ಬೆಂಗಳೂರು: ಸಿರಿಧಾನ್ಯಗಳನ್ನು ಬಳಸಿಕೊಂಡು ಅವುಗಳ ಮೌಲ್ಯವರ್ಧಿಸಿ ಹಲವು ಫ್ಲೇವರ್‌ಗಳಲ್ಲಿ ರುಚಿಕರ ಹಾಗೂ ಪೌಷ್ಠಿಕಯುಕ್ತ ಆಹಾರ ಪದಾರ್ಥಗಳನ್ನು ಕೃಷಿ ಮೇಳದಲ್ಲಿ ತಯಾರಿಸಲಾಯಿತು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಬೇಕಿಂಗ್ ತಂತ್ರಜ್ಞಾನ ಮತ್ತು ಮೌಲ್ಯವರ್ಧನಾ ಸಂಸ್ಥೆಯ ಮಳಿಗೆಯಲ್ಲಿ ನವಣೆ, ಬರಗು, ಊದಲು, ಹಾರಕ ಮತ್ತು ರಾಗಿಯಿಂದ ತಯಾರಿಸಿದ ಬಗೆಬಗೆಯ ಬಿಸ್ಕತ್, ಕೇಕ್, ಸ್ಪಾಂಜ್ ಕೇಕ್, ರಸ್ಕ್ ಮತ್ತು ಪಿಜ್ಜಾ ಸೇರಿದಂತೆ ಮತ್ತಿತರ ಬೇಕರಿ ಉತ್ಪನ್ನಗಳನ್ನು ಪ್ರದರ್ಶಿಸಲಾಗಿತ್ತು. ಅವುಗಳನ್ನು ತಯಾರಿಸುವ ಬಗ್ಗೆಯೂ ಜನರಿಗೆ ಮಾಹಿತಿ ನೀಡಲಾಗಿತ್ತು. ವಿಶೇಷವೇನೆಂದರೆ ಹೆಚ್ಚಿನ ತಿನಿಸುಗಳಿಗೆ ಮೈದಾ ಬಳಸುವ ಬದಲು ಸಾಮೆ ಹಿಟ್ಟು ಬಳಸಿ ತಯಾರಿಸಿರುವುದನ್ನು ಕಾಣಬಹುದಾಗಿತ್ತು.
ಜನರೇ ಬಾಣಸಿಗರಾಗಿ ಬೇಕಿಂಗ್ ತಂತ್ರಜ್ಞಾನ ಮತ್ತು ಮೌಲ್ಯವರ್ಧನಾ ಸಂಸ್ಥೆಯ ಮಳಿಗೆಯಲ್ಲಿ ಆಹಾರ ತಯಾರಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ಪಿಜ್ಜಾ ಮಾಡಲು 60 ರೂ. ಹಾಗೂ ಬಿಸ್ಕೆಟ್ ಮಾಡಲು 20 ರೂ.ಗಳಂತೆ ಸಂಸ್ಥೆಯ ತರಬೇತುದಾರರ ಮಾರ್ಗದರ್ಶನದೊಂದಿಗೆ ತಮ್ಮಿಷ್ಟದ ಫ್ಲೇವರ್‌ನ ಬಿಸ್ಕತ್, ಕೇಕ್ ಮತ್ತು ಪಿಜ್ಜಾವನ್ನು ಜನರೇ ಮಾಡಿ ಅನುಭವ ಪಡೆಯುವ ಅವಕಾಶ ಕಲ್ಪಿಸಲಾಗಿತ್ತು. ಇದು ನೋಡುಗರಲ್ಲೂ ಆಸಕ್ತಿ ಹೆಚ್ಚಿಸಿತ್ತು.
ಮಳಿಗೆಯಲ್ಲಿ ವಿವಿಧ ಬೇಕರಿ ತಿನಿಸುಗಳು, ರಾಗಿ ಅಂಬಲಿ ಹಾಗೂ ಚಕ್ಕಲಿ, ರಾಗಿ, ಅಗಸೆ ಬೀಜದ ಲಡ್ಡು, ಊದಲು ಬಿಸ್ಕತ್, ಹಾರಕ, ನವಣೆ ಮತ್ತು ಕೊರಲೆ ಬ್ರೆಡ್, ಸಿರಿಧಾನ್ಯದ ಕ್ಯಾರೆಟ್ ಕಪ್ ಕೇಕ್, ಫ್ರುಟ್ ಕಪ್ ಕೇಕ್, ಜೇನುತುಪ್ಪ ಆಧಾರಿತ ಬೇಕರಿ ತಿನಿಸುಗಳು ಸೇರಿದಂತೆ ಪೌಷ್ಟಿಕದಾಯಕ ಬೇಕರಿ ತಿನಿಸುಗಳ ಮಾರಾಟ ನಡೆಯಿತು.
