ಬೆಂಗಳೂರು: ಪ್ರತಿಯೊಬ್ಬ ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಊಟ, ಬಟ್ಟೆಗಳು ಅತ್ಯವಶ್ಯಕ. ಆದರೆ, ಕೆಲವೊಮ್ಮೆ ಅದೆಷ್ಟೋ ಮಂದಿಗೆ ಮೂರು ಹೊತ್ತಿನ ಊಟ ಹಾಗೂ ತೊಡಲು ಬಟ್ಟೆ ಸಂಪಾದಿಸುವುದು ಕೆಲವೊಮ್ಮೆ ಕಷ್ಟಕರವಾಗುತ್ತದೆ. ಇಂತಹ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜನರಿಂದ ಜನರಿಗಾಗಿ ಕರುಣೆಯ ಕುಟೀರ ನಿರ್ಮಾಣವಾಗಿದೆ.
ಯಲಹಂಕದ ಎನ್ಇಎಸ್ ಸರ್ಕಲ್ನಲ್ಲಿ ತಲೆಯೆತ್ತಿರುವ ಕರುಣೆಯ ಕುಟೀರ ಹಸಿದವರ ಹೊಟ್ಟೆ ತುಂಬಿಸುವುದರ ಜೊತೆಗೆ ಬಟ್ಟೆ ಹಾಗೂ ಅಗತ್ಯ ವಸ್ತುಗಳನ್ನ ನೀಡಲು ಸಿದ್ದವಾಗಿದ್ದು, ಫೆ.3ರಂದು ಸಂಜೆ 5 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ.
ಸುಮಾರು 10 ಅಡಿ ಅಗಲ ಹಾಗೂ 10 ಅಡಿ ಉದ್ದ ವಿಸ್ತೀರ್ಣ ಹೊಂದಿರುವ ಕರುಣೆಯ ಕುಟೀರ 18 ಸುಸಜ್ಜಿತವಾದ ಬಾಕ್ಸ್ ಗಳನ್ನು ಹೊಂದಿದೆ. ಇಲ್ಲಿ ನಿಮ್ಮ ಮನೆಗಳಲ್ಲಿ ಉಳಿದ ಊಟ, ಬಳಸದ ಬಟ್ಟೆ, ಚಪ್ಪಲಿ, ತಟ್ಟೆ, ಲೋಟ ಸೇರಿದಂತೆ ಇನ್ನಿತರ ಉಪಯೋಗಿಸದ ವಸ್ತುಗಳನ್ನು ತಂದಿಡಬಹುದಾಗಿದೆ. ಇನ್ನು ರಾತ್ರಿ ವೇಳೆಯು ಸಹ ಕರುಣೆ ಕುಟೀರ ಕಂಗೊಂಳಿಸುವಂತಿರಲಿ ಎಂಬ ಉದ್ದೇಶದಿಂದ ಸುಸಜ್ಜಿತವಾದ ಎಲ್ಇಡಿ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಲಯನ್ಸ್ ಕ್ಲಬ್ ಇದರ ನಿರ್ವಹಣೆಯನ್ನು ವಹಿಸಿಕೊಂಡಿದೆ ಇದಕ್ಕಾಗಿ ಒಂದು ತಂಡವನ್ನು ನೇಮಕ ಮಾಡಿದೆ.
ಕೆಲ ಜನರು ತಮ್ಮ ತಮ್ಮ ಮನೆಗಳಲ್ಲಿ ಉಪಯೋಗಿಸಿದ ಉತ್ತಮ ವಸ್ತುಗಳನ್ನು ಮರು ಬಳಕೆ ಮಾಡುವುದಿಲ್ಲ ಅಂತಹ ವಸ್ತುಗಳನ್ನು ಈ ಕಾಪಾಟಿನಲ್ಲಿ ತಂದಿಟ್ಟರೆ ಅವುಗಳು ಮತ್ತೊಬ್ಬರ ಉಪಯೋಗಕ್ಕೆ ಬರುತ್ತವೆ. ಹೀಗಾಗಿ, ನಿಮ್ಮ ಮನೆಗಳಲ್ಲಿ ಮರು ಬಳಕೆ ಮಾಡದ ಉತ್ತಮ ವಸ್ತುಗಳಿದ್ದರೆ ತಂದು ಇಡಿ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಮನವಿ ಮಾಡಿದ್ದಾರೆ.
ಸಮಾಜ ಸೇವಕ ಅ.ಬ.ಶಿವಕುಮಾರ್ ಮಾತನಾಡಿ, ಬಡ ಜನರಿಗೆ ಉಪಯೋಗವಾಗಲಿ ಎಂಬ ನಿಟ್ಟಿನಲ್ಲಿ ವಿಶೇಷ ಕಲ್ಪನೆಯೊಂದಿಗೆ ಈ ಕರುಣೆ ಕುಟೀರ ನಿರ್ಮಿಸಲಾಗಿದೆ. ಕೆಲವರಿಗೆ ಬಳಸಿದ ವಸ್ತುಗಳನ್ನು ಏನು ಮಾಡಬೇಕೆಂದು ತಿಳಿಯುವುದಿಲ್ಲ. ಅಂತವರು ತಮ್ಮ ವಸ್ತುಗಳನ್ನು ಇಲ್ಲಿ ತಂದಿಟ್ಟರೆ ಅಗತ್ಯ ಇರುವವರಿಗೆ ವಿತರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಈ ಕರುಣೆ ಕುಟೀರವನ್ನು ಫೆ.3 ರಂದು ಸಂಜೆ 5ಗಂಟೆಗೆ ಶಾಸಕ ಎಸ್.ಆರ್.ವಿಶ್ವನಾಥ್ ಲೋಕಾರ್ಪಣೆ ಗೊಳಿಸಲಿದ್ದಾರೆ. ಅಂದು ವಿಶೇಷವಾಗಿ 25ಜನ ಬಿಬಿಎಂಪಿ ಪೌರ ಕಾರ್ಮಿಕರಿಗೆ ಹೊಸ ರೇಷ್ಮೆ ಸೀರೆ, ನೂರು ಜನ ಬಡ ಮಹಿಳೆಯರಿಗೆ ಸೀರೆ ಸೇರಿದಂತೆ ವಿದ್ಯಾರ್ಥಿ ನಿಲಯಕ್ಕೆ 25 ಹಾಸಿಗೆ ನೀಡುವ ಮೂಲಕ ವಿನೂತನವಾಗಿ ಉದ್ಘಾಟನೆ ನಡೆಯಲಿದೆ.