಥೆಯು 2003 ರಿಂದ ಸ್ಕ್ವಾಚ್ ಪ್ರಶಸ್ತಿಯನ್ನು ವಿವಿಧ ಸಂಸ್ಥೆಗಳು ಸಾಧಿಸಿರುವ ಉತ್ತಮ ಆಡಳಿತ ನಿರ್ವಹಣೆ, ಹಣಕಾಸು, ತಾಂತ್ರಿಕತೆ ಅಳವಡಿಕೆ ಹಾಗೂ ಆಂತರಿಕ ಬೆಳವಣಿಗೆಗಾಗಿ ನೀಡುತ್ತಾ ಬಂದಿದೆ. ಸಂಸ್ಥೆಗಳು ಮಾಡಿರುವ ಉತ್ತಮ ಸಾಧನೆ ಹಾಗೂ ಅವುಗಳಿಂದ ಉಂಟಾಗಿರುವ ಪರಿಣಾಮಗಳನ್ನು ಆಧರಿಸಿ ಸ್ಕ್ವಾಚ್ ಸಂಸ್ಥೆಯು ತನ್ನ ಅತ್ಯುನ್ನತ ಪ್ರಶಸ್ತಿಗಳನ್ನು ನೀಡುತ್ತದೆ.
ಏನಿದು ಕೋಟಿ ಪರಿಹಾರ ವಿಮಾ ಯೋಜನೆ?: ಕೆಎಸ್ಆರ್ಟಿಸಿ ದೇಶದಲ್ಲಿಯೇ ಪ್ರಪ್ರಥಮವಾಗಿ ಕಾರ್ಮಿಕ ಕಲ್ಯಾಣದ ವಿನೂತನ ಯೋಜನೆ ಅಡಿಯಲ್ಲಿ ತನ್ನ ಸಿಬ್ಬಂದಿಗೆ 1 ಕೋಟಿ ಮೊತ್ತದ ಅಪಘಾತ ವಿಮೆಯನ್ನು (On duty & Off Duty ಅಪಘಾತ) ಜಾರಿಗೊಳಿಸಿದೆ. ಈ ಯೋಜನೆಯಲ್ಲಿ, ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ವತಿಯಿಂದ ಪ್ರೀಮಿಯಂ ರಹಿತ 50 ಲಕ್ಷಗಳ ವಿಮೆ ಹಾಗೂ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಅವರಿಂದ ವಾರ್ಷಿಕ 885 ರೂ/- ಪ್ರೀಮಿಯಂ (ನೌಕರರಿಂದ) ಪಾವತಿಯ ಮೇರೆಗೆ 50 ಲಕ್ಷ ರೂಗಳ ವಿಮೆಯು ಒಳಗೊಂಡಿರುತ್ತದೆ. ಈ ಯೋಜನೆಯಡಿಯಲ್ಲಿ ಸಿಬ್ಬಂದಿ ಕರ್ತವ್ಯದ ಮೇಲಿದ್ದಾಗ ಹಾಗೂ ಕರ್ತವ್ಯದಲ್ಲಿ ಇಲ್ಲದ ಸಂದರ್ಭಗಳಲ್ಲಿಯೂ ಉಂಟಾಗುವ ಅವಘಡಗಳಿಗೂ ಸಹ ಈ ವಿಮಾ ಸೌಲಭ್ಯ ಅನ್ವಯಿಸುತ್ತದೆ.
ಇದಕ್ಕೂ ಮುನ್ನ ಕೂಡ ಕೆಎಸ್ಆರ್ಟಿಸಿಗೆ ಸ್ಕ್ವಾಚ್ ಆರ್ಡರ್ ಆಫ್ ಮೆರಿಟ್ ಮತ್ತು ಸ್ಕ್ವಾಚ್ ಗವರ್ನೆನ್ಸ್ ಪ್ರಶಸ್ತಿ ಲಭಿಸಿತ್ತು. ಸಾರಿಗೆ ಸೇವೆಯಲ್ಲಿ ಸದಾ ಹೊಸತನ್ನು ಪರಿಚಯಿಸುತ್ತಾ ದೇಶದ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಹೊಸ ಹೊಸ ಮೈಲಿಗಲ್ಲು ಸ್ಥಾಪಿಸುತ್ತಿರುವ ಕೆಎಸ್ಆರ್ಟಿಸಿ ಮುಡಿಗೇರಿದ ಪ್ರಶಸ್ತಿಗಳ ಸಂಖ್ಯೆ 300 ದಾಟಿದೆ.