ಆರೋಗ್ಯ ಸಮಸ್ಯೆಗೆ ಸಿರಿಧಾನ್ಯ ಮದ್ದು: "ಜೋಳ, ರಾಗಿ, ಸಜ್ಜೆ, ನವಣೆ, ಬರಗು, ಕೊರಲೆ, ಸಾಮೆ, ಊದಲು, ಹಾರಕ 9 ಸಿರಿ ಧಾನ್ಯಗಳಾಗಿವೆ. ಇವುಗಳಲ್ಲಿ ಹೆಚ್ಚಿನ ನಾರಿನಂಶ ಮತ್ತು ಪೋಷಕಾಂಶ, ಖನಿಜಾಂಶಗಳಿವೆ. ರಕ್ತದೊತ್ತಡ, ಮಧುಮೇಹ, ಬೊಜ್ಜು, ಮಲಬದ್ಧತೆ, ಅಂಡಾಶಯ ಸಮಸ್ಯೆೆ, ಮುಟ್ಟಿನ ಸಮಸ್ಯೆೆ, ನರ ದೌರ್ಬಲ್ಯ, ಮೂರ್ಛೆ ರೋಗ, ರಕ್ತ ಹೀನತೆ, ಲಿವರ್, ಕಿಡ್ನಿ ಸಮಸ್ಯೆೆ, ಜೀರ್ಣಾಂಗದ ಸಮಸ್ಯೆೆ, ಹೃದ್ರೋಗ, ಕ್ಯಾನ್ಸರ್ ಸಮಸ್ಯೆೆ ಸೇರಿದಂತೆ ಹತ್ತಾರು ಬಗೆಯ ಆರೋಗ್ಯ ಸಮಸ್ಯೆೆಗಳಿಗೆ ಈ ಧಾನ್ಯಗಳಲ್ಲಿ ಪರಿಹಾರವಿದೆ" ಎಂದು ಬೆಂಗಳೂರು ಕೃಷಿ ವಿವಿಯ ಬೇಕಿಂಗ್ ತಂತ್ರಜ್ಞಾನ ಮತ್ತು ಮೌಲ್ಯವರ್ಧನಾ ಸಂಸ್ಥೆಯ ಸಂಯೋಜಕಿ ಡಾ.ಸವಿತಾ ಹೇಳಿದರು.
"ಮೇಳದಲ್ಲಿ ಆಯೋಜಿಸಲಾಗಿರುವ ಸಿರಿಧಾನ್ಯದ ಮಳಿಗೆಯಲ್ಲಿ ಹೆಚ್ಚಾಗಿ ಸಿರಿಧಾನ್ಯದ ಲಡ್ಡು ಹಾಗೂ ಪಿಜ್ಜಾಗೆ ಭಾರಿ ಬೇಡಿಕೆ ಬಂದಿದೆ. ನಮ್ಮ ಸಂಸ್ಥೆಯಲ್ಲಿ ಆಸಕ್ತ ಯುವಕ, ಯುವತಿಯರಿಗೆ ಬೇಕಿಂಗ್ ಕುರಿತು ತರಬೇತಿ ನೀಡಲಾಗುತ್ತಿದೆ. ಈ ತಂತ್ರಜ್ಞಾನವನ್ನು ಆಸಕ್ತಿಯುಳ್ಳ ಬೇಕರಿ ಉದ್ಯಮಿಗಳು ನಮ್ಮಿಂದ ಪಡೆಯಬಹುದು" ಎಂದರು.
ಇದನ್ನೂ ಓದಿ: ಕೃಷಿ ಮೇಳ 2023: ಹೊಸ ಬಗೆಯ "ಆಲ್ ಮೇಲ್ ಟಿಲಾಪಿಯಾ" ಮೀನುಗಳನ್ನ ಮುನ್ನೆಲೆಗೆ ತರುತ್ತಿರುವ ಕೃಷಿ ವಿವಿ