ಬೆಂಗಳೂರು: ಬಿಜೆಪಿಯವರಿಗೆ ರೈತಪರ ಕಾಳಜಿ ಇದ್ದರೆ ಮಹದಾಯಿ, ಕೃಷ್ಣಾ ಮೇಲ್ದಂಡೆ, ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುವ ಬಗ್ಗೆ ಮಾತಾಡಿ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ 45 ಸಾವಿರ ಕೋಟಿ ಪರಿಹಾರ ಬಾಕಿ ಇದೆ. ಅದನ್ನು ಕೊಡಿಸಿ. ನರೇಗಾ ಯೋಜನೆಯಡಿ 8500 ಕೋಟಿ ಬಾಕಿ ಇದ್ದು, ಅದನ್ನು ಕೊಡಿಸಿ. 15ನೇ ಹಣಕಾಸು ಆಯೋಗದಲ್ಲಿ 5 ಸಾವಿರ ಕೋಟಿ ಬಾಕಿ ಇದೆ, ಅದನ್ನು ಕೊಡಿಸಿ. ಬರಗಾಲ ಪರಿಹಾರ ಕೊಡಿಸಿ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರು ಬಹಳ ಸಂಕಷ್ಟದಲ್ಲಿದ್ದಾರೆ. ಈ ಬಗ್ಗೆ ವಿರೋಧ ಪಕ್ಷದ ನಾಯಕರು, ಕೇಂದ್ರ ಸಚಿವರು ಧ್ವನಿ ಎತ್ತುತ್ತಿಲ್ಲ. ಪ್ರಹ್ಲಾದ್ ಜೋಶಿ ತಮ್ಮ ಭಾಗದ ಸಮಸ್ಯೆ ಬಗ್ಗೆ ಮೋದಿ ಜತೆ ಮಾತನಾಡಿದ್ದಾರೆ. ಶೋಭಾ ಕರಂದ್ಲಾಜೆ ಚಿಕ್ಕಮಗಳೂರು ಸಂಸದೆಯಾಗಿ ಎಷ್ಟು ಬಾರಿ ಆ ಜಿಲ್ಲೆಗೆ ಭೇಟಿ ನೀಡಿದ್ದೀರಿ, ಎಷ್ಟು ಅನುದಾನ ತಂದಿದ್ದೀರಿ ಎಂದು ಪ್ರಶ್ನಿಸಿದರು.
ಚುನಾವಣೆ ಸಮೀಪಿಸುತ್ತಿದೆ ಎಂದು ಗ್ಯಾರಂಟಿ ಯೋಜನೆಗಳಿಂದ ಜನರ ದಿಕ್ಕು ತಪ್ಪಿಸಲು ಸಣ್ಣ ವಿಚಾರವನ್ನು ದೊಡ್ಡದಾಗಿ ಬಿಂಬಿಸುತ್ತಿದ್ದೀರಿ. ರೈತರ ಬಗ್ಗೆ ನಿಮಗೆ ಅಷ್ಟೊಂದು ಆಸಕ್ತಿ ಇದ್ದರೆ ಬರಗಾಲದಲ್ಲಿ ಇದುವರೆಗೂ 5 ಪೈಸೆ ಹಣ ಬಿಡುಗಡೆ ಮಾಡಿಲ್ಲ. ನೀವು ರೈತ ವಿರೋಧಿ, ಜನವಿರೋಧಿ, ಪರಿಶಿಷ್ಟರ ವಿರೋಧಿ, ಅಲ್ಪಸಂಖ್ಯಾತ ವಿರೋಧಿ, ಒಬಿಸಿ ವಿರೋಧಿಗಳು. ನೀವು ಏನಿದ್ದರೂ ಕಾರ್ಪೊರೇಟ್ ಸ್ನೇಹಿತರು. 9 ವರ್ಷಗಳಲ್ಲಿ ಸುಮಾರು 22 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದೀರಿ. ಎಲ್ಲಾದರೂ ರೈತರ 1 ರೂ. ಸಾಲ ಮನ್ನಾ ಮಾಡಿದ್ದೀರಾ? ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯವರು ಕಳೆದ ಒಂಬತ್ತೂವರೆ ವರ್ಷಗಳಿಂದ ಮಾಡಿರುವ ಯೋಜನೆ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ಅವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆ ಸಾಧನೆ ಏನು ಎಂದು ಹೇಳಿ ಚುನಾವಣೆ ಮಾಡಿ. ಅದನ್ನು ಬಿಟ್ಟು ಭಾವನಾತ್ಮಕ ವಿಚಾರ ಮುನ್ನಲೆಗೆ ತಂದು ಚುನಾವಣೆ ಮಾಡಬೇಕೇ? ರಾಜ್ಯದ ಜನ ನಿಮ್ಮ ಯೋಗ್ಯತೆ ಅರಿತಿದ್ದು, ನಿಮ್ಮ ಷಡ್ಯಂತ್ರಕ್ಕೆ ಬೀಳುವುದಿಲ್ಲ. ಬಿಜೆಪಿ ಮಾತೆತ್ತಿದರೆ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರ ಮೇಲೆ ಮುಗಿಬೀಳುತ್ತಾರೆ. ಬಿಜೆಪಿ ಸಾಮಾನ್ಯ ಪರಿಜ್ಞಾನ ಇಲ್ಲದೆ ಮಾತನಾಡುವ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿದ್ದಾರೆ. ಅದನ್ನು ಬೆಂಬಲಿಸಿ ಮಾತನಾಡುವ ಬಿಜೆಪಿ ರಾಜ್ಯಾಧ್ಯಕ್ಷ. ಸಿಎಂ ಐಷಾರಾಮಿ ವಿಮಾನ ಪ್ರಯಾಣ ಮಾಡಿದರಂತೆ. ಮೋದಿ ಅವರು ಒಡಾಡುವುದಕ್ಕೆ ಎಂಟೂವರೆ ಸಾವಿರ ಕೋಟಿ ಜನರ ತೆರಿಗೆ ಹಣ ಖರ್ಚು ಮಾಡಿದ್ದಾರೆ. ಆ ವಿಮಾನದ ಐಶಾರಾಮಿ ಹೇಗಿದೆ ಎಂದು ಬಿಜೆಪಿಯವರು ತೋರಿಸಲಿ ಎಂದು ಸವಾಲೆಸೆದರು.
ಸಿದ್ದರಾಮಯ್ಯ ಅವರ ಪ್ರಯಾಣ ಮಾಡಿದ್ದು ಬಾಡಿಗೆ ವಿಮಾನ. ನಿಮ್ಮ ಪ್ರಕಾರ ಸಿಎಂ ರೈಲಲ್ಲಿ, ಎತ್ತಿನಗಾಡಿ ಅಥವಾ ನಡೆದುಕೊಂಡು ಹೋಗಬೇಕೆ? ಹೇಳಿ. ಅದನ್ನು ನೀವು ಪಾಲನೆ ಮಾಡಬೇಕು. ಯಡಿಯೂರಪ್ಪ ಸಿಎಂ ಆಗಿದ್ದಾಗ ವಿಜಯೇಂದ್ರ ಅವರು ಗೊಲ್ಡ್ ಫಿಂಚ್ ಹೊಟೇಲ್ನಲ್ಲಿ 16 ಕೊಠಡಿ ಇಟ್ಟುಕೊಂಡಿದ್ದರು. ಅದಕ್ಕೆ ಯಾರು ಹಣ ಪಾವತಿಸಿದ್ದರು? ಅದರ ಬಗ್ಗೆ ವಿಜಯೇಂದ್ರ ಅವರು ಬೆಳಕು ಚೆಲ್ಲಬೇಕು. ಕುಮಾರಸ್ವಾಮಿ ಅವರು ತಾಜ್ ವೆಸ್ಟ್ ಎಂಡ್ನಲ್ಲಿ 6 ಕೊಠಡಿ ಇಟ್ಟುಕೊಂಡಿದ್ದರು. ಅದರ ಬಗ್ಗೆಯೂ ಬೆಳಕು ಚೆಲ್ಲಿ ಎಂದರು.
