ಬೆಂಗಳೂರು: ಚಾಮರಾಜನಗರದಲ್ಲಿ ಆಮ್ಲಜನಕ ಕೊರತೆಯಿಂದ ಉಂಟಾದ ಸಾವು ಸರ್ಕಾರದ ಕೊಲೆ. ಇದುವರೆಗೂ ಯಾವುದೇ ಸಚಿವರು, ಮುಖ್ಯಮಂತ್ರಿ ಭೇಟಿ ಕೊಟ್ಟು ಪರಿಶೀಲಿಸದಿರುವುದು ದುರಂತ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಾಧ್ಯಕ್ಷರ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಚಾಮರಾಜನಗರ ಆಮ್ಲಜನಕ ಕೊರತೆಯಿಂದ ಉಂಟಾದ ಸಾವಿನ ದುರಂತ ವಿಚಾರ ಎಳೆ ಎಳೆಯಾಗಿ ಬಿಡಿಸಿಟ್ಟರು.
ಚಾಮರಾಜನಗರದಲ್ಲಿ ಅಂದು ಅಷ್ಟೊಂದು ಜನ ಸಾವಿಗೀಡಾಗುತ್ತಿದ್ದರೆ ಅಲ್ಲಿ ಒಬ್ಬ ವೈದ್ಯರಿರಲಿಲ್ಲ, ದಾದಿಯರು ಗಮನಿಸಿಲ್ಲ. 10-15 ಮಂದಿಯನ್ನು ಒಂದು ಕೊಠಡಿಯಲ್ಲಿ ತುಂಬಿಸಿಡಲಾಗಿದೆ. ಒಬ್ಬರ ಮೇಲೆ ಒಬ್ಬರು ಬಿದ್ದು ವಿಲ ವಿಲ ಒದ್ದಾಡಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನು ರಾಶಿ ಹಾಕಿ ಇಡಲಾಗಿತ್ತು. ಅದರ ಚಿತ್ರಗಳು, ದಾಖಲೆ ನನ್ನ ಬಳಿ ಇದೆ. ಕೋವಿಡ್ನಿಂದ 36 ಜನ ಮೃತ ಪಟ್ಟಿದ್ದಾರೆ. ಇವರಲ್ಲಿ 40 ವರ್ಷ ಒಳಗಿನ ವಯೋಮಾನದವರೇ ಶೇ.80 ರಷ್ಟು ಮಂದಿ ಇದ್ದಾರೆ.
ನಾವು 28 ಜನರ ಕುಟುಂಬಕ್ಕೆ ಭೇಟಿ ಕೊಟ್ಟಿದ್ದೆವು. ಎಲ್ಲರಿಗೆ ತಲಾ 1 ಲಕ್ಷ ಚೆಕ್ ನೀಡಿದ್ದೇವೆ. ಉಳಿದವರ ಕುಟುಂಬವನ್ನು ಭೇಟಿ ಮಾಡಲಾಗಲಿಲ್ಲ. ನಮ್ಮ ಮುಖಂಡರ ಮೂಲಕ ಅವರಿಗೆ ನೆರವು ತಲುಪಿಸಿದ್ದೇವೆ ಎಂದರು.
ವಿಧಾನಸಭೆ ಅಧಿವೇಶನ ಕರೆಯುವುದನ್ನು ಕಾಯುತ್ತಿದ್ದೇನೆ. ದಾಖಲೆ ಸಮೇತ ಅಲ್ಲಿಯೇ ವಿಚಾರ ಮಂಡಿಸುತ್ತೇನೆ. ವೈದ್ಯ ಸೇವೆಗೆ ರಾಜ್ಯಕ್ಕೆ ಉತ್ತಮ ಹೆಸರಿದೆ. ಆದರೆ, ಈ ಘಟನೆ ಇಡೀ ದೇಶಕ್ಕೆ ತಲುಪಬೇಕು. ಆಸ್ಪತ್ರೆ, ವೈದ್ಯರು ಇದ್ದೂ ಇಂತಹ ಸ್ಥಿತಿ ಚಾಮರಾಜನಗರದಲ್ಲಿ ನಡೆದಿದೆ. ಮೊದಲಿಗೆ ನಾನು, ಸಿದ್ದರಾಮಯ್ಯ ಹೋಗಿದ್ದೆವು. ಅಧಿಕಾರಿಗಳನ್ನ ಅವರೇ ಚೆನ್ನಾಗಿ ಪ್ರಶ್ನೆ ಮಾಡಿದ್ದರು. ಆಗ 24 ಜನ ಸತ್ತಿದ್ದು ನಮ್ಮ ಗಮನಕ್ಕೆ ಬಂತು.
