ಬೆಂಗಳೂರು: ಕಾಂಗ್ರೆಸ್ ಪಕ್ಷದವರು ಬಿಟ್ ಕಾಯಿನ್ ಅವ್ಯವಹಾರದಲ್ಲಿ ತೊಡಗಿದ್ದರೆ ಅವರನ್ನು ಗಲ್ಲಿಗೆ ಹಾಕಲಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ ಎಂದು ಬಿಜೆಪಿ ಮುಖಂಡರ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತ್ಯುತ್ತರ ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನೇತೃತ್ವದಲ್ಲಿಂದು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಈ ವೇಳೆ ಜೆಡಿಎಸ್ನ ದೇವೇಂದ್ರಪ್ಪ ಮತ್ತು ಬೆಂಬಲಿಗರು, ಸ್ಥಳೀಯ ಮುಖಂಡರು ಸೇರಿ ಒಟ್ಟು 62 ಮಂದಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು. 2018 ರ ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ದೇವೇಂದ್ರಪ್ಪ, ಸೋತಿದ್ದರು.
ನಂತರ ಮಾತನಾಡಿದ ಡಿಕೆಶಿ, ಬಿಟ್ ಕಾಯಿನ್ ವಿಚಾರದಲ್ಲಿ ಕಳೆದ ಒಂದು ವರ್ಷದಿಂದ ಏನೇನು ನಡೆದಿದೆ, ಪೊಲೀಸರು ಯಾರ್ಯಾರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ, ಮಾಧ್ಯಮಗಳಲ್ಲಿ ಯಾರ ಹೆಸರು ಹೊರಗೆ ಬರ್ತಿದೆ, ಪ್ರಧಾನ ಮಂತ್ರಿಗಳಿಗೆ ಏನೆಲ್ಲಾ ದೂರು ಹೋಗಿವೆ, ಕೋರ್ಟ್‌ನಲ್ಲಿ ಯಾವ ಪ್ರಕರಣ ವಾಪಾಸ್ ಪಡೆಯಲಾಗಿದೆ, ಎಲ್ಲದರ ಮಾಹಿತಿ ಇವೆ. ಹೋಂ ಮಿನಿಸ್ಟರ್ ಯಾರೋ ಕಾಂಗ್ರೆಸ್ ಪಕ್ಷದ ಲೀಡರ್ ಎಂದಿದ್ದಾರೆ, ಯಾರನ್ನು ಬೇಕಾದರೂ ಜೈಲಿಗೆ ಹಾಕಲಿ ನಾವು ಯಾರ ಬೆಂಬಲಕ್ಕೂ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.
ಸಂದೀಪ್ ಪಾಟೀಲ್ ಪ್ರೆಸ್ ಮೀಟ್ ಮಾಡಿ ಹೇಳಿದ್ದು ನೆನಪಿದೆ. ಸಿಎಂ ಇಡಿಗೆ ವಹಿಸಿದ್ದೇವೆ ಎಂದು ಹೇಳಿದ್ದೂ ನೆನಪಿದೆ. ನಮ್ಮ ಬಳಿ ಎಲ್ಲಾ ದಾಖಲೆ ಇವೆ, ನಾವು ತನಿಖೆ ಮಾಡಿಸುತ್ತಿದ್ದೇವೆ. ಸೂಕ್ತ ಕಾಲದಲ್ಲಿ ಸೂಕ್ತ ವಿಚಾರ ತಿಳಿಸುತ್ತೇವೆ. ನಿಮ್ಮ ಕೈಯಲ್ಲಿ ಸರ್ಕಾರ ಇದೆ. ನೀವು ರಾಜ್ಯದ ಜನತೆಯಿಂದ ಏನು ಮುಚ್ಚಿಡುತ್ತಿದ್ದೀರಿ ಅದನ್ನು ತೆರೆದಿಡಿ. ಇಡಿ ಗೆ ಕೊಟ್ಟಿರೋದು ಏನು ಅನ್ನೋದನ್ನು ತಿಳಿಸಿ ಎಂದರು.
