ಬೆಂಗಳೂರು: ಕೆಪಿಎಸ್ಸಿಯಿಂದ 2017-18ನೇ ಸಾಲಿನ ಅಧಿಸೂಚನೆಯಡಿಯಲ್ಲಿ ಆಯ್ಕೆಯಾದ ಎಫ್ಡಿಎ ಹಾಗೂ ಎಸ್ಡಿಎ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿಯಲಾಗಿದ್ದು, ಇದರಿಂದ ನೊಂದ ಅಭ್ಯರ್ಥಿಗಳು ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ನಡೆಸುತ್ತಿರುವ ಪ್ರತಿಭಟನೆ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ.
ರಾಜ್ಯ ಸರ್ಕಾರದ ವಿರುದ್ಧ ನೂರಾರು ಅಭ್ಯರ್ಥಿಗಳು ಘೋಷಣೆ ಕೂಗಿದರು. ಆಯೋಗವು ಪ್ರಥಮ ದರ್ಜೆ ಸಹಾಯಕ ಹಾಗೂ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ನಡೆಸಿದ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ 1,812 ಅಭ್ಯರ್ಥಿಗಳ ಪೈಕಿ 100 ಮಂದಿಗೆ ಮಾತ್ರ ಕರ್ತವ್ಯಕ್ಕೆ ಹಾಜರಾಗಲು ಅನುಮತಿ ಸಿಕ್ಕಿದೆ. ಉಳಿದವರು ಅನುಮತಿ ಕೋರಿ ಬೀದಿ ಬೀದಿ ಅಲೆಯುತ್ತ, ನಿಯೋಜನೆಗೊಂಡಿರುವ ಇಲಾಖೆಗಳ ಬಾಗಿಲು ಬಡಿಯುತ್ತಿದ್ದಾರೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಎಸ್ಸಿಯಿಂದ 2017 ಸೆಪ್ಟೆಂಬರ್ನಲ್ಲಿ 507 ಎಫ್ಡಿಎ ಹಾಗೂ 551 ಎಸ್ಡಿಎ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿತ್ತು. 2018ರ ಫೆಬ್ರುವರಿಯಲ್ಲಿ ಪರೀಕ್ಷೆ ನಡೆಸಿ 2019ರಲ್ಲಿ ದಾಖಲೆ ಪರಿಶೀಲನೆ ನಡೆಸಲಾಗಿತ್ತು. ನಂತರ 2020 ಜನವರಿಯಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿ ಹಾಗೂ ಜುಲೈನಲ್ಲಿ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಿತ್ತು.
ಬಳಿಕ ಇಲಾಖೆಗಳಿಗೆ ನೇಮಕಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿತ್ತು. ಅಭ್ಯರ್ಥಿಗಳಿಗೆ ಸ್ಥಳ ನಿಯೋಜನೆಗೊಳಿಸಿ ಕರ್ತವ್ಯಕ್ಕೆ ಹಾಜರುಪಡಿಸಲು ತಿಳಿಸಲಾಗಿತ್ತು. ಆದರೆ ಕೋವಿಡ್ ಕಾರಣ ಹಣಕಾಸು ಇಲಾಖೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಹಣಕಾಸು ಸಂಕಷ್ಟವನ್ನು ಸರಿದೂಗಿಸುವ ಸಲುವಾಗಿ ನೇಮಕಾತಿ ಪ್ರಕ್ರಿಯೆಯನ್ನು ಮುಂದಿನ ಆರ್ಥಿಕ ವರ್ಷದವರೆಗೆ ಸ್ಥಗಿತಗೊಳಿಸುವಂತೆ ಸರ್ಕಾರ ಆದೇಶಿಸಿದೆ.
ಆದರೆ ಕೆಲವು ಇಲಾಖೆಗಳು ಸರ್ಕಾರವು ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವ ಆದೇಶದ ನಂತರವೂ ಕೂಡ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಅಭ್ಯರ್ಥಿಗಳನ್ನು ನಿಯೋಜನೆ ಮಾಡಿಕೊಂಡಿವೆ. ಹೀಗಾಗಿ ತಾರತಮ್ಯ ಮಾಡಲಾಗಿದ್ದು, ನಮಗೆ ನ್ಯಾಯ ಸಿಗಬೇಕೆಂದು ಅಭ್ಯರ್ಥಿಗಳು ಬೀದಿಗಿಳಿದಿದ್ದಾರೆ.
ನಮ್ಮಲ್ಲಿ ತುಂಬಾ ಅಭ್ಯರ್ಥಿಗಳು ಆರ್ಥಿಕ ಸಂಕಷ್ಟದಲ್ಲಿದ್ದು, ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಎಫ್ಡಿಎ ಹಾಗೂ ಎಸ್ಡಿಎ ಅಭ್ಯರ್ಥಿಗಳಿಗೆ ನೇಮಕಾತಿ ಪ್ರಕ್ರಿಯೆಗೆ ಹೊರಡಿಸಿರುವ ತಡೆಯಾಜ್ಞೆ ಹಿಂಪಡೆದುಕೊಂಡು ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ ಕರ್ತವ್ಯಕ್ಕೆ ಹಾಜರುಪಡಿಸಿಕೊಳ್ಳುವಂತೆ ಕೋರಿಕೊಳ್ಳುತ್ತಿದ್ದಾರೆ.