ಬೆಂಗಳೂರು : ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ನ ಎಸಿಎಫ್ಎಫ್ ಯೋಜನೆ ರಾಜ್ಯದ ಕೈತಪ್ಪಿದ ಕುರಿತು ಕೂಲಂಕಷ ತನಿಖೆ ನಡೆಸುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ವಿಧಾನ ಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರ್ನಾಟಕಕ್ಕೆ ಎಸಿಎಫ್ಎಫ್ ಕೇಂದ್ರ ಮಂಜೂರಾಗಿತ್ತು. ಒಟ್ಟು 90.50 ಕೋಟಿ ರೂ. ಮೊತ್ತದ ಟೆಂಡರ್ ಆಗಿತ್ತು. ವರ್ಕ್ ಆರ್ಡರ್ ಕೂಡ ಕೊಡಲಾಗಿತ್ತು. ಆದರೆ, ಹಿಂದಿನ ಸಮ್ಮಿಶ್ರ ಸರ್ಕಾರ ಇದ್ದಾಗ ಯೋಜನೆಯನ್ನು ಅನುಷ್ಠಾನಕ್ಕೆ ತರಲಿಲ್ಲ. ಗಡುವಿನ ಮಿತಿ ಮೀರಿದ ಕಾರಣ 2019ರ ಮಾರ್ಚ್ನಲ್ಲಿ ಕೇಂದ್ರ ಸರ್ಕಾರ ಯೋಜನೆಯನ್ನು ರದ್ದು ಮಾಡಿ ಹಣ ವಾಪಸ್ ಪಡೆಯಿತು. ಕಾಲ ಮಿತಿಯಲ್ಲಿ ಕೆಲಸ ಆರಂಭಿಸದೆ ಇದ್ದಿದ್ದಕ್ಕೆ ಹಣ ವಾಪಸ್ ಪಡೆಯಲಾಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.
ಈ ವೇಳೆ ಮಧ್ಯಪ್ರವೇಶಿಸಿದ ಮರಿತಿಬ್ಬೇಗೌಡ, ಯಾಕೆ ಅನುಷ್ಠಾನ ಆಗಲಿಲ್ಲ. ಹಣ ವಾಪಸ್ ಹೋಗಲು ಯಾರು ಕಾರಣ, ತಪ್ಪಿತಸ್ಥರು ಯಾರು ಎನ್ನುವ ಕುರಿತು ತನಿಖೆಗೆ ಆಗ್ರಹಿಸಿದರು. ಇದಕ್ಕೆ ನಿರಾಕರಿಸಿದ ಸಚಿವ ಜಗದೀಶ್ ಶೆಟ್ಟರ್, ಸಮರ್ಪಕ ಉತ್ತರ ನೀಡಲಾಗಿದೆ ಎಂದರು. ಈ ವೇಳೆ ಪ್ರತಿಪಕ್ಷ ಮತ್ತು ಆಡಳಿತ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ತನಿಖೆಗೆ ಪ್ರತಿಪಕ್ಷದ ಸದಸ್ಯರು ಪಟ್ಟು ಹಿಡಿದರು. ಪ್ರತಿಪಕ್ಷ ಸದಸ್ಯರ ಒತ್ತಡಕ್ಕೆ ಮಣಿದ ಸಚಿವ ಜಗದೀಶ್ ಶೆಟ್ಟರ್, ಸಂಬಂಧಪಟ್ಟ ಕಡತ ತರಿಸಿ ಪರಿಶೀಲನೆ ನಡೆಸಿ ಕೂಲಂಕಷವಾಗಿ ತನಿಖೆ ನಡೆಸುವ ಭರವಸೆ ನೀಡಿ ಗದ್ದಲಕ್ಕೆ ತೆರೆ ಎಳೆದರು.
