ಬೆಂಗಳೂರು : ದೇಸೀ ಸೌಂದರ್ಯದ, ಚರ್ಮಕ್ಕೆ ಹಿತಕರ ಅನುಭವ ನೀಡುವ, ಹೊಸ ವಿನ್ಯಾಸಗಳೊಂದಿಗೆ ಕೈಮಗ್ಗದ ದೇಸಿ - ಖಾದಿ ವಸ್ತ್ರಗಳ ಮಾರಾಟ ಸಿಲಿಕಾನ್ ಸಿಟಿ ಜನರಿಗಾಗಿ ವೀಕೆಂಡ್ನಲ್ಲಿ ಆರಂಭವಾಗಿದೆ.
ಗ್ರಾಮ ಸೇವಾ ಸಂಘದ ವತಿಯಿಂದ ಗ್ರಾಮೋದ್ಯೋಗ ಉಳಿಸಿ ರಾಜ್ಯವ್ಯಾಪಿ ಆಂದೋಲನದ ಭಾಗವಾಗಿ ಗ್ರಾಮೋದ್ಯೋಗ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಗಾಂಧಿ ಭವನದಲ್ಲಿ ಇಂದು ಉದ್ಘಾಟನೆಗೊಂಡಿದ್ದು, ಅಕ್ಟೋಬರ್ ನಾಲ್ಕರವರೆಗೂ ಮಾರಾಟ ನಡೆಯಲಿದೆ.
ಇಂದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚಿತ್ರಕಲಾ ಪರಿಷತ್ನ ಅಧ್ಯಕ್ಷ ಬಿ.ಎಲ್ ಶಂಕರ್, ಇಪ್ಪತ್ತನೇ ಶತಮಾನದ ಎರಡು ಅದ್ಭುತಗಳು ಗಾಂಧೀಜಿ ಹಾಗೂ ಆಟಂಬಾಂಬು ಎಂದು ಲೋಹಿಯಾ ಹೇಳಿದ್ದರು. ಇಡೀ ಸ್ವಾತಂತ್ರ್ಯ ಹೋರಾಟದಲ್ಲಿ ಜನರು ಸಂಘಟನೆಗೊಂಡು, ಜನಸಾಮಾನ್ಯರ ಧನಿಯಾಗಿ ಗಾಂಧಿ ಸ್ವಾತಂತ್ರ್ಯ ತಂದುಕೊಟ್ಟವರು. ಗ್ರಾಮೋದ್ಯೋಗ ಗಾಂಧೀಜಿಯವರ ನೆಚ್ಚಿನ ವಿಷಯವಾಗಿತ್ತು. ಆದರೆ ಇಂದು ರೈತರು, ಸ್ವ ಉದ್ಯೋಗಿಗಳ ಆತ್ಮಹತ್ಯೆ ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಯಂತ್ರಗಳಲ್ಲಿ ಮಾಡಿದ್ದಕ್ಕಿಂತ ಕೈಯಲ್ಲಿ ಮಾಡಿದ್ದಕ್ಕೆ ಮಾಲ್ಗಳಲ್ಲಿ ಹಣ ಜಾಸ್ತಿ. ಅಲ್ಲಿ ಬ್ರಾಂಡ್ಗಳ ಹೆಸರು ಕೊಟ್ಟು ಹೆಚ್ಚಿನ ಹಣ ಕೀಳುತ್ತಾರೆ. ಆದರೆ ದುಡಿಯುವ ವರ್ಗಕ್ಕೆ ಈ ಹಣ ಸೇರುತ್ತಿಲ್ಲ. ಹೊಸದಾಗಿ ಆರ್ ಆರ್ ನಗರದ ಚಿತ್ರಕಲಾ ಪರಿಷತ್ನ ಜಾಗದಲ್ಲಿ ಆರಂಭವಾಗುತ್ತಿರುವ ಗ್ರಾಮೋದ್ಯೋಗದ ಮಳಿಗೆಗಳಲ್ಲಿ ಎಷ್ಟಾದರೂ ಮಾರಾಟ ಮಾಡಲಿ ಎಂದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷರಾದ, ವೂಡೆ ಪಿ.ಕೃಷ್ಣ ಮಾತನಾಡಿ, ಗ್ರಾಮೀಣ ಆರ್ಥಿಕತೆಗೆ ಶಕ್ತಿ ತುಂಬುವ ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದರು. ಗಾಂಧಿಯವರ ಚಿಂತನೆಗೆ ಮತ್ತಷ್ಟು ಪುಷ್ಠಿ ಸಿಗಲಿ. ಗ್ರಾಮೋದ್ಯೋಗ ಗಾಂಧೀಜಿಯವರ ಪ್ರೀತಿಯ ಉದ್ಯೋಗ. ಆತ್ಮನಿರ್ಭರ ಭಾರತ ಬರೀ ಸ್ಲೋಗನ್ ಆಗ್ಬಾರ್ದು. ಇದೀಗ ಕಾರ್ಯರೂಪಕ್ಕೆ ಬರುತ್ತಿದೆ. ಗಾಂಧಿ ಓಡಾಡಿದ ಪ್ರದೇಶದಿಂದಲೇ ಗ್ರಾಮೋದ್ಯೋಗದ ಕೆಲಸ ಆರಂಭವಾಗಿದೆ ಎಂದರು.