ಬೆಂಗಳೂರು: ಲೋಕಸಭೆ ಚುನಾವಣೆಯ ಹೀನಾಯ ಸೋಲಿನ ಹಿನ್ನೆಲೆ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಬದಲಾವಣೆಯಾಗುವ ಕಾಲ ಸನ್ನಿಹಿತವಾಗುತ್ತಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ರಾಜ್ಯ ಮೈತ್ರಿ ಸರ್ಕಾರಕ್ಕೆ ಎದುರಾಗಿರುವ ಆತಂಕದ ಹಿನ್ನೆಲೆ ಸದ್ಯ ಯಾವುದೇ ಬದಲಾವಣೆ ಬೇಡ ಎಂಬ ನಿರ್ಧಾರಕ್ಕೆ ಕಾಂಗ್ರೆಸ್ ಹೈಕಮಾಂಡ್ ಬಂದಿದೆ ಎನ್ನಲಾಗಿದ್ದು, ಇನ್ನೊಂದು ವಾರದೊಳಗೆ ಬದಲಾವಣೆ ಸಾಧ್ಯತೆ ನಿಚ್ಚಳವಾಗಿದೆ ಎಂಬ ಮಾಹಿತಿ ಸಿಕ್ಕಿದೆ.
ಕೆಪಿಸಿಸಿ ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರನ್ನ ಹೊರತುಪಡಿಸಿ ಉಳಿದ ಎಲ್ಲಾ ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಹೊಸ ತಂಡ ರಚನೆಯ ಕಸರತ್ತು ಜೋರಾಗಿ ನಡೆದಿದೆ. ಈ ನಡುವೆ ಅಧ್ಯಕ್ಷರ ಬದಲಾವಣೆ ಕೂಡ ಆಗಲಿದೆ ಎಂದು ಮಾತು ಕೇಳಿ ಬಂದಿದ್ದು, ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ, ಸಚಿವ ಡಿ.ಕೆ.ಶಿವಕುಮಾರ್, ಗೃಹ ಸಚಿವ ಎಂ.ಬಿ.ಪಾಟೀಲ್ ಹಾಗೂ ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಅಧ್ಯಕ್ಷರ ರೇಸ್ನಲ್ಲಿ ಇದ್ದಾರೆ.
ತಾವೇ ಅಧ್ಯಕ್ಷರಾಗಬೇಕು ಎಂದು ಡಿಕೆಶಿ ಶತ ಪ್ರಯತ್ನ ನಡೆಸಿದ್ದು, ಇವರಿಗೆ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಪ್ರಬಲ ಪೈಪೋಟಿ ನೀಡಿದ್ದಾರೆ. ಕೆಲಸದ ವಿಚಾರದಲ್ಲಿ ಸಕ್ರಿಯವಾಗಿರುವ ಕಾರಣಕ್ಕೆ ಡಿಕೆಶಿ ಇಲ್ಲವೇ ಲಿಂಗಾಯತ ಸಮುದಾಯವನ್ನು ಓಲೈಸುವ ಕಾರಣಕ್ಕೆ ಈಶ್ವರ್ ಖಂಡ್ರೆ ಅವರಿಗೂ ಅವಕಾಶ ಸಿಗುವ ಸಾಧ್ಯತೆ ಇದೆ.
ಮಹಾರಾಷ್ಟ್ರ ಪಿಸಿಸಿಯಲ್ಲಿ ಭಾರಿ ಬದಲಾವಣೆ:
ಮಹಾರಾಷ್ಟ್ರಕ್ಕೆ ನೂತನ ಕಾಂಗ್ರೆಸ್ ಅಧ್ಯಕ್ಷರ ನೇಮಕವಾಗಿದ್ದು, ಇದರ ಬೆನ್ನಲ್ಲೇ ರಾಜ್ಯದಲ್ಲಿಯೂ ಇಂತದ್ದೊಂದು ಬೆಳವಣಿಗೆ ನಡೆಯುವ ಸಾಧ್ಯತೆ ಸನ್ನಿಹಿತವಾಗುತ್ತಿದೆ ಎಂಬ ಸೂಚನೆ ಸಿಕ್ಕಿದೆ.
ಮಹಾರಾಷ್ಟ್ರ ಪಿಸಿಸಿಯಲ್ಲಿ ಐವರು ಕಾರ್ಯಾಧ್ಯಕ್ಷರ ನೇಮಕವಾಗಿದ್ದು, ಎಐಸಿಸಿಯಿಂದ ನೇಮಕಗೊಳಿಸಿ ಆದೇಶ ಹೊರಡಿಸಿದೆ.
- ಬಾಳಾಸಾಹೇಬ್ ಥೋರಟ್- ಅಧ್ಯಕ್ಷ,
- ಡಾ. ನಿತಿನ್ ರೌತ್- ಕಾರ್ಯಾಧ್ಯಕ್ಷ,
- ಬಸವರಾಜ್ ಎಂ. ಪಾಟೀಲ್- ಕಾರ್ಯಾಧ್ಯಕ್ಷ,
- ಯಶೋಮತಿ ಠಾಕೂರ್- ಕಾರ್ಯಾಧ್ಯಕ್ಷೆ,
- ಮುಜಫರ್ ಹುಸೇನ್- ಕಾರ್ಯಾಧ್ಯಕ್ಷ,
- ವಿಶ್ವಜೀತ್ ಕದಮ್- ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಈ ರೀತಿ ಎಲ್ಲಾ ರಾಜ್ಯಗಳಲ್ಲಿ ಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಚಿಂತನೆ ನಡೆದಿದ್ದು, ಅದರಲ್ಲಿ ರಾಜ್ಯದ ಹೆಸರೂ ಇದೆ.