ಬೆಂಗಳೂರು : ಕಾಸರಗೋಡು ಜಿಲ್ಲೆಯಲ್ಲಿನ ಗ್ರಾಮಗಳ ಕನ್ನಡ ಹೆಸರನ್ನು ಮಲಯಾಳಂಗೆ ಬದಲಾಯಿಸುವ ಪ್ರಯತ್ನದ ಹಿಂದೆ ಕರ್ನಾಟಕದ ಮೇಲೆ ಒತ್ತಡ ಹೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ರಾತ್ರಿ ಸಂಚಾರ ನಿಷೇಧ ಸಡಿಲಿಕೆ ಪ್ರಯತ್ನಕ್ಕೆ ಮುಂದಾಗಿದೆಯಾ ಎನ್ನುವ ವಾದವನ್ನು ಹುಟ್ಟು ಹಾಕಿದೆ. ಕರ್ನಾಟಕ ಮತ್ತು ಕೇರಳ ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ರಾತ್ರಿ ಸಂಚಾರಕ್ಕೆ ಕರ್ನಾಟಕ ಸರ್ಕಾರ ನಿಷೇಧ ಹೇರಿದೆ.
ಈ ನಿಷೇಧವನ್ನು ರದ್ದುಪಡಿಸಲು ಕಾನೂನು ಹೋರಾಟದಲ್ಲಿ ಕೇರಳ ಸೋತಿದೆ. ರಾಜಕೀಯ ಒತ್ತಡ ಹೇರಿಕೆಯಲ್ಲಿಯೂ ಹಿನ್ನಡೆ ಅನುಭವಿಸಿರುವ ಕೇರಳ ಸರ್ಕಾರ, ನಿಷೇಧ ರದ್ದು ಬದಲು ಸಡಿಲಿಕೆ ಮಾಡಿಕೊಳ್ಳಲು ಗಡಿ ಗ್ರಾಮಗಳ ಹೆಸರು ಬದಲಾವಣೆ ಅಸ್ತ್ರ ಪ್ರಯೋಗಿಸಿ ಲಾಭ ಪಡೆಯುವ ದಾಳ ಪ್ರಯೋಗಿಸಿದೆಯಾ ಎನ್ನುವ ಅನುಮಾನ ಸೃಷ್ಠಿಯಾಗಿದೆ.
ನಾಗರಹೊಳೆ ಹುಲಿಧಾಮದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆವರೆಗೂ ಸಂಚಾರ ನಿರ್ಬಂಧಿಸಿ 2008ರಲ್ಲಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದನ್ನು 2018ರಲ್ಲಿ ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು. ಕರ್ನಾಟಕ-ಕೇರಳ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಸಂಚಾರ ನಿರ್ಬಂಧ ವಿರೋಧಿಸಿ ಕೇರಳದಲ್ಲಿ ಪ್ರತಿಭಟನೆ ನಡೆದಿದ್ದವು. ಬಂದ್ ಕೂಡ ನಡೆಸಲಾಗಿತ್ತು.
ಇದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಬಲ ಕೂಡ ನೀಡಿದ್ದರು. ಆದರೂ 2019ರ ಆಗಸ್ಟ್ನಲ್ಲಿ ರಾತ್ರಿ ಸಂಚಾರ ನಿಷೇಧ ಮುಂದುವರೆಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದ್ದರಿಂದ ಕೇರಳಕ್ಕೆ ಹಿನ್ನಡೆಯಾಗಿತ್ತು. 2019ರ ಸೆಪ್ಟೆಂಬರ್ನಲ್ಲಿ ಕೇಂದ್ರ ಸರ್ಕಾರ ಕೂಡ ಬಂಡಿಪುರದಲ್ಲಿ ರಾತ್ರಿ ಸಂಚಾರಕ್ಕೆ ಅನುಮತಿ ನೀಡುವುದಿಲ್ಲ ಎಂದು ಪುನರುಚ್ಚರಿಸಿತ್ತು. ಹೀಗಾಗಿ, ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ ತೆರವು ಮಾಡಿಸಿಕೊಳ್ಳುವ ಕೇರಳ ಸರ್ಕಾರದ ಎಲ್ಲ ಪ್ರಯತ್ನ ವಿಫಲವಾಗಿದೆ.
ಇದೀಗ ವಿವಾದವನ್ನೇ ವರವಾಗಿಸಿಕೊಳ್ಳಲು ಕೇರಳ ರಾಜ್ಯ ಮುಂದಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಕೆಎಸ್ಆರ್ಟಿಸಿ ಹೆಸರನ್ನು ತನ್ನದಾಗಿಸಿಕೊಳ್ಳುವಲ್ಲಿ ಸಫಲವಾಗಿರುವ ಕೇರಳ ಸರ್ಕಾರ ಇದೀಗ ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧವನ್ನು ಸಡಿಲಿಕೆ ಮಾಡಿಸಿಕೊಳ್ಳಲು ಮುಂದಾಗಿದೆ. ಅದರ ಮೊದಲ ಭಾಗವಾಗಿ ಗಡಿ ಗ್ರಾಮಗಳ ಕನ್ನಡ ಹೆಸರು ಬದಲಾವಣೆ ಮಾಡುವ ಸುದ್ದಿಯನ್ನು ಹರಿಬಿಟ್ಟು ಸರ್ಕಾರದ ಮಟ್ಟದಲ್ಲಿ ಮಾತುಕತೆ, ಪತ್ರ ವ್ಯವಹಾರಕ್ಕೆ ವೇದಿಕೆಯನ್ನಾಗಿ ಮಾಡಿಕೊಳ್ಳುವ ತಂತ್ರ ಅನುಸರಿಸುತ್ತಿದೆ ಎನ್ನಲಾಗಿದೆ.
