ಬೆಂಗಳೂರು : ರಾಜ್ಯ ವಕ್ಫ್ ಮಂಡಳಿಗೆ ಕರ್ನಾಟಕ ವಕೀಲರ ಪರಿಷತ್ತಿನ ಮಾಜಿ ಮುಸ್ಲಿಂ ಸದಸ್ಯರ ಕೋಟಾಗೆ ಚುನಾವಣೆ ನಡೆಸಲು ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಆರೀಫ್ ಜಮೀಲ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠದ ವಿಚಾರಣೆ ನಡೆಸಿತು. ಕೆಲ ಕಾಲ ವಾದ - ಪ್ರತಿವಾದ ಆಲಿಸಿದ ಪೀಠ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಕಾರ್ಯದರ್ಶಿ, ಚುನಾವಣಾ ನೋಂದಣಾಧಿಕಾರಿಯೂ ಆಗಿರುವ ಬೆಂಗಳೂರು ವಲಯದ ಪ್ರಾದೇಶಿಕ ಆಯುಕ್ತರು, ರಾಜ್ಯ ವಕ್ಫ್ ಮಂಡಳಿಯ ಸಿಇಒಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಡಿ.23ಕ್ಕೆ ಮುಂದೂಡಿತು.
ಅಲ್ಲದೇ, ಸರ್ಕಾರ ಹೊರಡಿಸಿರುವ ಅಧಿಸೂಚನೆಯಂತೆ ರಾಜ್ಯ ವಕ್ಫ್ ಮಂಡಳಿಗೆ ವಕೀಲರ ಪರಿಷತ್ತಿನ ಮುಸ್ಲಿಂ ಸದಸ್ಯರ ಕೋಟಾಗೆ ಅಥವಾ ಮುತವಲ್ಲಿ ಕೋಟಾಗೆ ಚುನಾವಣೆ ನಡೆದರೆ, ಅದು ಹೈಕೋರ್ಟ್ ನೀಡುವ ಅಂತಿಮ ತೀರ್ಮಾನಕ್ಕೆ ಒಳಪಟ್ಟಿರುತ್ತದೆ ಎಂದು ಪೀಠ ಸ್ಪಷ್ಟಪಡಿಸಿತು.
ಇದನ್ನೂ ಓದಿ: ಜಾತಿ-ಮತದ ಹೆಸರಲ್ಲಿ ಇಷ್ಟಪಟ್ಟ ವ್ಯಕ್ತಿಯನ್ನು ಮದುವೆಯಾಗುವ ಹಕ್ಕು ನಿರ್ಬಂಧಿಸಲಾಗದು: ಹೈಕೋರ್ಟ್
ರಾಜ್ಯ ವಕೀಲರ ಪರಿಷತ್ತಿನಲ್ಲಿ ಚುನಾಯಿತ ಮುಸ್ಲಿಂ ಸದಸ್ಯರು ಇಲ್ಲದಿದ್ದರೆ ಮಾಜಿ ಸದಸ್ಯರನ್ನು ಪರಿಗಣಿಸಬಹುದು. ಆದರೆ, ಹಾಲಿ ವಕೀಲರ ಪರಿಷತ್ತಿನಲ್ಲಿ ಒಬ್ಬರು ಮುಸ್ಲಿಂ ಸದಸ್ಯರಿದ್ದು, ನಿಯಮದಂತೆ ಅವರು ವಕ್ಫ್ ಮಂಡಳಿಗೆ ಚುನಾಯಿತರಾಗಿದ್ದಾರೆ. ಹಾಗಾಗಿ ವಕೀಲರ ಪರಿಷತ್ತಿನ ಸದಸ್ಯರ ಆಯ್ಕೆಗೆ ಚುನಾವಣೆ ನಡೆಸಲು ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.