ಬೆಂಗಳೂರು: ತೀವ್ರ ಆಕ್ರೋಶ ಹಾಗೂ ಆಕ್ಷೇಪಣೆ ಬಂದಿರುವ ಹಿನ್ನೆಲೆಯಲ್ಲಿ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯು ಕೆ.ಎಸ್.ಭಗವಾನ್ರ ರಾಮಮಂದಿರ ಏಕೆ ಬೇಡ? ಎಂಬ ಪುಸ್ತಕವನ್ನು ಆಯ್ಕೆ ಪಟ್ಟಿಯಿಂದ ಕೈಬಿಟ್ಟಿದೆ. 2018ರಲ್ಲಿ ವಿವಿಧ ಲೇಖಕರು ಹಾಗೂ ಪ್ರಕಾಶಕರಿಂದ ಗ್ರಂಥಾಲಯ ಇಲಾಖೆಗೆ 10,571 ಕೃತಿಗಳು ಸ್ವೀಕೃತವಾಗಿದ್ದು, ಅದರಲ್ಲಿ 5,109 ಪುಸ್ತಕಗಳನ್ನು ಆಯ್ಕೆ ಮಾಡಿತ್ತು.
ಇದರಲ್ಲಿ ಕೆ.ಎಸ್.ಭಗವಾನ್ರ ರಾಮಮಂದಿರ ಏಕೆ ಬೇಡ? ಎಂಬ ಕೃತಿ ಕೂಡ ಮರುಪರಿಶೀಲನೆಗೆ ಸ್ವೀಕೃತವಾಗಿತ್ತು. ವಿವಾದಿತ ಕೃತಿ ಎಂಬ ಕಾರಣಕ್ಕೆ ಮೊದಲು ಇದನ್ನು ಆಯ್ಕೆ ಮಾಡಿರಲಿಲ್ಲ. ಓದಿನ ವೈವಿದ್ಯತೆಗಾಗಿ ಈ ಕೃತಿಯು ಗ್ರಂಥಾಲಯದಲ್ಲಿ ಇರಲಿ ಎಂಬ ಕಾರಣಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ, ಯಾವಾಗ ವಿರೋಧ ಬಂತೋ ಆಗ ಅದನ್ನ ಕೈಬಿಡಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಡಾ.ದೊಡ್ಡರಂಗೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದರು.
ಸಮಾಜದ ಜನರ ಭಾವನೆಗಳಿಗೆ ಧಕ್ಕೆಯಾಗುವ ಪುಸ್ತಕಗಳನ್ನು ಇಲಾಖೆ ಖರೀದಿಸುವುದಿಲ್ಲ: ಸಚಿವ ಸುರೇಶ್ ಕುಮಾರ್
ಈ ಕುರಿತು ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದ್ದು, ವಿವಿಧ ಪ್ರಕಾಶನಗಳು ಪ್ರತಿ ವರ್ಷ ಆಯಾ ಸಾಲಿನಲ್ಲಿ ಪ್ರಕಟಿಸುವ ಹತ್ತಾರು ಸಾವಿರ ಪುಸ್ತಕಗಳು ರಾಜ್ಯ ಕೇಂದ್ರ ಗ್ರಂಥಾಲಯದ ಗ್ರಂಥಸ್ವಾಮ್ಯ ವಿಭಾಗಕ್ಕೆ ಸಲ್ಲಿಕೆಯಾಗುತ್ತವೆ. ಈ ಎಲ್ಲ ಪುಸ್ತಕಗಳನ್ನು ಆಯ್ಕೆ ಸಮಿತಿ ಕೂಲಂಕುಶವಾಗಿ ಪರಿಶೀಲಿಸಿ ಪಟ್ಟಿ ಅಂತಿಮಗೊಳಿಸಿ ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸುತ್ತದೆ. 2017ನೇ ಸಾಲಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ, 2018ರಲ್ಲಿ 10,571 ಪುಸ್ತಕಗಳು ಸ್ವೀಕೃತವಾಗಿವೆ. ಈ ಪೈಕಿ ಆಯ್ಕೆ ಸಮಿತಿ ಆಯ್ಕೆ ಮಾಡಿದ 5,109 ಪುಸ್ತಕಗಳಲ್ಲಿ ಮೊದಲ 350 ಪುಸ್ತಕಗಳನ್ನು ಮಾತ್ರ ರಾಜಾರಾಂ ಮೋಹನ ರಾಯ್ ಗ್ರಂಥಾಲಯ ಪ್ರತಿಷ್ಠಾನದ ಮೂಲಕ ರಾಜ್ಯದ ವಿವಿಧ ಗ್ರಂಥಾಲಯಗಳಿಗೆ ಖರೀದಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಉಳಿದ ಯಾವುದೇ ಪುಸ್ತಕಗಳ ಖರೀದಿಗೆ ಆರ್ಥಿಕ ಇಲಾಖೆಯಿಂದ ಅನುದಾನ ಬಿಡುಗಡೆಯಾಗಿಲ್ಲ.
ಓದಿ: ವಿಚ್ಛೇದನ ಪಡೆಯದೆ ಮತ್ತೊಬ್ಬ ಪುರುಷನ ಜೊತೆಗಿನ ವಾಸ ಅಪರಾಧ: ಅಲಹಾಬಾದ್ ಹೈಕೋರ್ಟ್
ಹೀಗಾಗಿ ವಿವಾದಿತ ಪುಸ್ತಕವು ಪಟ್ಟಿಯಲ್ಲಿ 4,062ನೇ ಕ್ರಮ ಸಂಖ್ಯೆಯಲ್ಲಿದೆ. ಈ ತನಕ ಈ ಪುಸ್ತಕವೂ ಸೇರಿದಂತೆ ಯಾವುದೇ ಖರೀದಿ ನಡೆದಿಲ್ಲ. ಕರ್ನಾಟಕದ ಎಲ್ಲ (ಯಾವುದೇ) ಗ್ರಂಥಾಲಯಗಳಲ್ಲೂ ಈ ಪುಸ್ತಕ ಓದಿಗೆ ಸಿಗುವಂತೆ ವ್ಯವಸ್ಥೆ ಮಾಡಲಾಗಿಲ್ಲ. ಈ ವಿಚಾರ ಗಮನಕ್ಕೆ ಬಂದ ತಕ್ಷಣವೇ ಕ್ರಮ ವಹಿಸಲು ಸಮಿತಿಯ ಪಟ್ಟಿಯನ್ನು ಇನ್ನೊಮ್ಮೆ ಪರಿಶೀಲಿಸಿ ಮಂಡಿಸಲು ಸಹ ನಿರ್ದೇಶನ ನೀಡಲಾಗಿದೆ ಅಂತ ತಿಳಿಸಿದರು. ಯಾವುದೇ ರೀತಿಯಲ್ಲಿ ಸಮಾಜದ ಜನರ ಭಾವನೆಗಳಿಗೆ ಧಕ್ಕೆಯಾಗಬಹುದಾದಂತಹ ಪುಸ್ತಕಗಳನ್ನು ಇಲಾಖೆ ಖರೀದಿಸುವುದಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.