ಅಸಲಿಗೆ ಕೇರಳದಲ್ಲಿ ಕನ್ನಡದ ಹೆಸರನ್ನು ಬದಲಿಸುವ ಪ್ರಯತ್ನಗಳು ಹೊಸತೇನಲ್ಲ. ಆಗಾಗ ಇದು ನಡೆಯುತ್ತಲೇ ಇವೆ, 2013ರಲ್ಲಿ 'ಮೈರೆ' ಎನ್ನುವ ಹಳ್ಳಿಯ ಹೆಸರನ್ನು 'ಶೇಣಿ' ಎಂದು ಬದಲಿಸಿದ ನಿದರ್ಶನ ಕಣ್ಮುಂದೆ ಇರುವಾಗಲೇ ಮಂಜೇಶ್ವರ ಹೆಸರನ್ನು ಮಂಜೇಶ್ವರಂ ಎಂದು ಬದಲಿಸಿ ಹೊಸ ವಿವಾದ ಹುಟ್ಟು ಹಾಕಿತ್ತು. ಇದೀಗ ಮುಂದುವರೆದು ಕಾಸರಗೋಡು ಮತ್ತು ಮಂಜೇಶ್ವರ ತಾಲೂಕಿನ 15 ಗ್ರಾಮಗಳ ಹೆಸರನ್ನು ಬದಲಿಸುವ ಪ್ರಯತ್ನ ಬಹಿರಂಗವಾಗಿದ್ದು, ಗಡಿ ಭಾಗದಲ್ಲಿ ಕಿಡಿ ಹೊತ್ತಿಸುತ್ತಿದೆ.
ಕಾಸರಗೋಡಿನಲ್ಲಿ ಕೇರಳ ಸರ್ಕಾರದ ನಿಲುವಿನ ವಿರುದ್ಧ ಜನತೆ ದನಿ ಎತ್ತುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇರಳ ಸಿಎಂ ಪಿಣರಾಯಿ ವಿಜಯನ್ಗೆ ಪತ್ರ ಬರೆದು ಕನ್ನಡ ಗ್ರಾಮಗಳ ಹೆಸರು ಬದಲಾವಣೆ ಮಾಡದಂತೆ ಮನವಿ ಮಾಡಿದ್ದಾರೆ. ಆ ಮೂಲಕ ಕೇರಳ ಸರ್ಕಾರದ ಜೊತೆ ಪತ್ರ ವ್ಯವಹಾರದಂತಹ ಚಟುವಟಿಕೆ ಆರಂಭಗೊಂಡಿದೆ.
ಕಾಸರಗೋಡು ಜಿಲ್ಲಾಧಿಕಾರಿ ಸಜೀತ್ ಬಾಬು ಮೂಲಕ ಗ್ರಾಮಗಳ ಹೆಸರು ಬದಲಾವಣೆ ಪ್ರಸ್ತಾವನೆ ಇಲ್ಲ ಎಂದು ಕೇರಳ ಸರ್ಕಾರ ಸ್ಪಷ್ಟೀಕರಣ ಕೊಡಿಸಿದೆ. ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳುವ ಕುರಿತು ಮಾತುಕತೆ, ಉಭಯ ರಾಜ್ಯಗಳ ನಡುವೆ ಹುಟ್ಟುವಂತೆ ಮಾಡುವ ಲೆಕ್ಕಾಚಾರದಲ್ಲಿದೆ ಎನ್ನಲಾಗಿದೆ.
ಕಾನೂನು ಹೋರಾಟದಲ್ಲಿ ಸೋತಿರುವ ಕೇರಳ ಸರ್ಕಾರ, ಕೇಂದ್ರ ಸರ್ಕಾರದ ಮೂಲಕ ಕರ್ನಾಟಕದ ಮೇಲೆ ಒತ್ತಡ ಹೇರುವಲ್ಲಿಯೂ ವಿಫಲವಾಗಿದೆ. ಹಾಗಾಗಿ, ಭಾಷೆ ಎನ್ನುವ ಅಸ್ಮಿತೆಯನ್ನು ಬಳಸಿಕೊಂಡು ಕಾರ್ಯಸಾಧನೆಗೆ ಯತ್ನಿಸುತ್ತಿದೆ. ಹಾಗಾಗಿಯೇ, ಗಡಿ ಗ್ರಾಮಗಳ ಹೆಸರು ಬದಲಾವಣೆ ಸುದ್ದಿ ಹಬ್ಬಿಸಿ ಕರ್ನಾಟಕ ಸರ್ಕಾರವನ್ನು ತನ್ನತ್ತ ಸೆಳೆದು ಮಾತುಕತೆಗೆ ವೇದಿಕೆ ಸಿದ್ದಪಡಿಸಿಕೊಳ್ಳುತ್ತಿದೆ. ಬಂಡೀಪುರದಲ್ಲಿನ ರಾತ್ರಿ ಸಂಚಾರ ನಿಷೇಧ ತೆರವು ಮಾಡದೇ ಇದ್ದರೂ ಅಲ್ಪ ಪ್ರಮಾಣದ ವಿನಾಯಿತಿ ಇಲ್ಲವೆ ಸಡಿಲಿಕೆ ಪಡೆಯುವ ಪ್ರಯತ್ನ ನಡೆಸುವ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.