ಬೆಂಗಳೂರು: ಅಕ್ಟೋಬರ್ 28 ಮತ್ತು 29ರಂದು ಸಿ ಗ್ರೂಪ್ನ ಹುದ್ದೆ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷೆ ನಡೆಸುತ್ತಿದ್ದು, ಈ ಪರೀಕ್ಷೆಗೆ ಹಾಜರಾಗಲು ಪರೀಕ್ಷಾರ್ಥಿಗಳಿಗೆ ವಸ್ತ್ರ ಸಂಹಿತೆ ವಿಧಿಸಲಾಗಿದೆ. ಇದು ಕಾನೂನು ಬಾಹಿರವಾಗಿದೆ. ಪರೀಕ್ಷೆಗೆ ಸೂಚಿಸಿರುವ ವಸ್ತ್ರ ಸಂಹಿತೆಯನ್ನು ಹಿಂಪಡೆಯಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಆಗ್ರಹಿಸಿದರು.
ನಗರದ ಪಕ್ಷದ ರಾಜ್ಯ ಕಚೇರಿಯಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬುರ್ಖಾ ಹಾಕಿ ಬರುವ ಮುಸ್ಲಿಂ ಹೆಣ್ಣು ಮಕ್ಕಳಿಗೆ ಒಂದೂವರೆ ಗಂಟೆ ಮುಂಚೆ ಬರುವಂತೆ ಹೇಳಿದ್ದಾರೆ. ದೂರದ ಊರಿನಿಂದ ಬರುವವರು ತಡವಾಗಿ ಬಂದರೆ ಅವರ ಕತೆ ಏನು? ಈ ನಿಯಮಗಳನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದರು.
ಹುಲಿ ಉಗುರು ಪೆಂಡೆಂಟ್ ವಿವಾದ: ಇದೇ ವೇಳೆ ಹುಲಿ ಉಗುರು ವಿವಾದದ ಬಗ್ಗೆ ಮಾತನಾಡಿದ ಅವರು, ಕಾನೂನು ಬಾಹಿರವಾಗಿ ಹುಲಿ ಉಗುರು ಇಟ್ಟುಕೊಂಡಿರುವವರನ್ನೆಲ್ಲಾ ಬಂಧಿಸಬೇಕು. ಎಲ್ಲರಿಗೂ ಒಂದೇ ಕಾನೂನು ಇರಬೇಕು. ಅಧಿಕಾರಿಗಳ ಪರಿಶೀಲನೆ ವೇಳೆ ನೈಜತೆ ಕಂಡುಬಂದಲ್ಲಿ ನಟರಾದ ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ಕುಮಾರಸ್ವಾಮಿ ಅವರು 110 ಹಳ್ಳಿಗಳನ್ನು ಬಿಬಿಎಂಪಿ ವಲಯಕ್ಕೆ ಸೇರಿಸಿದರು. ಹೆಚ್ ಡಿ ಕುಮಾರಸ್ವಾಮಿ ಮತ್ತು ಡಿ ಕೆ ಶಿವಕುಮಾರ್ ಅವರಿಗೆ ರಿಯಲ್ ಸ್ಟೇಟ್ ಮಾತ್ರ ಗೊತ್ತು, ಅಭಿವೃದ್ಧಿ ಗೊತ್ತಿಲ್ಲ. ಅಂದು ಬಿಬಿಎಂಪಿ ವಲಯಕ್ಕೆ ಸೇರಿದ 110 ಹಳ್ಳಿಗಳಿಗೆ ಇಂದಿಗೂ ಸರಿಯಾದ ನೀರಿನ ವ್ಯವಸ್ಥೆ ಮಾಡಿಲ್ಲ ಎಂದು ಮೋಹನ್ ದಾಸರಿ ಆಕ್ರೋಶ ವ್ಯಕ್ತಪಡಿಸಿದರು.
ವಿಚಿತ್ರ ನಿಯಮಗಳನ್ನು ಹಿಂಪಡೆಯಿರಿ: ಆಮ್ ಆದ್ಮಿ ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ಲೋಹಿತ್ ಹನುಮಾಪುರ ಮಾತನಾಡಿ, 700 ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆಸಲಾಗುತ್ತಿದ್ದು, ಸುಮಾರು 2.5 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಪರೀಕ್ಷಾರ್ಥಿಗಳಿಗೆ ವಿಚಿತ್ರ ನಿಮಯಗಳನ್ನು ಮಾಡಲಾಗಿದೆ. ಅದರಲ್ಲಿ ಮಹಿಳೆಯರಿಗೆ ತಾಳಿ ಸೇರಿ ಎಲ್ಲಾ ಆಭರಣಗಳನ್ನು ಬಿಚ್ಚಿಟ್ಟು ಬರುವಂತೆ ಸೂಚಿಸಿದೆ. ಪೂರ್ತಿ ತೋಳಿನ ಬಟ್ಟೆ ಧರಿಸಬಾರದು, ಜೀನ್ಸ್ ಧರಿಸಬಾರದು ಎಂದಿದ್ದು, ಅರ್ಧ ತೋಳಿನ ಬಟ್ಟೆ ಧರಿಸಲು ಸೂಚಿಸಿದ್ದಾರೆ. ಇದು ನಿಯಮ ಬಾಹಿರ ಎಂದು ಹೇಳಿದರು.
