ಬೆಂಗಳೂರು: ರಾತ್ರಿ ವೇಳೆ ಟೆಕ್ಕಿಯೊಬ್ಬನಿಗೆ ಡ್ರಾಪ್ ಕೊಡುವುದಾಗಿ ಟೆಂಪೊ ಟ್ರಾವೆಲರ್ನಲ್ಲಿ ಹತ್ತಿಸಿಕೊಂಡು ರಾತ್ರಿಯಿಡಿ ಸುತ್ತಾಡಿಸಿ ಎಟಿಎಂ ಕಾರ್ಡ್ ಪಡೆದು ಹಣ ಡ್ರಾ ಮಾಡಿಕೊಂಡಿದ್ದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಸಿ.ಕೆ.ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪ್ರಶಾಂತ್ ಹಾಗೂ ದೀಪಕ್ ಎಂಬುವರೆ ಬಂಧಿತ ಆರೋಪಿಗಳು. ವೈಟ್ ಫೀಲ್ಡ್ನ ಡೆಲ್ ಕಂಪೆನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಸತೀಶ್ ಎಂಬುವರು ಮೋಸಕ್ಕೊಳಗಾಗಿದ್ದರು. ಮಾ.13ರಂದು ರಾತ್ರಿ ತಮ್ಮ ಸ್ನೇಹಿತ ಮಹೇಶ್ ಜೊತೆ ಗೆಳೆಯನ ಮನೆಗೆ ಊಟಕ್ಕೆ ಹೋಗಿದ್ದರು. ಆದರೆ ಮರಳಿ ಬರುವಾಗ ಮಹೇಶ್ ಬೈಕ್ ಕೀ ಕಳೆದು ಹೋಗಿದ್ದರಿಂದ ಅನಿವಾರ್ಯವಾಗಿ ಮನೆಗೆ ಹೋಗಲು ಕತ್ರಿಗುಪ್ಪೆ ಸಿಗ್ನಲ್ ಬಳಿಗೆ ಬಂದಿದ್ದಾರೆ. ಆಗ ಟೆಂಪೋ ಟ್ರಾವೆಲರ್ನಲ್ಲಿ ಬಂದ ಆರೋಪಿಗಳು, ಇವರಿಬ್ಬರನ್ನು ಹತ್ತಿಸಿಕೊಂಡು ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಡ್ರಾಪ್ ಮಾಡಿದ್ದಾರೆ. ಆಗ ಪ್ರಯಾಣದ ಹಣ ನೀಡುವಂತೆ ಕೇಳಿದಾಗ ಎಟಿಎಂಗೆ ಹೋಗಿ ಡ್ರಾ ಮಾಡಿಕೊಂಡು ಬರುವುದಾಗಿ ಮಹೇಶ್, ತನ್ನ ಸ್ನೇಹಿತ ಸತೀಶ್ನನ್ನು ಟಿಟಿ ವಾಹನದಲ್ಲೇ ಬಿಟ್ಟು ಹೋಗಿದ್ದ.
ಆದರೆ, ಇತ್ತ ಟಿಟಿ ವಾಹನದಲ್ಲಿ ಆರೋಪಿಗಳು ಸತೀಶ್ಗೆ ಡ್ರ್ಯಾಗರ್ ತೋರಿಸಿ ಕಿಡ್ನಾಪ್ ಮಾಡಿದ್ದಾರೆ. ಸಾರಕ್ಕಿ ಸಿಗ್ನಲ್, ಕನಕಪುರ ರಸ್ತೆ ಮೂಲಕ ತಾತಗುಣಿ ಬಳಿ ಕರೆದೊಯ್ದು ದೈಹಿಕವಾಗಿ ಹಲ್ಲೆ ನಡೆಸಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಟೆಕ್ಕಿ ಬಳಿಯಿದ್ದ ಹೆಚ್ಎಫ್ಡಿಸಿ ಬ್ಯಾಂಕ್ ಎಟಿಎಂ ಕಾರ್ಡ್ ಪಿನ್ ನಂಬರ್ ಪಡೆದು 4 ಸಾವಿರ ಹಣ ಡ್ರಾ ಮಾಡಿಕೊಂಡಿದ್ದಾರೆ. ಬಳಿಕ ಸತೀಶ್ ಬಳಿಯಿದ್ದ 12 ಸಾವಿರ ಮೌಲ್ಯದ ವಾಚ್ ಕಿತ್ತುಕೊಂಡು ಮತ್ತೆ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದಾರೆ. ಅಲ್ಲದೆ ಹೆಂಡತಿಗೆ ಪೋನ್ ಮಾಡಿ ಹಣ ತರಿಸಿಕೊಳ್ಳುವಂತೆ ಆರೋಪಿಗಳು ಒತ್ತಾಯಿಸಿದ್ದಾರೆ.
ಇದಕ್ಕೆ ಒಪ್ಪಿಕೊಂಡು ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಸತೀಶ್ ಅವರನ್ನು ಕರೆದುಕೊಂಡು ಬಂದಿದ್ದಾರೆ. ಆಗ ದುಷ್ಕರ್ಮಿಗಳನ್ನು ಹೇಗೋ ಯಾಮಾರಿಸಿ ಸತೀಶ್ ಎಸ್ಕೇಪ್ ಆಗಿದ್ದು, ತೆರೆಮೆರೆಯಲ್ಲಿ ಟೆಂಪೊ ಟ್ರಾವೆಲರ್ ನಂಬರ್ ತಿಳಿದುಕೊಂಡಿದ್ದರು. ಈ ಬಗ್ಗೆ ಪೊಲೀಸರಿಗೆ ನಡೆದ ವಿಷಯ ತಿಳಿಸಿ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.