ಮೈಸೂರು: ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಗಾಗಿ ಐದು ತಂಡಗಳನ್ನು ರಚನೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಇಂದು ಜಿಲ್ಲೆಯ ಹುಣಸೂರು ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉತ್ತರ ಕರ್ನಾಟಕಕ್ಕೆ ನಾನು ಮತ್ತು ನಮ್ಮ ತಂಡ ಭೇಟಿ ನೀಡಲಿದ್ದು, ಮೊದಲು ಹುಣಸೂರಿನಿಂದ ಕೊಡಗಿನ ಜೀವ ನದಿ ಉದ್ಭವವಾಗುವ ತಲಕಾವೇರಿಯ ಪರಿಸ್ಥಿತಿಯನ್ನು ವೀಕ್ಷಿಸಿ, ನಂತರ ತಾಯಿಗೆ ನಮಸ್ಕರಿಸಿ ನನ್ನ ಪ್ರವಾಸವನ್ನು ಆರಂಭಿಸುತ್ತೇನೆ ಎಂದರು.
ಈಗ ಪ್ರವಾಹದಿಂದ ತೊಂದರೆಗೊಳಗಾದ ಪ್ರದೇಶಗಳಿಗೆ ಹೋಗಲು ತಂಡ ರಚನೆ ಮಾಡಲಿದ್ದು, ರಾಜ್ಯದ ಎಲ್ಲಾ ಕಡೆ ಈ ತಂಡ ಪ್ರವಾಸ ಕೈಗೊಳ್ಳಲಿದೆ. ಅಲ್ಲಿನ ಪರಿಸ್ಥಿತಿಯ ವರದಿ ತೆಗೆದುಕೊಂಡು ನಂತರ ಸರ್ಕಾರದ ಮೇಲೆ ಒತ್ತಡ ಹಾಕಲಿದೆ. ಕಳೆದ ವರ್ಷ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಸರ್ಕಾರ ಯಾವ ರೀತಿ ಪರಿಹಾರ ನೀಡಿದೆ ಎಂಬ ಬಗ್ಗೆ ಖುದ್ದಾಗಿ ಕಾಂಗ್ರೆಸ್ ಮುಖಂಡರು ಜನರ ಕಷ್ಟಗಳನ್ನು ಕೇಳುತ್ತೇವೆ ಎಂದು ಹೇಳಿದರು.
ಪರಿಹಾರ ನೀಡುವಲ್ಲಿ ಕೇಂದ್ರ ತಾರತಮ್ಯ ಮಾಡುತ್ತಿದೆ. ರಾಜ್ಯ ಸರ್ಕಾರ ಕೋವಿಡ್ ಮತ್ತು ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಡಿಕೆಶಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.