ಬೆಂಗಳೂರು: ರಾಜಾಜಿನಗರ ವಿಧಾನ ಸಭೆ ಕ್ಷೇತ್ರದ ಟಿಕೆಟ್ಗಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ಪ್ರಯತ್ನ ಮುಂದುವರಿಸಿದ್ದಾರೆ. ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಕೇವಲ ಮನೋಹರ್ ಮಾತ್ರವಲ್ಲದೇ ಆಕಾಂಕ್ಷಿಗಳಾದ ಭವ್ಯ ನರಸಿಂಹಮೂರ್ತಿ, ರಘುವೀರ್ ಗೌಡ, ಪುಟ್ಟರಾಜ್ ಅವರು ಸದಾಶಿವನಗರ ನಿವಾಸದಲ್ಲಿ ಭೇಟಿ ಮಾಡಿ ಚರ್ಚಿಸಿದ್ದಾರೆ.
ಹೊರಗಿನವರಿಗೆ ಟಿಕೆಟ್ ನೀಡಬೇಡಿ. ನಮ್ಮಲ್ಲಿ ಯಾರಿಗಾದರೂ ಟಿಕೆಟ್ ನೀಡಿ. ಬಿಜೆಪಿಯಿಂದ ವಲಸೆ ಬಂದ ಪುಟ್ಟಣ್ಣ ಅವರಿಗೆ ಮಣೆ ಹಾಕಬೇಡಿ ಎಂದು ರಾಜಾಜಿನಗರ ವಿಧಾನ ಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಬಳಿಕ ತಮ್ಮ ನಿವಾಸ ಬಳಿ ಮಾಧ್ಯಮಗಳಿಗೆ ಮಾತನಾಡಿದ ಡಿಕೆಶಿ, ರಮೇಶ್ ಜಾರಕಿಹೊಳಿ ವಿರುದ್ಧ ಕಿಡಿಕಾರಿದರು. ನಿಮ್ಹಾನ್ಸ್ ಅಭ್ಯರ್ಥಿಗಳ ಬಗ್ಗೆ ನಾನು ಈಗ ಮಾತನಾಡಲ್ಲ ಎಂದರು.
ರೌಡಿಶೀಟರ್ಗಳು ಬಿಜೆಪಿ ಮುತ್ತು ರತ್ನಗಳು: ಪ್ರಧಾನಿ ಮೋದಿ ರೌಡಿಶೀಟರ್ ಮುಂದೆ ಕೈ ಮುಗಿದು ನಿಂತ ವಿಚಾರವಾಗಿ ಮಾತನಾಡಿ, ಅವರೆಲ್ಲ ಬಿಜೆಪಿಯವರ ಮುತ್ತು ರತ್ನಗಳು. ಯಾರಿಗಾದರೂ ಮೋದಿ ಕೈ ಮುಗಿಯಲಿ, ರೌಡಿಶೀಟರ್ನಾದರೂ ಸೇರಿಸಿಕೊಳ್ಳಲಿ, ಯಾರನ್ನಾದರೂ ಸೇರಿಸಿಕೊಳ್ಳಲಿ. ಅವರ ಮುತ್ತುರತ್ನಗಳನ್ನ ಚೆನ್ನಾಗಿ ನೋಡಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಮಾಜಿ ಸಂಸದ ಧ್ರುವ ನಾರಾಯಣ್ ಪುತ್ರನಿಗೆ ಟಿಕೆಟ್ ನೀಡುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, "ಧ್ರುವ ನಮ್ಮ ಆಸ್ತಿ, ಅವರ ಬಗ್ಗೆ ಎಐಸಿಸಿ ಅಧ್ಯಕ್ಷರಿಗೆ ಚೆನ್ನಾಗಿ ಗೊತ್ತಿದೆ. ಅವರ ಸಾವಿಗೆ ನ್ಯಾಯ ಒದಗಿಸುವ ಕೆಲಸವನ್ನು ನಾವು ಮಾಡೇ ಮಾಡುತ್ತೇವೆ" ಎಂದರು.