ಆದರೆ ಸರ್ಕಾರ ಮೂರು ಜನ ಮಾತ್ರ ಎಂದಿತ್ತು. ನಂತರ ಸರ್ಕಾರ 24 ಜನ ಅಂತ ಹೇಳಿತ್ತು. ಇನ್ನು ಆರು ವಾರದಲ್ಲಿ ಸಂತ್ರಸ್ತರಿಗೆ ನೆರವು ನೀಡುವಂತೆ ಒತ್ತಾಯಿಸಿದೆ. ಕೋವಿಡ್ನಿಂದ ಮೃತಪಟ್ಟವರಿಗೆ ನೆರವು ನೀಡುವಂತೆ ಸರ್ಕಾರಕ್ಕೆ ಸುಪ್ರೀಂ ನಿರ್ದೇಶನ ನೀಡಿದೆ. ನ್ಯಾಯಾಂಗ ಜನರ ಪರವಾಗಿ ನಿಂತಿದೆ ಎಂದರು.
ಮಾನವೀಯತೆಯಿಂದ ತೆರಳಿ ತಲಾ 1 ಲಕ್ಷ ರೂ. ಪರಿಹಾರ ಕೊಡಬೇಕಿತ್ತು. ಅವತ್ತು ಹೆಣಗಳು ಕೂಡ ಬದಲಾವಣೆ ಆಗಿದೆ. ಅವಸರದಲ್ಲಿ ಹೆಣಗಳನ್ನು ಸಾಗಾಣೆ ಮಾಡಿದ್ದಾರೆ. ಪ್ರಕರಣ ಬೆಳಕಿಗೆ ಬಾರದಂತೆ ತಡೆಯುವ ಪ್ರಯತ್ನ ಮಾಡಿದ್ದಾರೆ. ಹೆಣಗಳು ಮನೆಯವರಿಗೆ ತಲುಪಿಸದೇ ಅಂತ್ಯಕ್ರಿಯೆ ಮಾಡಿದ್ದಾರೆ. ಇನ್ನೂ ಕೆಲವರಿಗೆ ಡೆತ್ ಸರ್ಟಿಫಿಕೇಟ್ ಕೊಟ್ಟಿಲ್ಲ. ಸರ್ಕಾರ ಪರಿಹಾರ ಕೊಡುತ್ತೇನೆ ಎನ್ನುತ್ತಿದೆ.
ಆದರೆ ಸರ್ಟಿಫಿಕೇಟ್ ಕೊಡದೆ ಪರಿಹಾರ ಹೇಗೆ ತಲುಪಿಸುತ್ತೀರಿ. ಪರಿಹಾರಕ್ಕೆ ಅವರು ಅರ್ಜಿ ಹಾಕಬೇಕು. ನಾನು ಮಾನವಿಯತೆಯಿಂದ ಚೆಕ್ ಮೂಲಕ ಪರಿಹಾರ ನೀಡಿದ್ದೇನೆ ಎಂದರು. 36 ಕ್ಕೂ ಹೆಚ್ಚು ಮಂದಿ ಚಾಮರಾಜನಗರದಲ್ಲಿ ಸಾವಾಗಿದೆ. ಆದರೆ, ಇದಕ್ಕೆ ಯಾರನ್ನೂ ಜವಾಬ್ದಾರರಾಗಿಲ್ಲ. ಸಚಿವರು ಯಾರೂ ಜವಾಬ್ದಾರಿ ವಹಿಸಿಲ್ಲ. ಇದನ್ನು ಸುಮೋಟೊ ಕೇಸು ದಾಖಲಿಸಿಕೊಂಡು ತನಿಖೆ ನಡೆಸಿ. ತಪ್ಪಿತಸ್ತರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
ನೊಂದ ಜನರಿಗಾಗಿ ಅಭಿಯಾನ
ನೊಂದ ಜನರ ದನಿಯಾಗಿ ನಾವು ಅಭಿಯಾನ ಆರಂಭಿಸುತ್ತಿದ್ದೇವೆ. ರಾಜ್ಯಾದ್ಯಂತ ಕೋವಿಡ್ ಸಾವಿನ ಡೆತ್ ಆಡಿಟ್ ಆಗಬೇಕು. ಸರ್ಕಾರ ಮಾಡುತ್ತದೆಯೋ ಇಲ್ಲವೋ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷ ಮನೆ ಮನೆಗೆ ತೆರಳಿ ಕಳೆದ ಎರಡು ವರ್ಷದಲ್ಲಿ ಕೋವಿಡ್ನಿಂದಾಗಿ ಸಾವನ್ನಪ್ಪಿದವರ ಲೆಕ್ಕ ಸಂಗ್ರಹಿಸಿ ಸರ್ಕಾರಕ್ಕೆ ನೀಡಿ ಪರಿಹಾರ ಕೊಡುವಂತೆ ಒತ್ತಾಯಿಸುತ್ತೇವೆ.
