ಬೆಂಗಳೂರು : ರಾಜ್ಯದಲ್ಲಿ ಖಾತೆಯಿಲ್ಲದೇ ಇರುವ ಶಾಲೆಗಳ ಸಂಖ್ಯೆ ಹೆಚ್ಚಿರುವುದು ಆಶ್ಚರ್ಯ ಮೂಡಿಸಿದೆ. ಸರ್ಕಾರಿ ಶಾಲಾ ಜಮೀನಿನ ಮೇಲೆ ಯಾರೂ ಕಣ್ಣು ಹಾಕದಂತೆ ನೋಡಿಕೊಳ್ಳಿ ಎಂದು ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಕಂದಾಯ ಸಚಿವ ಆರ್. ಅಶೋಕ್ ಸಲಹೆ ನೀಡಿದರು.
ನಗರದ ಕೆಜಿ ರಸ್ತೆಯ ಶಿಕ್ಷಕರ ಸದನದಲ್ಲಿ ಜಿಲ್ಲಾ ಪಂಚಾಯತ್, ಶಿಕ್ಷಣ ಇಲಾಖೆ, ಕಂದಾಯ ಇಲಾಖೆ ಸಹಯೋಗದಲ್ಲಿ ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳ ಭೂ ದಾಖಲಾತಿಗಳನ್ನು ಆಯಾ ಎಸ್ಡಿಎಮ್ಸಿ ಹಾಗೂ ಮುಖ್ಯ ಶಿಕ್ಷಕರಿಗೆ ವಿತರಿಸಲಾಯಿತು. ಈ ವೇಳೆ ಸಚಿವ ಬಿ ಸಿ ನಾಗೇಶ್, ನರಸಿಂಹಮೂರ್ತಿ, ಜಿಲ್ಲಾಧಿಕಾರಿ ಮಂಜುನಾಥ್, ಉಪವಿಭಾಗಾಧಿಕಾರಿಗಳಾದ ಶಿವಣ್ಣ, ರಘುನಂದನ್ ಇತರರು ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಸಚಿವ ಆರ್ ಅಶೋಕ್, ನಗರದ 552 ಶಾಲೆಗಳಿಗೆ (ಅಂದರೆ ಸುಮಾರು 60%) ದಾಖಲೆಗಳೇ ಇರಲಿಲ್ಲ. ಸರಿಯಾದ ದಾಖಲೆ ಇಲ್ಲದಿದ್ದರೆ ಒತ್ತುವರಿ ಮಾಡುವವರಿಗೆ ಅನುಕೂಲ. ಶಿಕ್ಷಣ ಇಲಾಖೆಯ ಜಮೀನು ರಕ್ಷಣೆ ಆಗಲೇಬೇಕು. ಈ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ. ಹಿಂದೆ ಹಲವಾರು ದಾನಿಗಳು ಶಾಲೆ ಸ್ಥಾಪನೆಗೆ ಕೊಟ್ಟ ಜಮೀನು ಶಾಲೆಗಾಗಿಯೇ ಇರಬೇಕು.
ಹಾಗಾಗಿ, ಎಲ್ಲ ದಾಖಲೆಯನ್ನು ಪಕ್ಕಾ ಮಾಡಿ ಕೊಡುತ್ತಿದ್ದೇವೆ. ಈಗಾಗಲೇ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ರಾಜ್ಯಾದ್ಯಂತ ಈ ಕಾರ್ಯಕ್ರಮ ನಡೆಯಬೇಕು. ಶಿಕ್ಷಣ ಇಲಾಖೆಯು ಸಹ ಇದರ ಬಗ್ಗೆ ಚಿಂತನೆ ನಡೆಸಲಿ. ಸರ್ಕಾರಿ ಶಾಲೆಗಳ ಭೂಮಿ ರಕ್ಷಣೆಗೆ ಕಂದಾಯ ಇಲಾಖೆ ಮತ್ತು ಸರ್ಕಾರ ಬದ್ಧವಾಗಿದೆ. ಸ್ಮಶಾನ, ಶಾಲೆ, ಅಂಗನವಾಡಿ ಸಲುವಾಗಿ ಭೂಮಿಯನ್ನು ಮೀಸಲಿಡಿ. ಮುಂದೆ ಇವುಗಳಿಗೆ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕಾಗಿ ನಾನು ಈಗಾಗಲೇ ಎಲ್ಲ ಶಾಸಕರಿಗೆ ಪತ್ರ ಬರೆದಿದ್ದೇನೆ ಎಂದರು.
