ಬೆಂಗಳೂರು: ಮಹಾಮಾರಿ ಕೊರೊನಾ ಆತಂಕ ರಾಜ್ಯದಲ್ಲಿ ಮುಂದುವರಿದಿದೆ. ಹೀಗಾಗಿ ಮೇ 17ರವರೆಗೆ ರಾಜ್ಯದಲ್ಲಿ ಲಾಕ್ಡೌನ್ ವಿಸ್ತರಣೆ ಮಾಡಲಾಗಿದೆ. ಇದರ ಮಧ್ಯೆ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿರುವ ಸುರೇಶ್ ಕುಮಾರ್ ಸುಳ್ಳು ವದಂತಿಗಳಿಗೆ ಕಿವಿ ಕೊಡಬಾರದು ಎಂದು ವಿನಂತಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ತಕ್ಷಣವೇ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವ ಯಾವುದೇ ಯೋಚನೆ ಇಲ್ಲ. ಹೀಗಾಗಿ ವಿದ್ಯಾರ್ಥಿಗಳು ಗಾಬರಿಯಾಗಬಾರದು ಎಂದಿರುವ ಅವರು, ಈಗಾಗಲೇ ಹಮ್ಮಿಕೊಂಡಿರುವ ಪುನರ್ ಮನನ ಕಾರ್ಯಕ್ರಮ ಮೇ 29ರವರೆಗೆ ಕನ್ನಡ ಮಾಧ್ಯಮದವರಿಗೆ ಹಾಗೂ ಜೂನ್ ಮೊದಲ ವಾರದಲ್ಲಿ ಆಂಗ್ಲ ಮಾಧ್ಯಮ ಮಕ್ಕಳಿಗೆ ಮುಕ್ತಾಯಗೊಳ್ಳಲಿದೆ. ಇದು ಮುಗಿದ ನಂತರ ಅಂದರೆ ಜೂನ್ ಮೂರನೇ ವಾರದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ಚಿಂತನೆ ನಡೆದಿದೆ ಎಂದಿದ್ದಾರೆ.
ವಾತಾವರಣ ಸಂಪೂರ್ಣವಾಗಿ ತಿಳಿಯಾದ ಬಳಿಕ ಎಸ್ಎಸ್ಎಲ್ಸಿ ಪರೀಕ್ಷೆ ದಿನಾಂಕ ಪ್ರಕಟಿಸಲಾಗುತ್ತದೆ. ಪರೀಕ್ಷೆಗೆ ಹತ್ತು ದಿನಗಳ ಕಾಲ ಇರುವಾಗಲೇ ವೇಳಾಪಟ್ಟಿ ಪ್ರಕಟ ಮಾಡುತ್ತೇವೆ. ಪರೀಕ್ಷಾ ಕೊಠಡಿಯಲ್ಲಿ ಸಾಮಾನ್ಯವಾಗಿ 24 ವಿದ್ಯಾರ್ಥಿಗಳು ಕೂರುತ್ತಾರೆ. ಆದರೆ, ಆ ಸಂಖ್ಯೆಯನ್ನು ಕಡಿಮೆ ಮಾಡಲಿದ್ದೇವೆ ಎಂದರು.
ಮಾಸ್ಕ್ ಹಾಕಿಕೊಂಡು ಮಕ್ಕಳು ಪರೀಕ್ಷೆ ಬರೆಯಬೇಕು ಎಂದಿರುವ ಅವರು, ಹೊಸ ಪಠ್ಯಪುಸ್ತಕ ಬರುವುದು ತಡವಾಗಬಹುದು. ಜೂನ್ನಲ್ಲಿ ಅವುಗಳ ವಿತರಣೆಗೊಳ್ಳಬೇಕಾಗಿತ್ತು. ಆದರೆ, ಕೊರೊನಾದಿಂದಾಗಿ ಅದು ಸಾಧ್ಯವಾಗಿಲ್ಲ. ಹೀಗಾಗಿ 9ನೇ ತರಗತಿ ಮಕ್ಕಳು ತಮ್ಮ 8ನೇ ತರಗತಿಯ ಪುಸ್ತಕವನ್ನ ಜೂನಿಯರ್ಸ್ಗೆ, 10 ನೇ ತರಗತಿಯವರು 9ನೇ ತರಗತಿಯ ಮಕ್ಕಳಿಗೆ ಪುಸ್ತಕ ನೀಡುವಂತೆ ಸಲಹೆ ನೀಡಿದರು.