ಪ್ರತಿಭಟನೆ ನಡೆಸಿದ್ದ ಮನೋಹರ್: ಎಸ್.ಮನೋಹರ್ ಹಾಗೂ ತಂಡದ ಸದಸ್ಯರ ಭೇಟಿ ವಿಚಾರವಾಗಿ ಡಿಕೆಶಿ ಯಾವುದೇ ವಿವರ ನೀಡಲಿಲ್ಲ. ಕಳೆದ ವಾರ ಕಾಂಗ್ರೆಸ್ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲಾ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಮ್ಮಿಕೊಂಡಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಪುಟ್ಟಣ್ಣ ಸಹ ಪಾಲ್ಗೊಳ್ಳಲು ಮುಂದಾದರು. ಇಂದು ಸಂಜೆ ಎಷ್ಟೇ ಬಿಜೆಪಿ ಪಕ್ಷದ ಸದಸ್ಯತ್ವಕ್ಕೆ ಹಾಗೂ ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಅದು ಇನ್ನು ಅಂಗೀಕಾರವಾಗದ ಹಿನ್ನೆಲೆ ಅವರು ಕಾಂಗ್ರೆಸ್ ಪಕ್ಷದ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಸರಿಯಲ್ಲ. ಅವರಿಗೆ ಸುದ್ದಿಗೋಷ್ಠಿಗೆ ತೆರಳನ್ನು ಅವಕಾಶ ನೀಡಬಾರದು ಎಂದು ಮನೋಹರ್ ಪ್ರತಿಭಟನೆ ಮಾಡಿದ್ದರು.
ರಾಜಾಜಿ ನಗರದಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ಎಸ್.ಮನೋಹರ್ಗೆ ಇದೀಗ ಪುಟ್ಟಣ್ಣ ಪ್ರತಿಸ್ಪರ್ಧಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಇವರು ಅಭ್ಯರ್ಥಿ ಆಗಲಿದ್ದಾರೆ ಎಂಬ ಮಾತು ದಟ್ಟವಾಗಿ ಕೇಳಿ ಬರುತ್ತದೆ. ಇಂದು ಕಾಂಗ್ರೆಸ್ ಕಚೇರಿಗೆ ಆಗಮಿಸಿರುವ ಸಂದರ್ಭದಲ್ಲಿ ಅವರು ಈ ವಿಚಾರವಾಗಿ ಮಾತುಕತೆ ಸಹ ನಡೆಸಲಿದ್ದಾರೆ ಎಂಬುದನ್ನು ಅರಿತ ಮನೋಹರ್ ಪ್ರತಿಭಟನೆ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ಗೆ ಮುತ್ತಿಗೆ ಹಾಕಲು ಯತ್ನಿಸಿದ ರಾಜಾಜಿ ನಗರ ಕಾಂಗ್ರೆಸ್ ನಾಯಕರು ಪುಟ್ಟಣ್ಣ ಅವರಿಗೆ ಟಿಕೆಟ್ ಕೊಡಬೇಡಿ ಎಂದು ಗಲಾಟೆ ಮಾಡಿದ್ದಾರೆ. ಕೆಪಿಸಿಸಿ ಕಚೇರಿ ಮುಂಭಾಗ ಗಲಾಟೆ ಮಾಡಿದ ಮನೋಹರ್ ಹಾಗೂ ಅವರ ಬೆಂಬಲಿಗರು ನಂತರ ಕೆಪಿಸಿಸಿ ಕಚೇರಿ ಮೊದಲ ಮಹಡಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿ ಸ್ಥಳಕ್ಕೂ ಆಗಮಿಸಿ ಪುಟ್ಟಣ್ಣ ವಿರುದ್ಧ ಧಿಕ್ಕಾರ ಕೂಗಿದ್ದರು.
ಇದನ್ನೂ ಓದಿ: 170 ಕ್ಷೇತ್ರದ ಅಭ್ಯರ್ಥಿಗಳ ಕುರಿತು ಚರ್ಚೆ ಮಾಡಲಾಗಿದ್ದು, 50 ಕ್ಷೇತ್ರಗಳಷ್ಟೇ ಬಾಕಿ ಇದೆ: ಡಿಕೆಶಿ