3.3 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ ಎಂಬ ಅಂದಾಜಿದೆ. ಪ್ರತಿ ವಾರ್ಡ್ನಲ್ಲಿ 10 ಕಾಂಗ್ರೆಸ್ ಮುಖಂಡರ ಗುಂಪು ರಚಿಸಿ, ಅವರಿಂದ ಡೆತ್ ಆಡಿಟ್ ಮಾಡಿಸುವ ಕಾರ್ಯ ಮಾಡುತ್ತೇವೆ. ಒಬ್ಬ ನಾಯಕರನ್ನು ವೀಕ್ಷಕರಾಗಿ ನೇಮಿಸುತ್ತೇವೆ ಎಂದರು.
ಇನ್ನು ಪ್ರತಿ ದಿನ ಸಂಜೆ ಒಂದು ಸಭೆ ನಡೆಸುತ್ತೇವೆ. ಪಕ್ಷದ ನಾಯಕರು ತಮ್ಮ ಜಿಲ್ಲೆಗೆ ಇಲ್ಲವೇ ಪಕ್ಷ ನಿಯೋಜಿಸಿರುವ ಜಿಲ್ಲೆಗೆ ತೆರಳಿ ಜನರ ನೋವಿಗೆ ಸ್ಪಂದಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಸರ್ಕಾರ ಕಾಳಜಿ ವಹಿಸದ ಹಿನ್ನೆಲೆ ನಾವು ಜವಾಬ್ದಾರಿ ತೆಗೆದುಕೊಂಡು ಸಾಮಾಜಿಕ ಕಳಕಳಿ ಮೆರೆಯುವ ಕಾರ್ಯ ಮಾಡಬೇಕಾಗುತ್ತದೆ ಎಂದರು.
ದಯವಿಟ್ಟು ಮುಖ್ಯಮಂತ್ರಿಗಳೇ ನೀವು ರಾಜ್ಯ ಪ್ರವಾಸ ಮಾಡುವುದು ಬೇಡ. ಕೇವಲ ಚಾಮರಾಜನಗರದಲ್ಲಿ ಸಾವನ್ನಪ್ಪಿದ 36 ಕುಟುಂಬಗಳ ನೋವನ್ನು ಹೋಗಿ ಆಲಿಸಿ ಬನ್ನಿ. ಕೇವಲ 2 ಲಕ್ಷ ನೀಡುತ್ತೇನೆ ಎಂದು ಭರವಸೆ ಕೊಟ್ಟರೆ ಸಾಲದು. ಶವದಿಂದ ಅಲ್ಲಿನ ಆಸ್ಪತ್ರೆ ಸಿಬ್ಬಂದಿ ಚಿನ್ನಾಭರಣ ಕಿತ್ತುಕೊಂಡಿದ್ದಾರೆ ಎಂಬ ಆರೋಪವಿದೆ.
ಇಂದೇ ಸಚಿವರನ್ನು ಚಾಮರಾಜನಗರಕ್ಕೆ ಕಳುಹಿಸಿ. ಕೇವಲ 2 ಸಾವಿರ ರೂ. ಭಿಕ್ಷೆ ಬೇಡಲು ಯಾರೂ ಬಂದಿಲ್ಲ. ಅವರಿಗೆ ಸ್ವಾಭಿಮಾನದಿಂದ ಬದುಕಲು ಅವಕಾಶ ನೀಡಿ. ಮುಂದಿನ 30 ದಿನ ನಮ್ಮ ನಾಯಕರು ನಿರಂತರವಾಗಿ ರಾಜ್ಯದೆಲ್ಲೆಡೆ ಸಂಚರಿಸಿ, ಮಾಹಿತಿ ಸಂಗ್ರಹಿಸುತ್ತೇವೆ ಎಂದರು.