ಬೆಂಗಳೂರು: ಸದಾಶಿವನಗರದಲ್ಲಿರುವ ಮಾಜಿ ಸಚಿವ ಎಂ.ಬಿ. ಪಾಟೀಲ್ ನಿವಾಸಕ್ಕೆ ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭೇಟಿ ನೀಡಿದ್ರು. ಈ ವೇಳೆ ಉಭಯ ನಾಯಕರು ಪಕ್ಷ ಸಂಘಟನೆ ಕುರಿತಂತೆ ಚರ್ಚೆ ನಡೆಸಿದರು.
ಬಳಿಕ ಮಾತನಾಡಿದ ಮಾಜಿ ಸಚಿವ ಎಂ.ಬಿ. ಪಾಟೀಲ್ ಅವರು ಡಿಕೆಶಿ ಹಾಗೂ ನಮ್ಮ ಭೇಟಿ ಸೌಹಾರ್ದಯುತವಾದುದು. ಪಕ್ಷ ಸಂಘಟನೆಯ ಹಿತದೃಷ್ಟಿಯಿಂದ ಭೇಟಿ ಮಾಡಿದ್ದಾರೆ. ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸುವ ದೃಷ್ಠಿಯಿಂದ ಅವರು ಬಂದಿದ್ದಾರೆ. ಹೀಗಾಗಿ ನನ್ನ ಸಂಪೂರ್ಣ ಸಹಕಾರವನ್ನ ಕೊಡುತ್ತೇನೆ. ನಾವೆಲ್ಲ ಒಟ್ಟಾಗಿ ಪಕ್ಷವನ್ನ ಬಲಗೊಳಿಸುತ್ತೇವೆ. ಸದ್ಯದ ಪರಿಸ್ಥಿತಿಯಲ್ಲಿ ಇಂಥ ಭೇಟಿ ಅನಿವಾರ್ಯವಾಗಿದ್ದು, ಗುಂಪುಗಾರಿಕೆ ತಡೆಯುತ್ತದೆ. ಕಾರ್ಯಕರ್ತರಿಗೂ ಇದು ಉತ್ತಮ ಸಂದೇಶ ಕೊಡುತ್ತೆ ಎಂದರು.
ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಬಲವರ್ಧನೆ ವಿಚಾರವಾಗಿ ಮಾತನಾಡಿದ ಅವರು, ನಾನು ಹಾಗೂ ಸತೀಶ್ ಜಾರಕಿಹೊಳಿ ಪಕ್ಷವನ್ನ ಸಂಘಟಿಸುತ್ತೇವೆ ಎಂದು ತಿಳಿಸಿದರು.
ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಎಂ.ಬಿ. ಪಾಟೀಲರು ನನಗೆ ಬೆಂಬಲ ನೀಡಿದ್ದಾರೆ. ನಮಗೆ ವ್ಯಕ್ತಿಗತ ಭಿನ್ನಾಭಿಪ್ರಾಯಗಳಿಲ್ಲ. ಎಲ್ಲವನ್ನೂ ಬದಿಗೊತ್ತಿ ಪಕ್ಷ ಕಟ್ಟುತ್ತೇವೆ. ರಾಜ್ಯದಲ್ಲಿ ಮತ್ತೆ ರಾಷ್ಟ್ರದಲ್ಲಿ ಕಾಂಗ್ರೆಸ್ಅನ್ನು ಅಧಿಕಾರಕ್ಕೆ ತರುವುದೇ ನಮ್ಮ ಉದ್ದೇಶ. ಇಂದು ಕಾರ್ಯಾಧ್ಯಕ್ಷರು ಹಾಗೂ ಶಾಸಕರ ಜತೆ ಮಾತುಕತೆ ನಡೆಸುತ್ತೇನೆ ಎಂದು ಹೇಳಿದ್ರು.
ನಾನು ಅಧಿಕಾರ ಸ್ವೀಕಾರ ಮಾಡುವ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂದಿ ಬರ್ತಾರೆ ಅಂತಾ ಮಾಧ್ಯಮಗಳಲ್ಲಿ ಬರ್ತಿದೆ. ಆದ್ರೆ, ನಾನಿನ್ನು ಯಾರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಕರೆದರೆ ನಿಮಗೆ ತಿಳಿಸ್ತೀನಿ. ಕೊರೊನ ಭೀತಿ ಇರುವುದರಿಂದ ಯಾವುದೇ ಕಾರ್ಯಕ್ರಮ ಇಲ್ಲವೆಂದು ಮಾಧ್ಯಮದವರಿಗೆ ಡಿಕೆಶಿ ಸ್ಪಷ್ಟಪಡಿಸಿದರು.