ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಾಳೆಯಿಂದ 2 ದಿನಗಳ ಕಾಲ ಪ್ರವಾಸ ಕೈಗೊಂಡಿದ್ದಾರೆ. ನಾಳೆ ಬೆಳಗ್ಗೆ 7:30 ಕ್ಕೆ ಬೆಂಗಳೂರಿನಿಂದ ಮಧ್ಯಪ್ರದೇಶದ ಇಂದೋರ್ ಗೆ ತೆರಳಲಿರುವ ಡಿಕೆಶಿ ಅಲ್ಲಿಂದ ನೇರವಾಗಿ ಮಹಾಕಾಲೇಶ್ವರ ದೇವಾಲಯಕ್ಕೆ ತೆರಳಲಿದ್ದಾರೆ. ಬಳಿಕ ಅಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಉಜ್ಜಯಿನಿಯಲ್ಲಿ ಮಹಾಕಾಲೇಶ್ವರನ ದರ್ಶನ ಪಡೆಯಲಿರುವ ಡಿಕೆ ಶಿವಕುಮಾರ್ ನಾಳೆ ರಾತ್ರಿ ಉಜ್ಜಯಿನಿಯಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಸೋಮವಾರ ಬೆಳಗ್ಗೆ 11:30ಕ್ಕೆ ಇಂದೋರ್ ಯಿಂದ ದೆಹಲಿ ತೆರಳಲಿದ್ದಾರೆ. ಅಂದು ಮಧ್ಯಾಹ್ನ 1 ಗಂಟೆಗೆ ದೆಹಲಿ ತಲುಪಲಿದ್ದಾರೆ. ಜಾರಿ ನಿರ್ದೇಶನಾಲಯ ವಿಚಾರಣೆಗೆ ಬರುವಂತೆ ನೊಟೀಸ್ ನೀಡಿರುವ ಹಿನ್ನೆಲೆ ಸೋಮವಾರ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

ವಿಚಾರಣೆ ಬಳಿಕ ದಿಲ್ಲಿಯಲ್ಲೇ ಪಕ್ಷದ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಲಿರುವ ಶಿವಕುಮಾರ್ ರಾಜ್ಯಕ್ಕೆ ಮೋದ ಆಗಮನ ಹಿನ್ನೆಲೆ ನಡೆದಿರುವ ಬೆಳವಣಿಗೆ, ಬಿಜೆಪಿಗೆ ಇವರ ಆಗಮನ, ಕನಕದಾಸ, ವಾಲ್ಮೀಕಿ ಹಾಗೂ ಕೆಂಪೇಗೌಡರ ಪ್ರತಿಮೆ ಅನಾವರಣದ ಬಳಿಕ ಆಗಬಹುದಾದ ಬದಲಾವಣೆ, ಕಾಂಗ್ರೆಸ್ ಪಕ್ಷದ ಮೇಲೆ ಮೋದಿ ಆಗಮನದ ಪ್ರಭಾವ, ಕರ್ನಾಟಕದಲ್ಲಿ ಮೋದಿ ಬಂದು ಹೋದ ನಂತರದ ಬೆಳವಣಿಗೆ ಕುರಿತು ಮಾಹಿತಿ ಒದಗಿಸಲಿದ್ದಾರೆ.
ಒಕ್ಕಲಿಗ, ಹಿಂದುಳಿದ ವರ್ಗಗಳ ಮತ ಸೆಳೆಯಲು ಬಿಜೆಪಿ ಪ್ರಧಾನಿ ಮೂಲಕ ನಡೆಸಿರುವ ಯತ್ನದ ವಿವರವನ್ನು ಡಿಕೆಶಿ ಒದಗಿಸಿ ಬರಲಿದ್ದಾರೆ. ದಿಲ್ಲಿಯಿಂದ ಬೆಂಗಳೂರಿಗೆ ಯಾವಾಗ ವಾಪಾಸ್ ಆಗಲಿದ್ದಾರೆ ಎನ್ನುವ ಬಗ್ಗೆ ಸರಿಯಾದ ಮಾಹಿತಿಯಿಲ್ಲ.
ಇದನ್ನೂ ಓದಿ : ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಹೆಚ್ಡಿಡಿ ನಿರ್ಲಕ್ಷ್ಯ ಆರೋಪ: ಹೆಚ್‍ಡಿಕೆ ಗರಂ