ನವೆಂಬರ್ 5 ರಂದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಪೊಲೀಸ್ ಪೇದೆ ಹುದ್ದೆ ನೇಮಕಾತಿಗೆ ಪರೀಕ್ಷೆ ನಡೆಯುತ್ತಿದೆ. ಅದೇ ದಿನ ಕೇಂದ್ರ ಸರ್ಕಾರ ಬ್ಯಾಂಕಿಂಗ್ ಪರೀಕ್ಷೆ ಕೂಡ ನಡೆಸುತ್ತಿದೆ. ಅದರ ಜೊತೆ ಮತ್ತೊಂದು ಪರೀಕ್ಷೆ ಕೂಡ ಅಂದೇ ನಡೆಯಲಿದೆ. ಇದರಿಂದ ಎರಡು ಮೂರು ಪರೀಕ್ಷೆ ಬರೆಯುವವರಿಗೆ ತೊಂದರೆಯಾಗುತ್ತದೆ, ಇದು ಕೇಂದ್ರ ಮತ್ತು ರಾಜ್ಯದ ನಡುವೆ ಹೊಂದಾಣಿಕೆ ಇಲ್ಲ ಎನ್ನುವುದನ್ನು ಸೂಚಿಸುತ್ತದೆ ಎಂದರು.
ಪಕ್ಷದ ಕಾರ್ಯದರ್ಶಿ, ಉಪಾಧ್ಯಕ್ಷರ ನೇಮಕ: ಆಮ್ ಆದ್ಮಿ ಪಕ್ಷದ ಸಂಘಟನೆ ಕ್ರಮದ ಭಾಗವಾಗಿ ಹಲವು ನಾಯಕರಿಗೆ ವಿವಿಧ ಜವಾಬ್ದಾರಿಗಳನ್ನು ನೀಡಲಾಗಿದೆ. ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿದ್ದ ಮೋಹನ್ ದಾಸರಿ ಅವರನ್ನು ರಾಜ್ಯ ಸಂಘಟನಾ ಕಾರ್ಯದರ್ಶಿಯನ್ನಾಗಿ ಮಾಡಲಾಗಿದೆ. ರಾಜ್ಯ ಉಪಾಧ್ಯಕ್ಷರನ್ನಾಗಿ ವಿಜಯ್ ಶರ್ಮಾ ಮತ್ತು ಶಾಂತಲಾ ದಾಮ್ಲೆ ಅವರನ್ನು ನೇಮಿಸಲಾಗಿದೆ. ಮಾಲವಿಕ ಗುಬ್ಬಿವಾಣಿ ಅವರನ್ನು ರಾಜ್ಯ ಕಾರ್ಯದರ್ಶಿಯನ್ನಾಗಿ ಮಾಡಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾಹಿತಿ ನೀಡಿದ್ದಾರೆ.
ರಾಜ್ಯ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರಾಗಿ ನವೀನಚಂದ್ರ ಪೂಜಾರಿ, ರಾಜ್ಯ ಯುವ ಘಟಕದ ಅಧ್ಯಕ್ಷರಾಗಿ ಲೋಹಿತ್ ಹನುಮಾಪುರ, ಯುವ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ಗಿರೀಶ್ ನಾಯ್ಡು, ರಾಜ್ಯ ಕಾಫಿ ಬೆಳೆಗಾರರ ಘಟಕದ ಅಧ್ಯಕ್ಷರನ್ನಾಗಿ ಹೇಮಂತ್ ಕುಮಾರ್, ರಾಜ್ಯ ಆಟೋ ಚಾಲಕರ ಘಟಕದ ಅಧ್ಯಕ್ಷರಾಗಿ ಆಯುಬ್ ಖಾನ್, ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿಯಾಗಿ ಗೀತಾ ಎಂ ಯಾಡಗಿ, ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ರಾಜೇಶ್ವರಿ ಮತ್ತು ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿಯನ್ನಾಗಿ ಜ್ಯೋತಿ ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