ನಂತರ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ, ಮೈಸೂರು ಲ್ಯಾಂಪ್ಸ್ಗೆ ಸೇರಿದ 22 ಎಕರೆ ಭೂಮಿ ಯಶವಂತಪುರ ಬಳಿ ಇದ್ದು, ಅದನ್ನು ಆಸ್ಪತ್ರೆ ನಿರ್ಮಿಸಲು ಅಥವಾ ಇತರ ಉದ್ದೇಶಕ್ಕೆ ಬಳಸಿಕೊಳ್ಳಲು ಸರ್ಕಾರ ತನ್ನ ಸುಪರ್ದಿಗೆ ಪಡೆಯುವ ಕುರಿತು ಕೇಳಿದ ಪ್ರಶ್ನೆಗೆ ಸಚಿವ ಜಗದೀಶ್ ಶೆಟ್ಟರ್ ಉತ್ತರಿಸಿದರು. ಮೈಸೂರು ಲ್ಯಾಂಪ್ಸ್ ಮುಚ್ಚಲಾಗಿದೆ. ಸರ್ಕಾರದ ಅಂಗ ಸಂಸ್ಥೆಯಾದ ಮೈಸೂರು ಮಿನರಲ್ಸ್ಗೆ ಭೂಮಿ ಹಸ್ತಾಂತರ ಮಾಡಲಾಗುತ್ತದೆ.
ಇದು ಬೆಲೆಯುಳ್ಳ ಭೂಮಿ, ದುರುಪಯೋಗ ಆಗದ ರೀತಿ ಕ್ರಮಕೈಗೊಳ್ಳಲಾಗುತ್ತದೆ. ಕೆಲ ಪ್ರಕರಣ ಕೋರ್ಟ್ನಲ್ಲಿವೆ. ಹಾಗಾಗಿ, ಭೂಮಿಯನ್ನು ಮತ್ತೊಂದು ಸಾರ್ವಜನಿಕ ಸಂಸ್ಥೆಗೆ ಹಸ್ತಾಂತರ ಮಾಡಿಕೊಳ್ಳಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್, ಮೈಸೂರು ಮಿನರಲ್ಸ್ಗೆ ಮೈಸೂರು ಲ್ಯಾಂಪ್ಸ್ ಭೂಮಿ ಕೊಡುವುದು ಬೇಡ. ಸರ್ಕಾರ ತನ್ನ ಸುಪರ್ದಿಗೆ ಪಡೆಯಬೇಕು. ಈಗ ಹಸ್ತಾಂತರ ಮಾಡಿ ನಂತರ ಮಾರಾಟ ಮಾಡುವ ಸಾಧ್ಯತೆ ಇದೆ. ಕೋರ್ಟ್ನಲ್ಲಿ ಭೂಮಿ ವ್ಯಾಜ್ಯ ಇಲ್ಲ. ಕಾರ್ಮಿಕರ ವ್ಯಾಜ್ಯ ಇದೆ. ಬೇರೆಯವರಿಗೆ ಮಾರಾಟ ಮಾಡುವ ದೊಡ್ಡ ಹುನ್ನಾರ ಈ ಭೂಮಿ ಹಸ್ತಾಂತರದ ಹಿಂದೆ ಇದೆ. ಒಟ್ಟು 22 ಎಕರೆ ಜಮೀನು ನೇರವಾಗಿ ಸರ್ಕಾರ ತನ್ನ ವಶಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.
ಈ ವೇಳೆ ಬಿಜೆಪಿ ಸದಸ್ಯೆ ತೇಜಸ್ವಿ ಗೌಡ, ದೆಹಲಿಯ ಏಮ್ಸ್ ಮಾದರಿಯ ಆಸ್ಪತ್ರೆಯನ್ನು ಆ ಜಾಗದಲ್ಲಿ ನಿರ್ಮಿಸಬಹುದು ಎಂದು ಸಲಹೆ ನೀಡಿದರು. ಇದಕ್ಕೆ ಪ್ರತಿಪಕ್ಷದ ಸದಸ್ಯರು ದನಿಗೂಡಿಸಿದರು. ಅಂತಿಮವಾಗಿ ಸಚಿವ ಜಗದೀಶ್ ಶೆಟ್ಟರ್, ಸದಸ್ಯರ ಅಭಿಪ್ರಾಯದಲ್ಲಿ ಷಡ್ಯಂತ್ರದ ಆತಂಕ ವ್ಯಕ್ತವಾಗಿದೆ. ಆದರೆ, ಯಾವ ಷಡ್ಯಂತ್ರ ಇಲ್ಲ. ಸಾರ್ವಜನಿಕ ಕಂಪನಿ, ಮತ್ತೊಂದು ಕಂಪನಿ ಜೊತೆ ವಿಲೀನವಷ್ಟೇ.. ಇದು ಸಂಪುಟದ ನಿರ್ಣಯ, ನಾನೊಬ್ಬನೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಸಿಎಂ ಜೊತೆ ಚರ್ಚೆ ನಡೆಸಲಾಗುತ್ತದೆ ಎಂದರು.