ಬೆಂಗಳೂರು : ಮಾರ್ಚ್ 5 ರಂದು ಮಂಡಿಸಲಿರುವ ಬಜೆಟ್ನಲ್ಲಿ ಕೃಷಿ, ನೀರಾವರಿ, ಲೋಕೋಪಯೋಗಿ ಜೊತೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೂ ಕೂಡ ಹೆಚ್ಚಿನ ಅನುದಾನ ಸಿಗುವ ನಿರೀಕ್ಷೆ ಇದೆ ಎಂದು ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಮಾರ್ಚ್ 5 ರಂದು ಬಜೆಟ್ ಮಂಡಿಸಲಿದ್ದು, ಜನಪ್ರಿಯ ಕಾರ್ಯಕ್ರಮಗಳನ್ನು ಪ್ರಕಟಿಸುವ ಸಿದ್ಧತಾ ಕಾರ್ಯದಲ್ಲಿ ತೊಡಗಿದ್ದಾರೆ. ಯಡಿಯೂರಪ್ಪ ಮಂಡಿಸುತ್ತಿರುವ 6ನೇ ಬಜೆಟ್ ಇದಾಗಿದೆ, ಮನೆ ಮನೆಗೆ ‘ಗಂಗಾ ಯೋಜನೆ ’ಎಂಬ ಹೊಸ ಯೋಜನೆ ಜಾರಿಗೆ ಸರ್ಕಾರ ಚಿಂತನೆ ನಡೆಸಿದೆ. ಜನಸಂಖ್ಯಾವಾರು ಗ್ರಾಮ ಪಂಚಾಯಿತಿಗಳ ಅನುದಾನ ನಿಗದಿ, ನದಿ ನೀರು ಮತ್ತು ಮೇಲ್ಮೈ ನೀರು ಬಳಸಿ ಶುದ್ಧ ಕುಡಿಯುವ ನೀರು ಯೋಜನೆ ರೂಪಿಸಲು ಪ್ರತ್ಯೇಕ ಸಚಿವಾಲಯ, ಮುಖ್ಯಮಂತ್ರಿ ಗ್ರಾಮ ರಸ್ತೆ ಮತ್ತು ಸಾರಿಗೆ ಮಿಷನ್, ಮುಖ್ಯಮಂತ್ರಿ ನಗರೋತ್ಥಾನ ಯೋಜನೆ ಜಾರಿಗೆ ತರುವ ನಿರೀಕ್ಷೆ ಇದೆ.
ರಾಜ್ಯದ ಎಲ್ಲ ಜಿಲ್ಲಾ ಪಂಚಾಯತ್ಗಳ ಸಿಇಒ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಈಗಾಗಲೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆದಿದೆ. ಪ್ರಮುಖವಾಗಿ ಗ್ರಾಮೀಣ ಕುಡಿವ ನೀರು ಸಮರ್ಪಕವಾಗಿ ಸರಬರಾಜು ಮಾಡುವ ಕುರಿತು. ಶುದ್ಧ ಕುಡಿವ ನೀರಿನ ಘಟಕಗಳ ನಿರ್ವಹಣೆ ಕುರಿತು ಮತ್ತು ನಿಂತು ಹೋಗಿರುವ ಘಟಕಗಳ ದುರಸ್ತಿ ಕಾರ್ಯ ಶೀಘ್ರ ಮಾಡುವ ಕುರಿತು ಚರ್ಚೆ ನಡೆಸಲಾಗಿದೆ. ಪ್ರತಿ ಮನೆ ಮನೆಗೂ ಗಂಗಾ ಯೋಜನೆಯಡಿ ಕೊಳಾಯಿ (ನಲ್ಲಿ) ಕೊಡಲು ತೀರ್ಮಾನ ಮಾಡಿದ್ದೇವೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.