ಸಿ.ಟಿ.ರವಿ ಹೇಳಿಕೆಗೆ ತಿರುಗೇಟು ನೀಡುತ್ತಾ, ಕಾಂಗ್ರೆಸ್ ಪಕ್ಷದವರಿದ್ದರೆ ತನಿಖೆ ಮಾಡಲಿ, ಅವರನ್ನು ಬೇಕಾದರೂ ನೇಣು ಹಾಕಲಿ. ಕಾಂಗ್ರೆಸ್‌ನವರಿದ್ದರೆ ಮೊದಲು ಅರೆಸ್ಟ್ ಮಾಡಲಿ, ಅರೆಸ್ಟ್ ಮಾಡೋಕೆ ನಮ್ಮದು ಅಭ್ಯಂತರವಿಲ್ಲ. ಪೊಲೀಸರು ಎಲ್ಲ ತನಿಖೆ ಮಾಡುತ್ತಿದ್ದಾರೆ, ನಾವು ಸೂಕ್ತ ಮಾಹಿತಿ ಕೊಟ್ಟಿದ್ದೇವೆ, ನಿಮ್ಮ ಕೈಯಲ್ಲಿ ಸರ್ಕಾರವಿದೆ. ನೀವು ಮೊದಲು ಗರ್ಭಗುಡಿಯಲ್ಲಿರುವುದನ್ನ ಬಿಚ್ಚಿಡಿ. ಸಿಎಂ ಇಡಿಗೆ ಕೊಟ್ಟಿದ್ದೇವೆ ಅಂತಾರೆ, ಇಡಿಗೆ ಏನೇನು ಕೊಟ್ಟಿದ್ದಾರೆ ಬಿಚ್ಚಿಡಲಿ ಎಂದರು.
ಶ್ರೀಕಿ ಬಂಧನ ಹಿಂದೆ ಏನಿದೆ, ಈಗಾಗಲೇ ಏಳೆಂಟು ಕೇಸ್ ದಾಖಲಾಗಿದೆ. ಡ್ರಗ್ಸ್ ಕೇಸ್ ಬೇರೆ ಬೇರೆ ಕೇಸ್ ಹಾಕಿದ್ದಾರೆ, ಹೈಕೋರ್ಟ್ ನಿಂದ ಯಾವ ಕೇಸ್ ವಾಪಸ್ ಪಡೆದ್ರು, ಎಲ್ಲವೂ ನಮಗೆ ಗೊತ್ತಿದೆ, ಅದರ ಬಗ್ಗೆ ನಾನು ಮಾತನಾಡಲ್ಲ. ನಮ್ಮಲ್ಲೂ ಎಲ್ಲ ದಾಖಲೆಗಳೂ ಇವೆ, ಮೊದಲು ಅವರದೇ ಸರ್ಕಾರವಿದೆ. ಎಲ್ಲವನ್ನೂ ಬಿಡುಗಡೆ ಮಾಡಲಿ ಎಂದು ಸರ್ಕಾರಕ್ಕೆ ಡಿಕೆಶಿ ಆಗ್ರಹಿಸಿದರು.
ಯಾರ್ಯಾರು ಕಾಂಗ್ರೆಸ್ ಬಿಟ್ಟು ಹೋಗಿದ್ದಾರೆ, ಕಾಂಗ್ರೆಸ್ ಸಿದ್ದಾಂತದ ಮೇಲೆ ನಂಬಿಕೆ ಇರುವವರು, ಕಾಂಗ್ರೆಸ್ ಗೆ ಬೇಷರತ್ತಾಗಿ ಬರುವವರಿಗೆ ಮುಕ್ತವಾದ ಅವಕಾಶ ಇದೆ. ಆದ್ರೆ ಯಾರೂ ಕಂಡೀಷನ್ ಹಾಕಬಾರದು. ಅಧಿಕಾರಕ್ಕೆ ಪಟ್ಟು ಹಿಡಿದು ಸೀಟು ಬೇಕೇ ಬೇಕು ಎಂದು ಕೇಳುವಂತಿಲ್ಲ.
