ಬೆಂಗಳೂರು: ನಗರದಿಂದ ಹೊಸಕೋಟೆ ಮಾರ್ಗವಾಗಿ ತೆರಳುವ ಹಳೇ ಮದ್ರಾಸ್ ರಸ್ತೆಯ ಮಾರ್ಗಮಧ್ಯೆದಲ್ಲಿ ಸಿಗುವುದೇ ಕೆ.ಆರ್. ಪುರ ವಿಧಾನಸಭಾ ಕ್ಷೇತ್ರ. 2008ರಲ್ಲಿ ಆದ ಮರು ವಿಂಗಡಣೆಯಲ್ಲಿ ಹೊಸದಾಗಿ ಸೃಷ್ಟಿಯಾದ ಕ್ಷೇತ್ರವೇ ಈ ಕೆ.ಆರ್.ಪುರ. ಮೊದಲ ಬಾರಿಗೆ ಇಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ನಂದೀಶ್ ರೆಡ್ಡಿ ಗೆಲುವು ಸಾಧಿಸಿದ್ದರು.
ರಾಜಕೀಯವಾಗಿ ಪ್ರಬಲವಾಗಿದ್ದ ಬೈರತಿ ಬಸವರಾಜ್ ಅವರು 2013ರಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ನಿರಾಯಾಸವಾಗಿ ಗೆದ್ದರು. ಆ ನಂತರ ಕ್ಷೇತ್ರವನ್ನು ಭದ್ರಪಡಿಸಿಕೊಂಡಿರುವ ಬೈರತಿ ಎದುರಾಳಿಗಳೇ ಇಲ್ಲದಂತೆ ನೋಡಿಕೊಂಡಿದ್ದಾರೆ. 2018ರಲ್ಲಿ ಮರು ಆಯ್ಕೆಯಾದ ಬೈರತಿ ಬಸವರಾಜ್ ಅವರು, ಬದಲಾದ ರಾಜಕೀಯ ಸನ್ನಿವೇಶದಲ್ಲಿ 2019 ರಲ್ಲಿ ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾದರು. ಆದರೆ, ಮಾಜಿ ಶಾಸಕ ನಂದೀಶ್ ರೆಡ್ಡಿ ಅವರು ಮೊದಲು ವಿರೋಧ ವ್ಯಕ್ತಪಡಿಸಿದ್ದರು.
ನಂತರ ರೆಡ್ಡಿಗೆ ಬಿಬಿಎಂಟಿಸಿ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಬಿಜೆಪಿ ನಾಯಕರು ಅವರನ್ನು ಸಮಾಧಾನಪಡಿಸಿದ್ದರು. ಮೂರು ಬಾರಿ ಪ್ರತಿಸ್ಪರ್ಧಿಯಾಗಿದ್ದ ನಂದೀಶ್ ರೆಡ್ಡಿ ಕೊನೆಗೆ ನಾಯಕರ ಮನವಿಗೆ ಮಣಿದು ಉಪಚುನಾವಣೆಯಲ್ಲಿ ಬೈರತಿ ಬಸವರಾಜ್ ಅವರಿಗೆ ಬೆಂಬಲ ಸೂಚಿಸಿದ್ದರು. ಹಾಗಾಗಿ, ಬೈರತಿ ಉಪಚುನಾವಣೆಯಲ್ಲಿ ಜಯಗಳಿಸಲು ಸುಲಭವಾಯಿತು. ಇನ್ನು ಕ್ಷೇತ್ರದಲ್ಲಿ ಬಲಿಷ್ಠ ಎದುರಾಳಿಯಾಗಬಹುದಾಗಿದ್ದ ಪೂರ್ಣಿಮಾ ಅವರು 2018 ರಲ್ಲಿ ಬಿಜೆಪಿ ಸೇರಿ, ಹಿರಿಯೂರಿನಿಂದ ಶಾಸಕರಾಗಿ ಆಯ್ಕೆಯಾದರು. ಹಾಗಾಗಿ, ಬೈರತಿ ಅವರಿಗೆ ಮತ್ತಷ್ಟು ಸುಲಭವಾಯಿತು.
ಆದರೆ, ಇದೀಗ ಮುಂಬರುವ ಚುನಾವಣೆಯಲ್ಲಿ ತಮಗೆ ಬಿಜೆಪಿಯಿಂದ ಟಿಕೆಟ್ ಬೇಕೆಂದು ಪಟ್ಟು ಹಿಡಿದಿರುವ ನಂದೀಶ್ ರೆಡ್ಡಿ ಅವರು ಕಾರ್ಯಕರ್ತರು ಹಾಗೂ ಅಭಿಮಾನಿಗಳ ಜೊತೆ ಚರ್ಚೆಯನ್ನೂ ಸಹ ಮಾಡಿದ್ದಾರೆ. ಇದು ಬೈರತಿ ಬಸವರಾಜ್ ಅವರಿಗೆ ನುಗ್ಗಲಾರದ ತುತ್ತಾಗಿ ಪರಿಣಮಿಸಿದೆ. ರಾಜ್ಯ ಉಪಾಧ್ಯಕ್ಷರಾಗಿರುವ ಬೈರತಿ ಬಸವರಾಜ್ ಅವರಿಗೆ ಬಿಜೆಪಿ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದೆ. ಆದರೆ, ನಂದೀಶ್ ರೆಡ್ಡಿ ಹಾಗೂ ಅವರ ಬೆಂಬಲಕ್ಕೆ ನಿಂತಿರುವ ಕಾರ್ಯಕರ್ತರನ್ನು ಸಮಾಧಾನಪಡಿಸುವುದೇ ದೊಡ್ಡ ಸವಾಲಾಗಿದೆ.
ಇನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಕೆ. ಮೋಹನ್ ಬಾಬು, ಮಾಜಿ ಸಚಿವ ದಿ. ಎ. ಕೃಷ್ಣಪ್ಪ ಅವರ ಸಹೋದರ ಡಿ.ಎ. ಗೋಪಾಲ್, ವಿಧಾನಪರಿಷತ್ ಮಾಜಿ ಸದಸ್ಯ ಎ.ನಾರಾಯಣಸ್ವಾಮಿ ಅವರು ಕಾಂಗ್ರೆಸ್ನಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಆದರೆ, ಜೆಡಿಎಸ್ನಿಂದ ಯಾರ ಹೆಸರು ಪ್ರಸ್ತಾಪವಾಗಿಲ್ಲ.
ಕ್ಷೇತ್ರದ ಹಿಡಿತ ಹೊಂದಿರುವ ಬಸವರಾಜ್ ಅವರು ಕೋವಿಡ್ ಸಂದರ್ಭದಲ್ಲಿ ಉತ್ತಮ ಕೆಲಸ ಮಾಡಿರುವ ಮಾತುಗಳು ಕೇಳಿಬಂದಿವೆ. ಸಚಿವರಾದ ಬಳಿಕ ಬಸವರಾಜ್ ಅವರು ಕ್ಷೇತ್ರದ ಹಲವು ಪ್ರದೇಶಗಳು ಅಭಿವೃದ್ಧಿಯಾಗಿವೆ. ಇನ್ನೂ ಕೆಲ ಪ್ರದೇಶಗಳಿಗೆ ಮೂಲಸೌಕರ್ಯ ಕಲ್ಪಿಸಬೇಕಿದೆ. ಸರ್ಕಾರಿ ಆಸ್ಪತ್ರೆಯನ್ನು 100 ಹಾಸಿಗೆ ಸಾಮರ್ಥ್ಯದಿಂದ 150 ಹಾಸಿಗೆಗಳಿಗೆ ಹೆಚ್ಚಿಸುವ ಚಿಂತನೆ ನಡೆದಿದೆ. ಇದು ಒಂದು ರೀತಿಯಲ್ಲಿ ಸ್ಥಳೀಯರಲ್ಲಿ ಸಮಾಧಾನ ತಂದಿದೆ.
ಸಂಚಾರ ದಟ್ಟಣೆಯೇ ದೊಡ್ಡ ಸಮಸ್ಯೆ: ಹಳೇ ಮದ್ರಾಸ್ ರಸ್ತೆಯಾಗಿರುವುದರಿಂದ ಹೊಸಕೋಟೆ, ಕೋಲಾರ, ಚಿಂತಾಮಣಿ, ಮಾಲೂರು ಕಡೆಗೆ ಸಾಗುವ ವಾಹನಗಳು, ಇದರ ಜೊತೆಗೆ ಆಂಧ್ರಪ್ರದೇಶದ ತಿರುಪತಿ, ತಮಿಳುನಾಡಿಗೂ ಇದೇ ಮಾರ್ಗದಲ್ಲಿ ಚಲಿಸಬಹುದು. ಹಾಗಾಗಿ, ಟಿನ್ ಫ್ಯಾಕ್ಟರಿಯಿಂದ ಭಟ್ಟರಹಳ್ಳಿವರೆಗೆ ಪ್ರತಿದಿನ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ವಾಹನ ಸವಾರರು ಪ್ರತಿನಿತ್ಯ ಕಿರಿಕಿರಿ ಅನುಭವಿಸುತ್ತಲೇ ಇದ್ದಾರೆ. ಅದರ ಜೊತೆಗೆ ದೊಡ್ಡ ದೊಡ್ಡ ಕಂಪನಿಗಳು, ಗಾರ್ಮೆಂಟ್ಸ್ಗಳು, ಕೈಗಾರಿಕೆಗಳು ಇರುವುದರಿಂದ ನಿತ್ಯ ಸಾವಿರಾರು ಜನರು ಸಂಚರಿಸುತ್ತಾರೆ. ಹಾಗಾಗಿ, ಸಂಚಾರ ದಟ್ಟಣೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಇನ್ನು ರಾಜಕಾಲುವೆ, ಚರಂಡಿ ಸಮಸ್ಯೆಗಳು ಇವೆ. ಕಾವೇರಿ ನೀರಿನ ಸಂಪರ್ಕ ಕಲ್ಪಿಸುವ ಕೆಲಸ ಇನ್ನೂ ಆಗಿಲ್ಲ ಎಂಬುದು ಅಲ್ಲಿನ ಜನರ ಕೂಗು.