ಅಶೋಕ್ ಅವರು ವಿರೋಧ ಪಕ್ಷದ ನಾಯಕನಾಗಿ ಮಾತನಾಡುವಾಗ ಅವರ ಮಾತಿನಲ್ಲಿ ತೂಕ ಇರಬೇಕು. ದಿನಬೆಳಗಾದರೆ ಸಣ್ಣಪುಟ್ಟ ವಿಚಾರವಾಗಿ ಮಾಧ್ಯಮಗೋಷ್ಠಿ ಮಾಡುವುದಲ್ಲ. ನಿಮ್ಮ ಮರ್ಯಾದೆ ನೀವೆ ತೆಗೆದುಕೊಳ್ಳುತ್ತಿದ್ದೀರಿ. ಜನರ ಸಮಸ್ಯೆ, ರಾಜ್ಯದ ಅಭಿವೃದ್ಧಿಗೆ ನಿಮ್ಮ ಸಲಹೆ ಇದ್ದರೆ ಹೇಳಿ ಎಂದರು.
ಇಂದು 5ನೇ ಗ್ಯಾರಂಟಿ ಯೋಜನೆ ಯುವನಿಧಿ ಯೋಜನೆಗೆ ಚಾಲನೆ ನೀಡಿದ್ದು, 5.69 ಲಕ್ಷ ಯುವಕರಿಗೆ ಪ್ರೋತ್ಸಾಹಧನ ನೀಡಲಿದ್ದೇವೆ. ಇದಲ್ಲದೆ ನಾಲ್ಕು ಗ್ಯಾರಂಟಿ ಯೋಜನೆಗಳು ಜಾರಿಯಾಗಿದೆ. ರಾಜ್ಯದ 96% ಜನರಿಗೆ ಒಂದಲ್ಲಾ ಒಂದು ಯೋಜನೆ ತಲುಪುತ್ತಿದೆ. ಹೀಗಾಗಿ ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿ ಇಂತಹ ಪ್ರಯತ್ನ ಮಾಡುತ್ತಿದೆ. ಬಿಜೆಪಿಯ ಯಾವುದೇ ನಾಯಕರು ದಮ್ಮು ತಾಕತ್ತು ಬಗ್ಗೆ ಮಾತನಾಡುತ್ತಾ ತೊಡೆ ತಟ್ಟುತ್ತಿದ್ದಾರೆ. ಮೂರನೇ ಬಾರಿಗೆ ಮೋದಿ ಅವರನ್ನು ಪ್ರಧಾನಿ ಮಾಡಲು ಮೈ ಪರಚಿಕೊಳ್ಳುತ್ತಿದ್ದಾರೆ. ಆದರೆ, ಅದರಿಂದ ಗಾಯವಾಗುತ್ತದೆಯೇ ಹೊರತು ಅವರಿಗೆ ಲಾಭವಾಗಲ್ಲ ಎಂದು ವ್ಯಂಗ್ಯವಾಡಿದರು. ಇದೇ ವೇಳೆ ಸಂಸದ ಪ್ರತಾಪ್ ಸಿಂಹ, ಅವರ ಸಹೋದರ ವಿರುದ್ಧವೂ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಹೊಸ ತಂಡದೊಂದಿಗೆ ನಾಳೆ ಬಿ.ವೈ.ವಿಜಯೇಂದ್ರ ಮೊದಲ ಸಭೆ: ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳ ಆಯ್ಕೆಗೆ ಚಾಲನೆ