ಇದನ್ನೂ ಓದಿ: ಮಂತ್ರಮಾಂಗಲ್ಯಕ್ಕೆ ಸಾಕ್ಷಿಯಾದ ಮಂಗಳೂರು.. ನಾಡಗೀತೆ, ಕನ್ನಡದಲ್ಲಿ ಪ್ರತಿಜ್ಞೆಯೊಂದಿಗೆ ಹೊಸ ಜೀವನ ಆರಂಭ
ಮುಖ್ಯ ಶಿಕ್ಷಕರು ಶಾಲೆಯ ಮೂಲಸೌಕರ್ಯಗಳ ಪರೀಕ್ಷೆ ಮಾಡಬೇಕು. ಜಮೀನಿನ ದಾಖಲೆಗಳನ್ನು ಪರಿಶೀಲನೆ ಮಾಡಿ ಉಪವಿಭಾಗಾಧಿಕಾರಿಗಳಿಗೆ ತಿಳಿಸಿ ಎಂದು ಮನವಿ ಮಾಡುತ್ತೇನೆ. ಸರ್ಕಾರಿ ಶಾಲಾ-ಕಾಲೇಜುಗಳ ಆಸ್ತಿಗಳನ್ನು ಸಂರಕ್ಷಣೆ ಮಾಡಲು ಕಂದಾಯ ಇಲಾಖೆ ಪಣ ತೊಟ್ಟಿದೆ. ಇದಕ್ಕಾಗಿ ವಿಶೇಷ ಅಭಿಯಾನ ಹಮ್ಮಿಕೊಂಡಿದೆ.
ಅದರಂತೆ, ಕರ್ನಾಟಕದ ಎಲ್ಲೆಡೆ ಸರ್ಕಾರಿ ಶಾಲೆಗಳ ಆಸ್ತಿ ದಾಖಲೆಯ ಸಮೀಕ್ಷೆ ನಡೆಸಿ, ಅದರ ಮೂಲ ದಾಖಲಾತಿಗಳನ್ನು ಸೃಷ್ಟಿಸಿ, ಅದನ್ನು ಶಿಕ್ಷಣ ಇಲಾಖೆಗೆ ನೀಡಲಾಗುವುದು. ಒಂದು ವೇಳೆ ಯಾರಾದರೂ ಒತ್ತುವರಿ ಮಾಡಿಕೊಂಡಿದ್ದರೆ, ಅದನ್ನು ವಾಪಸ್ ಪಡೆಯುವ ಪ್ರಕ್ರಿಯೆ ನಡೆಯಲಿದೆ ಎಂದರು.
ಬಳಿಕ ಮಾತಾನಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸದ್ಯ ಪರಿಸ್ಥಿತಿ ಹೇಗಿದೆ ಅಂದರೆ ಬೇರೆ ಆಸ್ತಿಗಳನ್ನು ದೋಚಬೇಕು ಎನ್ನುವ ಮನೋಭಾವ ಉಂಟಾಗಿದೆ. ಆದರೆ, ಇತ್ತೀಚೆಗೆ ಯಾವುದೇ ಪ್ರಾಪರ್ಟಿ ಸಿಕ್ಕಿದ್ದರೂ ನಂದೇ ಅಂತಾ ಮಾಡಿಕೊಳ್ಳುವ ಮನಸ್ಥಿತಿ ಇದೆ. ಹಾಗಾಗಿ, ಇಂತಹ ಸಂದರ್ಭದಲ್ಲಿ ಸರ್ಕಾರಿ ಆಸ್ತಿ ಉಳಿಸುವುದು ಅನಿವಾರ್ಯವಾಗಿದೆ. ಸದ್ಯಕ್ಕೆ ಬೆಂಗಳೂರು ವ್ಯಾಪ್ತಿಯಲ್ಲಿ ದಾಖಲೆ ಹಸ್ತಾಂತರ ಮಾಡಲಿದ್ದು, ಈ ಕಾರ್ಯ ರಾಜ್ಯಾದ್ಯಂತ ನಡೆಯಲಿದೆ ಎಂದರು.