ಸೋನಿಯಾ ಗಾಂಧಿ ಅವರು, 12 ವರ್ಷದ ನಂತರ ಎಲ್ಲರಿಗೂ ಮುಕ್ತ ಸದಸ್ಯತ್ವ ಕೊಡಲು ಅವಕಾಶ ಕೊಟ್ಟಿದ್ದಾರೆ. ಪಂಡಿತ್ ಜವಹರಲಾಲ್ ನೆಹರೂ ಅವರ ಜನ್ಮದಿನ 14 ನೇ ತಾರೀಕಿನಂದು ಪ್ಯಾಲೇಸ್ ಗ್ರೌಂಡ್ ನಲ್ಲಿ ಅಭಿಯಾನ ಪ್ರಾರಂಭ ಮಾಡುತ್ತಿದ್ದೇವೆ. 14 ರಂದು 10-30 ಕ್ಕೆ ಅರಮನೆ ಮೈದಾನದ ಗಾಯತ್ರಿ ವಿಹಾರ್ ನಲ್ಲಿ ನೊಂದಾಯಿಸಿಕೊಳ್ಳಬೇಕು.
ಹಳೇ ಸದಸ್ಯರು ಕೂಡಾ ಪುನರ್ ನವೀಕರಣಗೊಳಿಸಬಹುದು. ಎಲ್ಲಾ ಘಟಕಗಳು, ಯೂತ್ ಕಾಂಗ್ರೆಸ್, ವಿದ್ಯಾರ್ಥಿ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ರೈತ ಘಟಕ, ಗ್ರಾಮ ಪಂಚಾಯತ್, ಮುನ್ಸಿಪಾಲಿಟಿ ಹಾಲಿ-ಮಾಜಿ ಸದಸ್ಯರು ಎಲ್ಲರೂ ಮತ್ತೆ ಮೆಂಬರ್ ಶಿಪ್ ಮಾಡಲು ಅವಕಾಶ ಇದೆ. ಯಾರು ಎಷ್ಟೇ ದೊಡ್ಡವರಾದರು ನೊಂದಾವಣಿ ಮಾಡಿಕೊಳ್ಳಬೇಕು. ನೋಂದಾವಣಿ ಶುಲ್ಕ 5 ರುಪಾಯಿ ಇರುತ್ತದೆ ಎಂದು ಮಾಹಿತಿ ನೀಡಿದರು.
ರಾಜ್ಯ ಎಲ್ಲಾ ಕಡೆಯವರು ಬಂದು ನೊಂದಾವಣಿ ಮಾಡಿಕೊಳಮಾಡಿಕೊಳ್ಳಬಹುದು, ರಾಜ್ಯ ಉಸ್ತುವಾರಿ ಸುರ್ಜೆವಾಲ ಅವರು ಉಪಸ್ಥಿತಿ ಇರುತ್ತಾರೆ, ಯಾರಿಗೆ ಕಾಂಗ್ರೆಸ್ ಪಕ್ಷದ ಮೇಲೆ ಗೌರವ ಇದೆ ಅವರೆಲ್ಲರೂ ಬಂದು ನೊಂದಾವಣಿ ಮಾಡಿಕೊಳ್ಳಬಹುದು. ಆನ್ಲೈನ್, ಆಫ್ ಲೈನ್ ಎರಡೂ ವ್ಯವಸ್ಥೆ ಇದೆ ಎಂದರು. ಕಾಂಗ್ರೆಸ್ ಇತಿಹಾಸವೇ ದೇಶದ ಇತಿಹಾಸ, ತ್ರಿವರ್ಣ ಧ್ವಜನವನ್ನು ಮನೆಬಾಗಿಲಲ್ಲಿ ಹಿಡಿಯುವಂತೆ ಮಾಡಿದೆ. ಹೀಗಾಗಿ ಪಕ್ಷದ ಮೇಲೆ ನಂಬಿಕೆ ಇರುವವರಿಗೆ ಸ್ವಾಗತ ಎಂದರು.