ಬೆಂಗಳೂರು: ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಗರಿಕರು ಸರಳ, ಸಜ್ಜನಿಕೆಯ ಯುವ ಹೆಣ್ಣು ಮಗಳಿಗೆ ಮತ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.
ಈ ಸಂಬಂಧ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು, ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಇಡೀ ದೇಶದ ಗಮನ ಸೆಳೆದಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ಅಭ್ಯರ್ಥಿಯಾಗಿರುವ ಮುನಿರತ್ನ ಆಡಿರುವ ಮಾತುಗಳನ್ನು ನೀವು ಕೇಳಿದ್ದೀರಿ. ಇಲ್ಲಿ ನಾನು ಹೆಚ್ಚಿಗೆ ಮಾತನಾಡುವುದು ಏನೂ ಇಲ್ಲ. ಸರಳ, ಸಜ್ಜನಿಕೆಯ ಹಾಗೂ ಯುವ ಪದವೀಧರ ಹೆಣ್ಣು ಮಗಳಿಗೆ ನಾವು ಟಿಕೆಟ್ ನೀಡಿದ್ದೇವೆ. ನಮ್ಮ ಅಭ್ಯರ್ಥಿ ಕುಸುಮ ಹೆಚ್. ಅವರು ಜನರ ಸೇವೆ ಮಾಡಬೇಕು ಎಂಬ ಉದ್ದೇಶದಿಂದ ನಿಮ್ಮ ಮುಂದೆ ಬಂದು ನಿಂತಿದ್ದಾರೆ. ಇವರು ಎಲ್ಲಾ ವರ್ಗದ, ಪಕ್ಷದ ಜನರ ಒಲವು ಗಳಿಸಿದ್ದಾರೆ ಎಂದಿದ್ದಾರೆ.
ಪಕ್ಷ ಭೇದ ಮರೆತು, ಜಾತಿ, ಧರ್ಮವನ್ನು ಮರೆತು ಎಲ್ಲರೂ ಒಗ್ಗಟ್ಟಾಗಿ ಕುಸುಮ ಅವರನ್ನು ಗೆಲ್ಲಿಸುವ ಮೂಲಕ ನಿಮ್ಮ ಸೇವಕಿಯಾಗಿಸಿಕೊಳ್ಳಿ ಎಂದು ಕಾಂಗ್ರೆಸ್ ಪಕ್ಷದ ಪರವಾಗಿ ಮನವಿ ಮಾಡಿಕೊಳ್ಳುತ್ತಿರುವುದಾಗಿ ಅವರು ಹೇಳಿದ್ದಾರೆ.