ಕೆ.ಆರ್. ಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಕೆ.ನಾರಾಯಣಪುರ, ವಿಮಾನಪುರ, ವಿಜ್ಱಆನಪುರ, ದೇವಸಂದ್ರ, ರಾಮಮೂರ್ತಿನಗರ, ಸಿಂಗಯ್ಯನಪಾಳ್ಯ, ಬಸವನಪುರ, ಭಟ್ಟರಹಳ್ಳಿ, ಮೇಡಹಳ್ಳಿ, ತಂಬುಚೆಟ್ಟಿಪಾಳ್ಯ, ಸಣ್ಣ ತಿಮ್ಮನಹಳ್ಳಿ ಮತ್ತಿತರ ಪ್ರದೇಶಗಳು ಒಳಗೊಂಡಿದೆ. ಜೊತೆಗೆ ಕ್ಷೇತ್ರದ ವಿಜಿನಾಪುರ, ಬಸವನಪುರ, ಕೆ.ಆರ್. ಪುರ, ಕಲ್ಕೆರೆ, ರಾಮಮೂರ್ತಿನಗರ, ಹೊರಮಾವು ವಾರ್ಡ್ ಗಳು ಬೆಳೆದಿವೆ. ಇಕ್ಕಾಟದ ರಸ್ತೆಗಳಲ್ಲಿನ ಸಂಚಾರ ದಟ್ಟಣೆಯಿಂದ ಸ್ಥಳೀಯರು ಹೈರಾಣಾಗಿದ್ದಾರೆ. ಇಲ್ಲಿ ಕುಡಿಯುವ ನೀರು ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ ಎಂಬುದು ಸ್ಥಳೀಯರ ದೂರು.
2008 ರಲ್ಲಿ ಚುನಾವಣೆಯಲ್ಲಿ ಬಿಜೆಪಿ 66,725 ಮತ ಪಡೆದು ಜಯಗಳಿಸಿತ್ತು. ಕಾಂಗ್ರೆಸ್ 56,939 ಮತ ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಇನ್ನು ಜೆಡಿಎಸ್ 6,276 ಮತ ಪಡೆದುಕೊಂಡಿತ್ತು. 2013 ರಲ್ಲಿ ಕಾಂಗ್ರೆಸ್ 1,06,299 ಮತ ಪಡೆದು ಸಂಖ್ಯೆಯನ್ನು ಹೆಚ್ಚಿಸಿಕೊಂಡಿತ್ತು. ಬಿಜೆಪಿ 82,298 ಮತ ಪಡೆದು ಸೋತಿತ್ತು. ಜೆಡಿಎಸ್ 3,955 ಮತ ಪಡೆದಿತ್ತು. 2018 ರ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲುವು ಕಂಡಿದ್ದು, 1,35,230 ಮತ ಪಡೆದಿತ್ತು. ಬಿಜೆಪಿ 1,02,468 ಮತ ಪಡೆದಿತ್ತು. ಜೆಡಿಎಸ್ 6565 ಮತಕ್ಕೆ ತೃಪ್ತಿ ಪಟ್ಟಿಕೊಂಡಿತ್ತು. ಇನ್ನು 2019 ರ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬೈರತಿ ಬಸವರಾಜ್ 1,39,879 ಪಡೆದು ಜಯ ಗಳಿಸಿದ್ದರು. ಕಾಂಗ್ರೆಸ್ ನ ಎಂ. ನಾರಾಯಣಸ್ವಾಮಿ ಅವರು 76,436 ಮತ ಪಡೆದು ಎರಡನೇ ಸ್ಥಾನ ಪಡೆದುಕೊಂಡಿದ್ದರು. ಜೆಡಿಎಸ್ ನ ಸಿ.ಕೃಷ್ಣಮೂರ್ತಿ 2,048 ಪಡೆದು ಠೇವಣಿ ಕಳೆದುಕೊಂಡಿದ್ದರು.
ಕ್ಷೇತ್ರದಲ್ಲಿರುವ ಮತದಾರರೆಷ್ಟು?: ಕ್ಷೇತ್ರದಲ್ಲಿ ಒಟ್ಟು 4,26,423 ಮತದಾರರಿದ್ದು, 2,54,747 ಪುರುಷರು, ಮಹಿಳಾ ಮತದಾರರು 2,32,636 ಮತದಾರರಿದ್ದಾರೆ. ತೃತೀಯ ಲಿಂಗಿಗಳು 163 ಮಂದಿ ಇದ್ದಾರೆ. ಮುಂಬರುವ ಚುನಾವಣೆಗೆ ಬಿಜೆಪಿಯಲ್ಲೇ ಅಸಮಾಧಾನ ಇರುವ ಕಾರಣ ಬೈರತಿ ಬಸವರಾಜ್ ಅವರು ಇದನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಬಿಜೆಪಿಯ 'ಸಾಮ್ರಾಟ'ನ ಭದ್ರಕೋಟೆ.. ಪದ್ಮನಾಭನಗರ ವಶಕ್ಕೆ ಕೈ-ತೆನೆ ಕಸರತ್ತು