ಬೆಂಗಳೂರು: ರಾಜ್ಯದಲ್ಲಿ ಪ್ರತಿ ವರ್ಷ ಹಕ್ಕಿಜ್ವರ ಹಾವಳಿಯಿದ್ದು, ಸರ್ಕಾರ ಈ ಬಗ್ಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಕೂಡ ಮಾಡಿಲ್ಲ. ಈ ವಿಚಾರದಲ್ಲಿ ಸರ್ಕಾರ ಬೇಜವಾಬ್ದಾರಿತನ ತೋರಿಸುತ್ತಿದೆ ಎಂದು ಜೆಡಿಎಸ್ ಸದಸ್ಯ ಗೋವಿಂದರಾಜು ಬೇಸರ ವ್ಯಕ್ತಪಡಿಸಿದರು.
ನಿಯಮ 72ರ ಅಡಿ ವಿಧಾನಪರಿಷತ್ನಲ್ಲಿ ಗಮನ ಸೆಳೆಯುವ ಸೂಚನೆಯಡಿ ಇಂದು ಮಾತನಾಡಿ, ಹಕ್ಕಿಜ್ವರದಿಂದ ಪ್ರತಿ ವರ್ಷ ಕೋಳಿ ಸಾಕಣೆದಾರರಿಗೆ ಸಾವಿರಾರು ಕೋಟಿ ರೂ. ನಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಕಣೆದಾರರ ನೆರವಿಗೆ ಧಾವಿಸುವ ಅವಶ್ಯಕತೆ ಇದೆ ಎಂದು ಒತ್ತಾಯಿಸಿದರು.
ನೆರೆಯ ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಕೋಳಿ ಸಾಕಣೆದಾರರಿಗೆ ಪ್ರತಿ ಯೂನಿಟ್ ವಿದ್ಯುತ್‌ಗೆ 2 ರೂ. ಸಹಾಯಧನ, ಕನಿಷ್ಠ ಬೆಂಬಲ ಬೆಲೆಯಲ್ಲಿ ರೈತರಿಂದ ಖರೀದಿಸಿದ ಜೋಳಕ್ಕೆ ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತಿದೆ. ಜೊತೆಗೆ, ಸಣ್ಣ ಗಾತ್ರದ ಸಾಕಣೆದಾರರಿಗೆ ಸಬ್ಸಿಡಿಯಲ್ಲಿ ಸಾಲ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸದಸ್ಯರು ಮತ್ತು ಸಂಬಂಧಪಟ್ಟ ಸಚಿವರೊಂದಿಗೆ ಸಭೆ ನಡೆಸಿ, ಕೋಳಿ ಸಾಕಣೆದಾರರಿಗೆ ಪೂರಕವಾಗುವ ನಿಟ್ಟಿನಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದನ್ನು ಓದಿ: ಯತ್ನಾಳ್ ವಿರುದ್ಧ ಕ್ರಮಕ್ಕೆ ಬಿಜೆಪಿ ಶಾಸಕರ ಆಗ್ರಹ... ಮುಖ್ಯಮಂತ್ರಿ ಭೇಟಿ ಮಾಡಿ ದೂರು
ರಾಜ್ಯದಲ್ಲಿ ವಿಶೇಷವಾಗಿ ಕೋಲಾರ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಕೋಳಿ ಸಾಕಣೆ ತಮ್ಮ ಉಪಕಸುಬಾಗಿ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ 488 ಬಾಯ್ಲರ್ (ಮಾಂಸದ) ಕೋಳಿ ಫಾರಂಗಳು ಹಾಗೂ 123 ಲೇಯರ್ಸ (ಮೊಟ್ಟೆ ಇಡುವ) ಕೋಳಿ ಫಾರಂಗಳು ಇದೆ. ಅದರಲ್ಲಿ, ಬಾಯ್ಲರ್ ಕೋಳಿ ಫಾರಂಗಳಲ್ಲಿ ಅಂದಾಜು 19,98,140 ಮಾಂಸದ ಕೋಳಿಗಳನ್ನು ಹಾಗೂ ಲೇಯರ್ಸ್ ಕೋಳಿ ಫಾರಂಗಳಲ್ಲಿ ಅಂದಾಜು 35,95,200 ಮೊಟ್ಟೆ ಕೋಳಿಗಳನ್ನು ಸಾಕಣೆ ಮಾಡಲಾಗುತ್ತಿದೆ. ಎರಡೂ ಕೋಳಿ ಫಾರಂಗಳ ಮಾಲೀಕರು ಮಾರಾಟಕ್ಕೆ ವಿವಿಧ ಖಾಸಗಿ ಕಂಪನಿಗಳಿಗೆ ಗುತ್ತಿಗೆ ಹಾಗೂ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಒಪ್ಪಂದದ ಪ್ರಕಾರ ಕೋಳಿ ಬಾರಲ್ಲಿ ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.
ಕೋಳಿ ಸಾಕಾಣಿಕೆಗೆ ಇಲಾಖೆಯಿಂದ ನೀಡಲಾದ ಸೌಲಭ್ಯಗಳು ಸೇರಿದಂತೆ ಇತರ ಮಾಹಿತಿಗಳನ್ನು ಸಚಿವರು ಇದೇ ಸಂದರ್ಭ ಒದಗಿಸಿದರು.